×
Ad

ಪೂರ್ವಾಂಚಲ್ ಎಕ್ಸ್ ಪ್ರೆಸ್ ವೇನಲ್ಲಿ ಡಬಲ್ ಡೆಕ್ಕರ್ ಬಸ್ ಗಳ ನಡುವೆ ಢಿಕ್ಕಿ: 8 ಜನರು ಮೃತ್ಯು

Update: 2022-07-25 10:39 IST
Photo:PTI

ಲಕ್ನೋ: ಉತ್ತರ ಪ್ರದೇಶದ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇನಲ್ಲಿ ಇಂದು ಡಬಲ್ ಡೆಕ್ಕರ್ ಬಸ್‌ಗಳ ನಡುವೆ ನಡೆದ ಡಿಕ್ಕಿಯಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ ಹಾಗೂ ಸುಮಾರು 20 ಮಂದಿ ಗಾಯಗೊಂಡಿದ್ದಾರೆ. ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆಗಾಗಿ ಲಕ್ನೋದ ಟ್ರಾಮಾ ಸೆಂಟರ್‌ಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.

"ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಜೀವಹಾನಿ ಬಹಳ ದುಃಖಕರವಾಗಿದೆ. ತ್ವರಿತ ಪರಿಹಾರ ಹಾಗೂ  ರಕ್ಷಣಾ ಕಾರ್ಯಾಚರಣೆಗಳು ಮತ್ತು ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆಗಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ" ಎಂದು ಆದಿತ್ಯನಾಥ್  ಟ್ವೀಟ್ ಮಾಡಿದ್ದಾರೆ.

ಲಕ್ನೋದಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಬಾರಾಬಂಕಿ ಜಿಲ್ಲೆಯಲ್ಲಿ ಘರ್ಷಣೆ ಸಂಭವಿಸಿದೆ.

"ಬಿಹಾರದ ಸೀತಾಮರ್ಹಿಯಿಂದ ಬರುತ್ತಿದ್ದ ಬಸ್ ನರೇಂದ್ರಪುರ ಮದ್ರಹಾ ಗ್ರಾಮದ ಬಳಿ ಹಿಂದಿನಿಂದ ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ. ಎರಡೂ ಬಸ್‌ಗಳು ಬಿಹಾರದ ಸೀತಾಮರ್ಹಿ ಮತ್ತು ಸುಪೌಲ್‌ನಿಂದ ದಿಲ್ಲಿಗೆ ಹೋಗುತ್ತಿದ್ದವು. ಪೊಲೀಸ್ ಮತ್ತು ರಕ್ಷಣಾ ತಂಡವು ಸ್ಥಳದಲ್ಲಿದೆ" ಎಂದು ಅಧಿಕಾರಿಯೊಬ್ಬರು NDTV ಗೆ ತಿಳಿಸಿದ್ದಾರೆ.

ಗಾಯಾಳುಗಳನ್ನು ಸಿಎಚ್‌ಸಿ ಹೈದರ್‌ಗಢ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಮೂವರನ್ನು ಚಿಕಿತ್ಸೆಗಾಗಿ ಲಕ್ನೋದ ಟ್ರಾಮಾ ಸೆಂಟರ್‌ಗೆ ಕಳುಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News