×
Ad

ತುಳು ಅಕಾಡಮಿಯಿಂದ 2021ನೇ ಸಾಲಿನ ಪ್ರಶಸ್ತಿ ಪ್ರಕಟ

Update: 2022-07-21 13:56 IST

ಮಂಗಳೂರು, ಜು.21: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ 2021ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು ಜಾನಪದ ಕ್ಷೇತ್ರದ ಸಾಧಕ ಸಂಜೀವ ಬಂಗೇರ ತಲಪಾಡಿ, ನಿರ್ದೇಶಕ, ನಿರ್ಮಾಪಕ ಕೃಷ್ಣಪ್ಪ ಉಪ್ಪೂರು ಮತ್ತು ಸಾಹಿತಿ ಉಲ್ಲಾಸ ಕೃಷ್ಣ ಪೈ ಪುತ್ತೂರು ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಗುರುವಾರ ಮಂಗಳೂರಿನ ಪತ್ರಿಕಾಭವನದಲ್ಲಿ ಅಕಾಡಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಿಸಿದರು.

ಗೌರವ ಪ್ರಶಸ್ತಿಗೆ ಮೂವರು ಹಿರಿಯ ಸಾಧಕರನ್ನು ಆಯ್ಕೆ ಮಾಡಲಾಗಿದೆ. ವಿಶೇಷ ಬಾಲ ಪ್ರತಿಭಾ ಪುರಸ್ಕಾರ, ಯುವ ಸಾಧಕ ಪುರಸ್ಕಾರ, ಮಾಧ್ಯಮ ಪುರಸ್ಕಾರ, ಸಂಘಟನಾ ಪುರಸ್ಕಾರಕ್ಕೆ ರಾಜ್ಯ, ಹೊರ ರಾಜ್ಯ ಮತ್ತು ಹೊರ ರಾಷ್ಟ್ರ ಮಟ್ಟದಲ್ಲಿ ವಿಶೇಷವಾಗಿ ಗುರುತಿಸಿ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಪುಸ್ತಕ ಬಹುಮಾನ

ಕವನ ಸಂಕಲನ ವಿಭಾಗದಲ್ಲಿ ಯೋಗೀಶ್ ಕಾಂಚನ್ ಬೈಕಂಪಾಡಿ ಅವರ ‘ತಂಞನ ಬೊಳ್ಳಿ’, ನಾಟಕ ವಿಭಾಗದಲ್ಲಿ ಅಕ್ಷತಾ ರಾಜ್ ಪೆರ್ಲ ಅವರ ‘ಬೇಲಿ, ಸಾಪೊದ ಕಣ್ಣ್’, ಅಧ್ಯಯನ ವಿಭಾಗದಲ್ಲಿ ಡಾ ಅಶೋಕ ಆಳ್ವ ಸುರತ್ಕಲ್ ಅವರ ‘ತುಳುನಾಡಿನ ಪ್ರಾಣಿ ಜಾನಪದ’ ಆಯ್ಕೆಯಾಗಿದೆ.

ವಿಶೇಷ ಪುರಸ್ಕಾರ

ಬಾಲ ಪ್ರತಿಭಾ ಪುರಸ್ಕಾರಕ್ಕೆ ನಿರೀಕ್ಷಾ ಕೋಟ್ಯಾನ್ ಕೋಡಿಕೆರೆ, ಜೀವಿಕಾ ಶೆಟ್ಟಿ ಮುಂಬೈ, ಸಾನ್ವಿ ಯುಎಸ್‌ಎ, ಯುವ ಸಾಧಕ ಪುರಸ್ಕಾರಕ್ಕೆ ಹರಿಪ್ರಸಾದ್ ನಂದಳಿಕೆ, ಚಿನ್ಮಯಿ ಮೋಹನ್ ಸಾಲ್ಯಾನ್ ಮುಂಬೈ, ರಮಾನಂದ ಶೆಟ್ಟಿ ಒಮಾನ್, ಮಾಧ್ಯಮ ಪುರಸ್ಕಾರಕ್ಕೆ ಶಶಿ ಬಂಡಿಮಾರ್, ರೋನ್ಸ್ ಬಂಟ್ವಾಳ್ ಮುಂಬೈ ಆಯ್ಕೆಯಾಗಿದ್ದಾರೆ. ಸಂಘಟನಾ ಪುರಸ್ಕಾರಕ್ಕೆ ಜೈ ತುಳುನಾಡು, ತುಳು ಕೂಟ ಫೌಂಡೇಶನ್ ನಾಲಸೋಪಾರ ಮುಂಬೈ, ತುಳುಕೂಟ ಖತರ್ ಆಯ್ಕೆಯಾಗಿವೆ.

ಗೌರವ ಪ್ರಶಸ್ತಿ 50,000 ರೂ. ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ, ಪುಸ್ತಕ ಬಹುಮಾನ 25,000 ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿರುತ್ತದೆ. ವಿಶೇಷ ಪುರಸ್ಕಾರ 10,000 ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿರುತ್ತದೆ ಎಂದು ದಯಾನಂದ ಕತ್ತಲ್‌ಸಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಕಾಡಮಿಯ ಸದಸ್ಯರಾದ ಲೀಲಾಕ್ಷ ಕರ್ಕೇರ, ಕಾಂತಿ ಶೆಟ್ಟಿ ಬೆಂಗಳೂರು, ನಾಗೇಶ್ ಕುಲಾಲ್ ಕುಳಾಯಿ, ರಿಜಿಸ್ಟ್ರಾರ್ ಕವಿತಾ ಉಪಸ್ಥಿತರಿದ್ದರು.


*ಜಾನಪದ ಕ್ಷೇತ್ರದ ಸಾಧಕ ಸಂಜೀವ ಬಂಗೇರ

ಸಂಜೀವ ಬಂಗೇರ ತಲಪಾಡಿ ದೈವಗಳ ನೇಮಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಜತೆಗೆ ಪಾಡ್ದನ ಗಾಯಕರಾಗಿದ್ದಾರೆ. ತುಳುನಾಡಿನ ಪ್ರಸಿದ್ದ ಕ್ಷೇತ್ರಗಳಾದ ಪಾವೂರು, ಬೆಳ್ಮ ದಬ್ಬೆಲಿ, ಕುದುಕೋಳಿ, ಕುರ್ನಾಡು ಗುರುಪುರ, ಮಂಜೇಶ್ವರ, ವರೇಕಳ, ಕೋಟ್ರಗುತ್ತು, ಪಟ್ಟೋರಿಗಳಲ್ಲಿ ಹಲವಾರು ವರ್ಷಗಳಿಂದ ಸೇವೆ ಮಾಡಿಕೊಂಡು ಬಂದಿದ್ದಾರೆ. ಉದ್ಯಾವರ ಅರಸು ಮಂಜಿಷ್ಣಾರ್ ಮಾಡದ ಅರಸುದೈವಗಳ ಪಾಡ್ದನ, (ಮೂಡದಾಯ) ವೈದ್ಯನಾಥ ದೈವದ, ಜುಮಾದಿ, ಜಾರಂದಾಯ, ಪಂಜುರ್ಲಿ, ಉಗೆದಲ್ತಾಯ, ಬಂಟ ಹೀಗೆ ಅನೇಕ ರಾಜದೈವಗಳ ನೇಮಕಟ್ಟುವ ಸೇವೆ ಮಾಡಿದ್ದಾರೆ. ಹೊಸ ಪೀಳಿಗೆಗೆ ದೈವರಾಧಾನೆಯ ಪಾಡ್ದನ ಸಾಹಿತ್ಯ, ನೇಮದ ಪರಂಪರೆಗಳನ್ನು ಬೋಧಿಸುತ್ತಿದ್ದಾರೆ. ಅರ್ಕುಳ ತುಪ್ಪೆಕಲ್ಲು ಬಂಗೇರ ಮನೆತನದ ಪಂಜುರ್ಲಿ ದೈವದ ಪಾತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

*ಕೃಷ್ಣಪ್ಪ ಉಪ್ಪೂರು

ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವ ಇವರು ಚಲನಚಿತ್ರಗಳಲ್ಲಿ ವೃತ್ತಿಪರರಾಗಿ ಹಾಗೂ ನಾಟಕಗಳಲ್ಲಿ ಹವ್ಯಾಸಿ ಕಲಾವಿದನಾಗಿ ಕಲಾ ಸೇವೆ ಮಾಡಿದ್ದಾರೆ. ಇವರ ವಿಶೇಷ ಸಾಮಾಜಿಕ ಪರಿಣಾಮ ಬೀರಿದ ‘ಮಾರಿಬಲೆ’ ತುಳು ಚಿತ್ರಕ್ಕೆ 1997-98ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಇವರು ಕರ್ನಾಟಕ ಚಲನಚಿತ್ರ ಕೈಗಾರಿಕಾ ಅಭಿವೃದ್ಧಿ ನಿಗಮದ ನೋಂದಾಯಿತ ನಿರ್ದೇಶಕರಾಗಿದ್ದು ಹಲವಾರು ತುಳು ಸಿನೆಮಾ,ನಾಟಕಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಪಶ್ಚಿಮಘಟ್ಟ ಅಭಿವೃದ್ಧಿ ಯೋಜನೆಯಡಿಯಲ್ಲಿ ಜಲಾನಯನ, ಆರೋಗ್ಯ, ಶಿಕ್ಷಣ, ಮೀನುಗಾರಿಕೆ, ಸಾರಿಗೆ, ಪಶು ಸಂಗೋಪನೆ, ಪ್ರವಾಸೋದ್ಯಮ ವಿಷಯಗಳ ಬಗ್ಗೆ ಹಾಗೂ ತುಳುನಾಡಿನ ಅನೇಕ ವಿಷಯಗಳ ಬಗ್ಗೆ ಸಾಕ್ಷಚಿತ್ರ ನಿರ್ದೇಶಿಸಿ ನಿರ್ಮಿಸಿದ್ದಾರೆ. ಅವರು ನಿರ್ಮಿಸಿ ನಿರ್ದೇಶಿಸಿದ ಸಾಕ್ಷಚಿತ್ರಗಳು ದೂರದರ್ಶನ ಚಂದನದಲ್ಲಿ ಪ್ರಸಾರಗೊಂಡಿವೆ. ಇವರು ರಚಿಸಿ ನಿರ್ದೇಶಿಸಿದ ‘ನಂಬುಲೆ ನಂಬಾದ್ ಕೊರ್ಪೆ’ ನಾಟಕ ಅಖಿಲ ಭಾರತ ತುಳು ನಾಟಕ ಸ್ಪರ್ಧೆಯಲ್ಲಿ ದ್ವಿತೀಯ ಪ್ರಶಸ್ತಿಯ ಜತೆಗೆ ಅಭಿನಯ ಮತ್ತು ನಿರ್ದೇಶನದ ಅವಳಿ ಪ್ರಶಸ್ತಿ ಪಡೆದುಕೊಂಡಿದೆ.

*ಉಲ್ಲಾಸ ಕೃಷ್ಣ ಪೈ ಪುತ್ತೂರು

ವೃತ್ತಿಯಲ್ಲಿ ಗೌರವ ಸಂದರ್ಶಕ ಶಿಕ್ಷಕರಾಗಿರುವ ಇವರು ಮೂರು ದಶಕಗಳಿಂದ ಉಚಿತ ಸೇವೆ ಮಾಡುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ 6 ಭಾಷೆಗಳಲ್ಲಿ ಮಕ್ಕಳ ಸಾಹಿತ್ಯ ರಚಿಸಿದ್ದಾರೆ. 25ಕ್ಕೂ ಅಧಿಕ ಭಾಷೆಗಳಲ್ಲಿ ಶಿಶುಪ್ರಾಸ, ಅಭಿನಯ ಗೀತೆಗಳನ್ನು ಮಕ್ಕಳಿಗೆ ಕಲಿಸಿಕೊಡುತ್ತಿದ್ದಾರೆ. 20ಕ್ಕೂ ಮಿಕ್ಕಿ ತುಳು ವಿಕಾಸಮಾಲೆಯ ಕೃತಿಗಳನ್ನು, ಇತರ ಭಾಷೆಯಲ್ಲಿ ನೂರಾರು ಕೃತಿಗಳನ್ನು ರಚಿಸಿದ್ದಾರೆ. ಕಡ್ಲೆಪುಂಡಿ, ಪುಳಿಂಕೊಟೆ ಬಾಂಬೆ ಮಿಠಾಯಿ, ಸಾಂತಾಣಿ, ಚಿತ್ರಾಕ್ಷರ ಶಬ್ದಬಂಧ, ಅಕ್ರೋಟು, ಚಿಲಿಪಿಲಿ ಗುರ್ಬಿ ಪಕ್ಕಿ, ಕಿಟ್ಟಣ್ಣ ಕುರ್ಲರಿ, ಮೋಕೆದ ಜೋಸ್ತಿ, ಕಮಲನ ಕಿಲಕಿಲ ಇವರ ತುಳು ವಿಕಾಸ ಮಾಲೆಯ ಕೃತಿಗಳು. ಅಕ್ಷರ ಮೋಜು, ಅಕ್ಷರ ವಿನೋದ, ಮೋಜಿನ ಕಲಿಕೆ, ಅಕ್ಷರ ಬರಿ ಚಿತ್ರ ಕಲಿ, ಹಾಡು ಬನ್ನಿ ಮಕ್ಕಳೆ ಮುಂತಾದವು ಇತರ ಕೃತಿಗಳು. ಶಿಕ್ಷಣ ಸಿರಿ ರಾಜ್ಯ ಪ್ರಶಸ್ತಿ, ಆದರ್ಶ ಶಿಕ್ಷಕ ಪ್ರಶಸ್ತಿ, ವಿಶ್ವೇಶ್ವರಯ್ಯ ರಾಜ್ಯ ಪ್ರಶಸ್ತಿ, ಕರ್ನಾಟಕ ಬಾಲವಿಕಾಸ ಅಕಾಡಮಿಯ ಪ್ರಶಸ್ತಿ, ಪುಟಾಣಿ ರತ್ತನ ಪ್ರಶಸ್ತಿ, ಯುವ ಸಾಧಕ ಪ್ರಶಸ್ತಿಯ ಗೌರವ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News