ಉತ್ತರಪ್ರದೇಶ: ಜಿ ಎಸ್ ಟಿ ಹೆಚ್ಚಳದ ವಿರುದ್ಧ ವರದಿ ಮಾಡದಂತೆ ಪತ್ರಕರ್ತರಿಗೆ ಬೆದರಿಕೆ: ಆರೋಪ

Update: 2022-07-21 17:18 GMT
Cameraman Vishal Stonewall (left) and reporter Shakib Rangrezz (right). Photos: Facebook.

ಲಕ್ನೋ: ಉತ್ತರ ಪ್ರದೇಶ ಮೂಲದ ಮಾಧ್ಯಮ ಸಂಸ್ಥೆ ಚಲ್‌ಚಿತ್ರ ಅಭಿಯಾನ್‌ನಲ್ಲಿ ಕೆಲಸ ಮಾಡುವ ಇಬ್ಬರು ವರದಿಗಾರರಿಗೆ, ಜುಲೈ 20ರಂದು, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರದಲ್ಲಿನ ಇತ್ತೀಚಿನ ಹೆಚ್ಚಳದ ಪರಿಣಾಮಗಳ ಕುರಿತು ವರದಿ ಮಾಡಿದ್ದಕ್ಕಾಗಿ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ.

ವರದಿಗಾರರಾದ ಶಾಕಿಬ್ ರಾಂಗ್ರೆಜ್ ಮತ್ತು ವಿಶಾಲ್ ಸ್ಟೋನ್‌ವಾಲ್ ಉತ್ತರ ಪ್ರದೇಶದ ಬಾಗ್‌ಪತ್‌ನ ಕಿಶನ್‌ಪುರ್ ಬರಲ್ ಗ್ರಾಮದಲ್ಲಿ ವರದಿಯನ್ನು ಮಾಡುತ್ತಿದ್ದಾಗ ವ್ಯಕ್ತಿಯೊಬ್ಬರು ಅವರ ಬಳಿಗೆ ಬಂದು ಅವರ ಉಪಕರಣಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಅಲ್ಲದೆ, ಅಲ್ಲಿನ ಸ್ಥಳೀಯ ರೈತರೊಂದಿಗೆ ಮಾತನಾಡಿದ್ದಕ್ಕಾಗಿ ಬೆದರಿಕೆಯನ್ನು ಹಾಕಿದ್ದಾರೆ ಎಂದು ವರದಿಯಾಗಿದೆ.

ಚಲ್‌ಚಿತ್ರ ಅಭಿಯಾನ್ ಸಂಸ್ಥಾಪಕ ನಕುಲ್ ಸಿಂಗ್ ಸಾಹ್ನಿ ಅವರು ಘಟನೆಯ ಬಗ್ಗೆ ಟ್ವಿಟ್ಟರ್‌ ನಲ್ಲಿ ಮಾಹಿತಿ ಹಂಚಿಕೊಂಡಿದ್ದು,  "ಇದು ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಗ್ರೌಂಡ್‌ ರಿಪೋರ್ಟ್‌ ಗಳ ಸ್ಥಿತಿ" ಎಂದು ಬರೆದಿದ್ದಾರೆ.

ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತನಾಗಿದ್ದು, ಆತ ಹಿಂಸಾಚಾರಕ್ಕೆ ಇಳಿದಿದ್ದಾನೆ ಎಂದು ಸಾಹ್ನಿ ತಮ್ಮ ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ.

ಸಾಹ್ನಿಯ ಟ್ವೀಟ್‌ಗೆ ಭಾಗ್ಪತ್ ಪೊಲೀಸರು ಪ್ರತಿಕ್ರಿಯಿಸಿ, ರಾಮಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚಿಸಿದ್ದು,  "ನಿಯಮಗಳ ಪ್ರಕಾರ" ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ತಮ್ಮ ಸಂಸ್ಥೆಯೊಂದಿಗೆ ಕೆಲಸ ಮಾಡುವ ವರದಿಗಾರರನ್ನು ಈ ರೀತಿ ಗುರಿಯಾಗಿಸಿಕೊಂಡಿರುವುದು ಇದೇ ಮೊದಲಲ್ಲ. ಆದರೆ, ಇದು ಪದೇ ಪದೇ ಸಂಭವಿಸುತ್ತಿರುವುದರಿಂದ ಇದನ್ನು ಬಹಿರಂಗಪಡಿಸಿರುವುದಾಗಿ ಸಾಹ್ನಿ ಅವರು ನ್ಯೂಸ್‌ಲಾಂಡ್ರಿಯೊಂದಿಗೆ ಹೇಳಿದ್ದಾರೆ. 

ಚಲ್‌ಚಿತ್ರ ಅಭಿಯಾನದಲ್ಲಿ ಕೆಲಸ ಮಾಡುವ ಅನೇಕ ವರದಿಗಾರರು ದುರ್ಬಲ ಅಲ್ಪಸಂಖ್ಯಾತ ಸಮುದಾಯಗಳಿಂದ ಬಂದವರು ಎಂಬ ಅಂಶವು ಅವರನ್ನು ಸುಲಭವಾಗಿ ಗುರಿಪಡಿಸಿದೆ ಎಂದು ಅವರು ಹೇಳಿದ್ದಾರೆ.

ಬೆದರಿಕೆಗೊಳಗಾದ ವರದಿಗಾರರನ್ನು ವಿಶಾಲ್ ಸ್ಟೋನ್‌ವಾಲ್‌ ಹಾಗೂ ರಂಗ್ರೆಝ್‌ ಎಂದು ಗುರುತಿಸಲಾಗಿದೆ. ಸ್ಟೋನ್‌ವಾಲ್, ಸ್ವತಃ, ಮಾಜಿ ಇಟ್ಟಿಗೆ ಗೂಡು ಕೆಲಸಗಾರರಾಗಿದ್ದರೆ, ರಂಗ್ರೆಝ್‌ ಎಂಬವರು 2013 ರ ಮುಜಫರ್‌ನಗರದ ಕೋಮು ಗಲಭೆಯ ಸಂತ್ರಸ್ತ ಎಂದು ತಿಳಿದು ಬಂದಿದೆ.

ಇಬ್ಬರು ವರದಿಗಾರರು ಜಿಎಸ್‌ಟಿ ಹೆಚ್ಚಳದ ಪರಿಣಾಮಗಳ ಕುರಿತು ಸ್ಥಳೀಯ ಗ್ರಾಮಸ್ಥರೊಂದಿಗೆ ಮಾತನಾಡುತ್ತಿದ್ದಾಗ ವ್ಯಕ್ತಿಯೊಬ್ಬರು ಅವರ ಕ್ಯಾಮರಾ ಮತ್ತು ಮೈಕ್ರೊಫೋನ್ ಕಸಿದುಕೊಳ್ಳಲು ಪ್ರಯತ್ನಿಸಿದರು ಎಂದು ರಂಗ್ರೆಝ್ ಸುದ್ದಿವಾಹಿನಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News