ಮಂಗಳೂರು | ಮಳೆ ಹಾನಿ ಪ್ರದೇಶಗಳಿಗೆ ಬಿ.ಕೆ.ಹರಿಪ್ರಸಾದ್ ಭೇಟಿ, ಪರಿಶೀಲನೆ
ಮಂಗಳೂರು, ಜು.20: ಇತ್ತೀಚೆಗೆ ಸುರಿದ ಭಾರೀ ಮಳೆಗೆ ಪ್ರಾಕೃತಿಕ ತೊಂದರೆಗೆ ಒಳಗಾದ ಮಂಗಳೂರಿನ ಉರ್ವಾ ಸ್ಟೋರ್ ಸುಂಕದಕಟ್ಟೆ ಹಾಗೂ ಕಣ್ಣೂರ್ ವಾರ್ಡಿನ ಬಳ್ಳೂರು ಗುಡ್ಡೆ ಪ್ರದೇಶಗಳಿಗೆ ಇಂದು ವಿಧಾನ ಪರಿಷತ್‌ನ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
ಮಂಗಳೂರು ಭಾಗದಲ್ಲಿ ಸುರಿದ ವಿಪರೀತ ಮಳೆಯಿಂದಾಗಿ ಹಲವಾರು ಕಡೆ ಜನರಿಗೆ ಬಹಳಷ್ಟು ತೊಂದರೆಯಾಗಿದೆ. ಮನೆಗಳು ಕುಸಿದು ಜನರು ಸಂಬಧಿಕರ ಮನೆಗಳಲ್ಲಿ ವಾಸ ಮಾಡುವಂತಹ ಸ್ಥಿತಿ ಉಂಟಾಗಿದೆ. ಗುಡ್ಡ ಕುಸಿದು ಜನರು ಮನೆಗಳನ್ನು ಬಿಟ್ಟು ಬೇರೆ ಕಡೆ ಆಶ್ರಯಿಸುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಸರಿಯಾದ ಕ್ರಮ ಕೈಗೊಳ್ಳಬೇಕು. ಸಂತ್ರಸ್ತರಿಗೆ ಇನ್ನೂ ಕೂಡ ಪರಿಹಾರಧನ ಕೈ ಸೇರಿಲ್ಲ. ಶೀಘ್ರದಲ್ಲಿ ತೊಂದರೆಯಾದವರಿಗೆ ಪುನರ್ವಸತಿ ಸೌಕರ್ಯ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ವೈಯಕ್ತಿಕ ನೆಲೆಯಲ್ಲಿ ಹರಿಪ್ರಸಾದ್ ರವರು ಸುಂಕದಕಟ್ಟೆಯ ಮನೆ ಕಳೆದುಕೊಂಡ ಸಂತ್ರಸ್ತೆ ಪದ್ಮಾವತಿಯವರಿಗೆ ಸಹಾಯಧನ ನೀಡಿದರು.
ಇದೇ ಸಂದರ್ಭದಲ್ಲಿ ಅವರು ಪಡೀಲ್ ರೈಲ್ವೆ ಅಂಡರ್ ಪಾಸ್ ಬಳಿ ಮತ್ತು ಅಳಪೆ ರಾಷ್ಟ್ರೀಯ ಹೆದ್ದಾರಿ ರೈಲ್ವೆ ಅಂಡರ್ ಪಾಸ್ ಬಳಿ ಭೇಟಿ ನೀಡಿ ಅಲ್ಲಿ ಮಳೆಗಾಲದಲ್ಲಿ ನೀರು ನಿಂತು ಜನರಿಗೆ ತೊಂದರೆಯಾಗುವುದನ್ನು ಪರಿಶೀಲಿಸಿದರು.
ಮಾಜಿ ಶಾಸಕ ಜೆ.ಆರ್.ಲೋಬೊ, ಕಾರ್ಪೊರೇಟರ್ ಗಳಾದ ಶಶಿಧರ್ ಹೆಗ್ಡೆ, ಅಬ್ದುಲ್ ರವೂಫ್, ಅಶ್ರಫ್ ಬಜಾಲ್, ಪಕ್ಷದ ಮುಖಂಡರಾದ ಪ್ರಕಾಶ್ ಸಾಲ್ಯಾನ್, ಅಬ್ದುಲ್ ಸಲಿಂ, ಲುಕ್ಮಾನ್ ಬಂಟ್ವಾಳ, ಟಿ.ಕೆ.ಸುಧೀರ್, ಚಿತ್ತರಂಜನ್ ಶೆಟ್ಟಿ, ರಫೀಕ್ ಕಣ್ಣೂರ್, ಸೇಸಮ್ಮ, ಭರತೇಶ್ ಅಮೀನ್, ಚೇತನ್ ಕುಮಾರ್, ಮಲ್ಲಿಕಾರ್ಜುನ, ರೂಪಾ ಚೇತನ್, ಶರೀಫ್, ರಮಾನಂದ ಪೂಜಾರಿ, ಮಂಜುಳಾ ನಾಯಕ್, ಸಮರ್ಥ್ ಭಟ್, ತಮ್ಮನ್ನ, ರಾಬಿನ್, ಲಕ್ಷ್ಮಣ್ ಶೆಟ್ಟಿ, ಶಾನ್ ಡಿಸೋಜ, ಹುಸೈನ್, ಯೋಗೀಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.