×
Ad

ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ: ರಾಜನಾಥ್ ಸಿಂಗ್

Update: 2022-07-25 08:46 IST
(Photo-PTI)

ಹೊಸದಿಲ್ಲಿ: ಪಾಕ್ ಆಕ್ರಮಿತ ಜಮ್ಮು- ಕಾಶ್ಮೀರ (ಪಿಒಜೆಕೆ) ಭಾರತದ ಅವಿಭಾಜ್ಯ ಅಂಗವಾಗಿದ್ದು, ಇದು ಭಾರತದ ಭಾಗವಾಗಿಯೇ ಮುಂದುವರಿಯಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಈ ಭೂಪ್ರದೇಶದ ಮೇಲೆ ಯಾರಾದರೂ ಕೆಟ್ಟ ದೃಷ್ಟಿ ಹಾಕಿದರೆ ಅದಕ್ಕೆ ಸೂಕ್ತ ಉತ್ತರ ನೀಡಲು ಭಾರತ ಸಕಲ ರೀತಿಯಲ್ಲಿ ಸಜ್ಜಾಗಿದೆ ಎಂದು ಅವರು ರವಿವಾರ ತಿಳಿಸಿದ್ದಾರೆ.

"ಪಾಕ್ ಆಕ್ರಮಿತ ಕಾಶ್ಮೀರ, ಭಾರತದ ಅವಿಭಾಜ್ಯ ಅಂಗ ಎಂಬ ನಿರ್ಣಯವನ್ನು ಭಾರತದ ಸಂಸತ್ತು ಆಂಗೀಕರಿಸಿದೆ. ಇದು ಭಾರತದ ಭಾಗವಾಗಿಯೇ ಮುಂದುವರಿಯಲಿದೆ. ಬಾಬಾ ಅಮರನಾಥ್ ಶಿವನರೂಪದಲ್ಲಿ ನಮ್ಮ ಜತೆಗಿದ್ದು, ಸರಸ್ವತಿ ದೇವಿಯ ದೇವಾಲಯದ ಅವಶೇಷಗಳು ಇರುವ ತಾಯಿ ಶಾರದಾ ಶಕ್ತಿ ವಾಸ್ತವ ನಿಯಂತ್ರಣ ರೇಖೆಯ ಇನ್ನೊಂದು ಬದಿ ಇರಲು ಹೇಗೆ ಸಾಧ್ಯ" ಎಂದು ಶಾರದಾಪೀಠವನ್ನು ಉಲ್ಲೇಖಿಸಿದ ರಕ್ಷಣಾ ಸಚಿವರು ಪ್ರಶ್ನಿಸಿದ್ದಾರೆ.

ಜಮ್ಮುವಿನಲ್ಲಿ ಆಯೋಜಿಸಿದ್ದ 23ನೇ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, "ಪಂಡಿತ್ ಜವಾಹರಲಾಲ್ ನೆಹರೂ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಚೀನಾ 1962ರಲ್ಲಿ ಲಡಾಖ್ ಪ್ರದೇಶವನ್ನು ವಶಪಡಿಸಿಕೊಂಡ ಸಂದರ್ಭಕ್ಕೆ ಹೋಲಿಸಿದರೆ ಭಾರತ ಇಂದು ವಿಶ್ವದಲ್ಲೇ ಅತ್ಯಂತ ಶಕ್ತಿಯುತ ದೇಶಗಳ ಪೈಕಿ ಒಂದಾಗಿದೆ" ಎಂದು ಹೇಳಿದರು.

"ನಮ್ಮ ದೇಶದ ಬಗ್ಗೆ ಯಾವುದೇ ವಿದೇಶಿ ಶಕ್ತಿಗಳು ಕೆಟ್ಟ ದೃಷ್ಟಿ ಹರಿಸಿದರೆ, ನಾವು ವಿಜಯಶಾಲಿಗಳಾಗುತ್ತೇವೆ ಎನ್ನುವುದನ್ನು ಅತ್ಯಂತ ವಿಶ್ವಾಸದಿಂದ ಹೇಳಬಲ್ಲೆ" ಎಂದು ಸಿಂಗ್ ನುಡಿದರು. ಪಾಕಿಸ್ತಾನ 1947ರಲ್ಲಿ ಭಾರತದಿಂದ ವಿಭಜನೆಯಾದ ಬಳಿಕ ನಡೆದ ಎಲ್ಲ ಯುದ್ಧಗಳಲ್ಲೂ ಪಾಕಿಸ್ತಾನ ಹೀನಾಯವಾಗಿ ಸೋತಿದ್ದರೂ ನಿರಂತವಾಗಿ ಪರೋಕ್ಷ ಯುದ್ಧವನ್ನು ನಡೆಸುತ್ತಾ ಬಂದಿದೆ ಎಂದು ಅವರು ಆಪಾದಿಸಿರುವುದಾಗಿ timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News