×
Ad

ಬೆಳ್ಳಾರೆ: ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಮಾರಣಾಂತಿಕ ಹಲ್ಲೆ; 8 ಮಂದಿ ಆರೋಪಿಗಳ ಸೆರೆ

Update: 2022-07-20 16:00 IST

ಸುಳ್ಯ, ಜು. 20: ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನಿಗೆ ತಂಡವೊಂದು ಮಾರಣಾಂತಿಕವಾಗಿ ಹಲ್ಲೆಗೈದಿರುವ ಘಟನೆ ತಾಲೂಕಿನ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದಿರುವುದು ವರದಿಯಾಗಿದೆ.

ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರು ನಿವಾಸಿ ಮಸೂದ್ (18) ಹಲ್ಲೆಗೊಳಗಾದ ಯುವಕ. ದುಷ್ಕರ್ಮಿಗಳು ಸೋಡಾ ಬಾಟಲಿಯಿಂದ ಹಲ್ಲೆಗೈದಿರುವುದರಿಂದ ಮಸೂದ್ ತಲೆಗೆ ತೀವ್ರತರದ ಗಾಯಗಳಾಗಿವೆ. ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಸ್ಥಿತಿ ಚಿಂತಾ ಜನಕವಾಗಿದೆ ಎಂದು ಹೇಳಲಾಗಿದೆ.

ಎಂಟು ಮಂದಿಯ ಬಂಧನ: ಹಲ್ಲೆಯ ಸಂದರ್ಭ ಮಸೂದ್ ಜತೆಗಿದ್ದ ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ಪೆಲತ್ತಡ್ಕ ನಿವಾಸಿ ಇಬ್ರಾಹೀಂ ಶಾನಿಫ್ ಎಂಬವರು ನೀಡಿರುವ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಆರೋಪಿಗಳಾದ ಸುನೀಲ್, ಸುಧೀರ್, ಶಿವ, ಸದಾಶಿವ, ರಂಜಿತ್, ಅಭಿಲಾಷ್, ಜಿಮ್ ರಂಜಿತ್ ಹಾಗೂ ಭಾಸ್ಕರ ಎಂಬವರನ್ನು ಪೊಲೀಸರು ಬುಧವಾರ ಬಂಧಿ ಸಿದ್ದಾರೆ. ಇವರೆಲ್ಲರೂ ಸ್ಥಳೀಯ ನಿವಾಸಿಗಳಾಗಿದ್ದಾರೆ. ಇವರ ವಿರುದ್ಧ ಕಲಂ: ೧೪೩, ೧೪೭, ೩೨೩, ೩೨೪, ೩೦೭ ಜೊತೆಗೆ ೧೪೯ ಐಪಿಸಿ ಸೆಕ್ಷನ್‌ನಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೃತ್ಯವು ಜು 19ರಂದು ರಾತ್ರಿ 11 ಗಂಟೆ ಸುಮಾರಿಗೆ  ಕಳಂಜ ಗ್ರಾಮದ ವಿಷ್ಣು ನಗರ ಎಂಬಲ್ಲಿ ನಡೆದಿದೆ.  

ಮಸೂದ್ ತಿಂಗಳ ಹಿಂದೆಯಷ್ಟೇ ಕಾಸರಗೋಡಿನಿಂದ ಕಳಂಜದಲ್ಲಿರುವ ಅಜ್ಜ ಅಬ್ಬು ಎಂಬವರ ಮನೆಗೆ ಬಂದು ನೆಲೆಸಿದ್ದು, ಇಲ್ಲೇ ಸ್ಥಳೀಯವಾಗಿ ಕೂಲಿ ಕೆಲಸ ಮಾಡಿ ಕೊಂಡಿದ್ದರೆನ್ನಲಾಗಿದೆ. ಮಂಗಳವಾರ ಸಂಜೆ ವಿಷ್ಣು ನಗರದಲ್ಲಿ ಖಾಸಗಿ ಸಮಾರಂಭವೊಂದರಲ್ಲಿ ಭಾಗವಹಿಸಲು ಮಸೂದ್ ತೆರಳಿದ್ದು, ಈ ವೇಳೆ ಅಲ್ಲಿ ಸಮೀಪದ ಅಂಗಡಿಯ ಬಳಿ ಮೈ ತಾಗಿತು ಎಂಬ ಕ್ಷುಲ್ಲಕ ಕಾರಣಕ್ಕೆ ಇವರ ಮಧ್ಯೆ ಮಾತಿನ ಚಕಮಕಿ, ಹೊಡೆದಾಟ ನಡೆದಿದೆ ಎನ್ನಲಾಗಿದೆ. ಈ ವೇಳೆ ಸುಧೀರ್‌ಗೆ ಮಸೂದ್ ಬಾಟಲಿ ತೋರಿಸಿ ಜೀವ ಬೆದರಿಕೆ ಹಾಕಿದ್ದರೆನ್ನಲಾಗಿದೆ.

ಇದೇ ವಿಚಾರವಾಗಿ ರಾತ್ರಿ ೧೦:೩೦ರ ಸುಮಾರಿಗೆ ಆರೋಪಿಗಳಾದ ಸುನೀಲ್ ಹಾಗೂ ಅಭಿಲಾಷ್ ಎಂಬವರು ದೂರುದಾರ ಇಬ್ರಾಹಿಂ ಶಾನಿಫ್‌ರನ್ನು ಸಂಪರ್ಕಿಸಿ ಸುಧೀರ್ ಮೇಲೆ ಮಸೂದ್ ಹಲ್ಲೆ ನಡೆಸಿದ್ದಾನೆ, ಇದನ್ನು ರಾಜಿ ಮಾತುಕತೆ ಮೂಲಕ ಮುಗಿಸೋಣ. ಅದಕ್ಕಾಗಿ ಮಸೂದ್‌ನನ್ನು ವಿಷ್ಣು ನಗರಕ್ಕೆ ಕರೆದುಕೊಂಡು ಬರುವಂತೆ ಸೂಚಿಸಿದ್ದಾರೆ.

ಅದರಂತೆ ರಾತ್ರಿ ೧೧ ಗಂಟೆ ಸುಮಾರಿಗೆ ಮಸೂದ್‌ರನ್ನು ಕರಕೊಂಡು ಶಾನಿಫ್ ವಿಷ್ಣು ನಗರಕ್ಕೆ ಬಂದಿದ್ದಾರೆ. ಈ ವೇಳೆ ಎಂಟು ಮಂದಿ ಆರೋಪಿಗಳು ಏಕಾಏಕಿ ಮಸೂದ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಆರೋಪಿ ಅಭಿಲಾಷ್ ಸೋಡಾ ಬಾಟಲಿಯಿಂದ ಮಸೂದ್‌ರ ತಲೆಗೆ ಬಲವಾಗಿ ಹೊಡೆ ದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬಳಿಕ ಮಸೂದ್ ಹಾಗೂ ಶಾನಿಫ್ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಬೇರೆ ಬೇರೆ ದಿಕ್ಕಿಗೆ ಅಲ್ಲಿಂದ ಓಡಿದ್ದಾರೆ. ಸ್ವಲ್ಪಹೊತ್ತಿನ ಬಳಿಕ ಶಾನಿಫ್ ಹಾಗೂ ಆತನ ಸ್ನೇಹಿತರು ಮಸೂದ್‌ಗಾಗಿ ಹುಡುಕಾಟ ನಡೆಸಿದ್ದು, ತಡರಾತ್ರಿ  ೧:೩೦ರ  ವೇಳೆ ಅದೇ ಪರಿಸರದ ಅಬೂಬಕರ್ ಎಂಬವರ ಮನೆಯ ಬಾವಿಯ ಬಳಿ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಸೂದ್ ಪತ್ತೆಯಾಗಿದಾರೆ. ತಕ್ಷಣ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಗಂಭೀರಾವಸ್ಥೆಯಲ್ಲಿದ್ದ  ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ. 
ಈ ಬಗ್ಗೆ ಬೆಳ್ಳಾರೆ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ. 

ಗಾಯಾಳು ಮಸೂದ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News