ಅರುಣಾಚಲದಲ್ಲಿ 19 ಕಾರ್ಮಿಕರ ನಾಪತ್ತೆ: ಎನ್‌ಡಿಆರ್‌ಎಫ್, ವಾಯುಪಡೆಯಿಂದ ತೀವ್ರ ಶೋಧ ಕಾರ್ಯಾಚರಣೆ‌

Update: 2022-07-21 17:39 GMT
Photo : NDTV

ಗುವಾಹಟಿ, ಜು.21:  ಚೀನಾ ಗಡಿಗೆ ಸಮೀಪದಲ್ಲಿರುವ ರಾಜ್ಯವಾದ ಅರುಣಾಚಲ ಪ್ರದೇಶದಲ್ಲಿ ಕಳೆದ ಎರಡು ವಾರಗಳಲ್ಲಿ ಅಸ್ಸಾಂನ 19 ಮಂದಿ ರಸ್ತೆ ಕಾಮಗಾರಿ ಕಾರ್ಮಿಕರು ನಾಪತ್ತೆಯಾಗಿದ್ದಾರೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ತಂಡ (ಎನ್‌ಡಿಆರ್‌ಎಫ್) ಹಾಗೂ  ಭಾರತೀಯ ವಾಯುಪಡೆ  ಕಾಣೆಯಾಗಿರುವ ಕಾರ್ಮಿಕರ ಶೋಧ ಕಾರ್ಯಾಚರಣೆಯಲ್ಲಿ ನಿರತವಾಗಿವೆ ಎಂದು ಮೂಲಗಳು ತಿಳಿಸಿವೆ.

ಭಾರತ-ಚೀನಾ ಗಡಿಯಲ್ಲಿರುವ ಅರುಣಾಚಲ ಪ್ರದೇಶದ ಕುರುಂಗ್ ಕುಮೆಯಿ ಜಿಲ್ಲೆಯ ಸಮೀಪ ಈ ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಕಳೆದ ಸೋಮವಾರ ಶೋಧ ಕಾರ್ಯಾಚರಣೆ  ಆರಂಭವಾಗಿತ್ತಾದರೂ, ಇದುವರೆಗೂ  ಈ 19 ಮಂದಿಯ ಸುಳಿವೇ ಲಭ್ಯವಾಗಿಲ್ಲವೆಂದು ತಿಳಿದುಂದಿದೆ.

ಕಾರ್ಮಿಕರ ಶೋಧಕ್ಕಾಗಿ ಎನ್‌ಡಿಆರ್‌ಎಪ್ ತಂಡವನ್ನು ರವಾನಿಸಲಾಗಿದೆ ಹಾಗೂ  ಸ್ಥಳೀಯಾಡಳಿತದ ಕೋರಿಕೆಯಂತೆ ಭಾರತೀಯ ವಾಯುಪಡೆ ಕೂಡಾ ತನ್ನ ಹೆಲಿಕಾಪ್ಟರ್‌ಗಳನ್ನು ಕೂಡಾ ನಾಪತ್ತೆಯಾದವರ ಶೋಧ ಕಾರ್ಯಾಚರಣೆಗೆ ನಿಯೋಜಿಸಿದೆ.
ನಾಪತ್ತೆಯಾದ 19 ಮಂದಿ ಕಾರ್ಮಿಕರು ಅಸ್ಸಾಂನಿಂದ ಬಂದ ವಲಸಿಗ ಕಾರ್ಮಿಕರಾಗಿದ್ದು ಅವರೆಲ್ಲರೂ  ಗಡಿ ರಸ್ತೆ ಸಂಘಟನೆ (ಬಿಆರ್‌ಓ) ನಡೆಸುವ ರಸ್ತೆ ಕಾಮಗಾರಿ ಯೋಜನೆಗಳಲ್ಲಿ ದುಡಿಯುತ್ತಿದ್ದವರಾಗಿದ್ದಾರೆ.

ಬಕ್ರೀದ್ ಹಬ್ಬದ ಆಚರಣೆಗಾಗಿ ಅಸ್ಸಾಂನಲ್ಲಿರುವ ತಮ್ಮ ಮನೆಗಳಿಗೆ ಹೋಗಲು ರಜೆಯನ್ನು ನೀಡಲು  ಅವರ ಗುತ್ತಿಗೆದಾರನು ನಿರಾಕರಿಸಿದ್ದನು. ಇದರಿಂದ ನೊಂದ ಅವರು ಜುಲೈ 5ರಂದು ಬಿಆರ್‌ಓ ದ ರಸ್ತೆ ಕಾಮಗಾರಿ ನಡೆಯುತ್ತಿದ್ದ  ದಾಮಿನ್ ಸರ್ಕಲ್ ಪ್ರದೇಶದಿಂದ ಜುಲೈ 5ರಂದು ಪರಾರಿಯಾಗಿದ್ದರೆನ್ನಲಾಗಿದೆ. ಜುಲೈ 13ರಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ   ಈ ಬಗ್ಗೆ ಪ್ರಕರಣ ದಾಖಲಾಗಿತ್ತು.

ಕೊರೊರಿಯಾಂಗ್ ಪಟ್ಟಣದಿಂದ ದಾಮಿನ್ 130 ಕಿ.ಮೀ. ದೂರದಲ್ಲಿದೆ ಮತ್ತು ರಸ್ತೆ ಕಾಮಗಾರಿ ನಡೆಯುತ್ತಿರುವ ಸ್ಥಳವು ದಾಮಿನ್‌ನಿಂದ ಇನ್ನೂ 25 ಕಿ.ಮೀ.  ದೂರದಲ್ಲಿದೆ. ಚೀನಾದ ಜೊತೆಗಿನ ವಾಸ್ತವ ಗಡಿ ನಿಯಂತ್ರಣ ಪ್ರದೇಸವು ದಾಮಿನ್‌ನಿಂದ 80 ಕಿ.ಮೀ. ದೂರದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News