ಉಕ್ರೇನ್‍ನಿಂದ ಧಾನ್ಯ ರಫ್ತು ಪುನರಾರಂಭ ಒಪ್ಪಂದಕ್ಕೆ ಸಹಿ ಹಾಕಿದ ಉಕ್ರೇನ್-ರಷ್ಯಾ

Update: 2022-07-23 18:19 GMT

ಇಸ್ತಾನ್ಬುಲ್, ಜು.24: ಯುದ್ಧದ ಹಿನ್ನೆಲೆಯಲ್ಲಿ ಉಕ್ರೇನ್ ನ ಬಂದರುಗಳಲ್ಲಿ ಸ್ಥಗಿತಗೊಂಡಿರುವ ಕೋಟ್ಯಾಂತರ ಟನ್ಗಳಷ್ಟು ಆಹಾರ ಧಾನ್ಯವನ್ನು ವಿದೇಶಕ್ಕೆ ರಫ್ತು ಮಾಡುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಟರ್ಕಿಯಲ್ಲಿ ನಡೆದ ಸಂಧಾನ ಮಾತುಕತೆ ಯಶಸ್ವಿಯಾಗಿದೆ ಎಂದು ವರದಿಯಾಗಿದೆ. 
ಇದೊಂದು ಭರವಸೆಯ ದಾರಿದೀಪ, ಸಾಧ್ಯತೆಯ ದಾರಿ ದೀಪ ಮತ್ತು ಜಗತ್ತಿಗೆ ಎಂದಿಗಿಂತಲೂ ಅಧಿಕ ಅಗತ್ಯವಿರುವ ಪರಿಹಾರದ ದೀಪವಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಶ್ಲಾಘಿಸಿದ್ದಾರೆ. ಇದರಿಂದ ಉಕ್ರೇನ್ ಬಂದರಿನಲ್ಲಿ ಸಿಕ್ಕಿಬಿದ್ದಿರುವ ಕೋಟ್ಯಾಂತರ ಟನ್ಗಳಷ್ಟು ಆಹಾರ ಧಾನ್ಯಗಳು ಮತ್ತು ರಶ್ಯದ ಬಂದರಿನಿಂದ ಆಹಾರ ಮತ್ತು ರಸಗೊಬ್ಬರಗಳು ವಿದೇಶಗಳಿಗೆ ರಫ್ತಾಗಲಿದೆ. ವಿಶ್ವಕ್ಕೆ ಎದುರಾಗಲಿದ್ದ ತೀವ್ರ ಆಹಾರದ ಬಿಕ್ಕಟ್ಟಿಗೆ ತುಸು ಪರಿಹಾರ ದೊರಕಲಿದೆ ಎಂದವರು ಆಶಿಸಿದ್ದಾರೆ.

ಈ ಒಪ್ಪಂದವರು ಜಾಗತಿಕ ದುರಂತವನ್ನು ತಡೆಯಬಹುದು. ಆಹಾರದ ಕ್ಷಾಮದಿಂದ ಹಲವು ದೇಶಗಳಲ್ಲಿ , ವಿಶೇಷವಾಗಿ ನಮಗೆ ನೆರವಾಗಿರುವ ದೇಶಗಳಲ್ಲಿ ರಾಜಕೀಯ ಅವ್ಯವಸ್ಥೆಯ ಸಮಸ್ಯೆ ನಿವಾರಣೆಯಾಗಲಿದೆ ಎಂದು ದೇಶವನ್ನು ಉದ್ದೇಶಿಸಿ ಟಿವಿ ವಾಹಿನಿಯಲ್ಲಿ ಭಾಷಣ ಮಾಡಿದ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

ಈ ಮಧ್ಯೆ, ಒಪ್ಪಂದಕ್ಕೆ ಸಹಿ ಬೀಳುತ್ತಿದ್ದಂತೆಯೇ, ಉಕ್ರೇನ್ನ ಒಡೆಸಾ ಬಂದರಿನ ಮೇಲೆ ರಶ್ಯ ಕ್ಷಿಪಣಿ ದಾಳಿ ನಡೆಸಿದ್ದು ಈ ದಾಳಿಯಲ್ಲಿ ಕನಿಷ್ಟ 3 ಮಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಉಕ್ರೇನ್ ಸೇನೆ ರಶ್ಯ ಆಕ್ರಮಿತ ಪಶ್ಚಿಮ ವಲಯದಲ್ಲಿನ ಸೇತುವೆಯನ್ನು ಗುರಿಯಾಗಿಸಿ ದಾಳಿ ನಡೆಸಿದೆ ಎಂದು ವರದಿಯಾಗಿದೆ.ಒಪ್ಪಂದಕ್ಕೆ ಸಹಿ ಹಾಕಿದ 24 ಗಂಟೆಯ ಒಳಗೇ ರಶ್ಯವು ಒಡೆಸಾ ಬಂದರಿನ ಮೇಲೆ ಕ್ಷಿಪಣಿ ದಾಳಿ ನಡೆಸಿ ತನ್ನ ವಾಗ್ದಾನವನ್ನು ಉಲ್ಲಂಘಿಸಿದೆ. ಅಲ್ಲದೆ ವಿಶ್ವಸಂಸ್ಥೆ ಮತ್ತು ಟರ್ಕಿಯ ಉಪಸ್ಥಿತಿಯಲ್ಲಿ ನಡೆದ ಒಪ್ಪಂದದ ಬಾಧ್ಯತೆಯನ್ನು ಕಡೆಗಣಿಸಿದೆ ಎಂದು ಉಕ್ರೇನ್ನ ವಿದೇಶಾಂಗ ಇಲಾಖೆಯ ವಕ್ತಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News