×
Ad

ಮಂಗಳೂರು | ದಿನಬಳಕೆ ವಸ್ತುಗಳ ಮೇಲಿನ ಜಿಎಸ್‌ಟಿ ಹಿಂಪಡೆಯಲು ಆಗ್ರಹ: ವುಮೆನ್ ಇಂಡಿಯಾ ಮೂವ್ ವೆಂಟ್ ಧರಣಿ

Update: 2022-07-25 12:56 IST

ಮಂಗಳೂರು,  ಜು.25: ದಿನಬಳಕೆಯ ವಸ್ತುಗಳ ಮೇಲಿನ ಜಿಎಸ್‌ಟಿ ಹಿಂಪಡೆಯಲು ಒತ್ತಾಯಿಸಿ ವುಮೆನ್ ಇಂಡಿಯಾ ಮೂವೆಂಟ್ ನ ದ.ಕ. ಜಿಲ್ಲಾ ಘಟಕ ವತಿಯಿಂದ ಇಂದು ಮಂಗಳೂರಿನ ಕ್ಲಾಕ್ ಟವರ್ ಬಳಿ ಧರಣಿ ನಡೆಯಿತು.

ವುಮೆನ್ ಇಂಡಿಯಾ ಮೂವೆಂಟ್ ನ ರಾಷ್ಟ್ರೀಯ ಸಮಿತಿಯ ಕಾರ್ಯದರ್ಶಿ ಆಯಿಶಾ ಬಜ್ಪೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದ ಎಲ್ಲಾ ವರ್ಗದ ನಾಗರಿಕರು ಬೀದಿಗಿಳಿಯುವ ಪರಿಸ್ಥಿತಿ ಬಂದಿದೆ ಎಂದರು.

ಅಧಿಕಾರಕ್ಕೆ ಬಂದಾಗ ಕಪ್ಪು ಹಣ ವಾಪಸ್ ತರುವುದಾಗಿ ಹೇಳಿ ಬಳಿಕ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿ ಜನರ ಬದುಕನ್ನೇ ದುಸ್ತರಗೊಳಿಸಲಾಗಿದೆ. ಇಂತಹ  ಅಚ್ಚೇ ದಿನ್ ನಮಗೆ ಬೇಕಾಗಿಲ್ಲ. ಜಿಎಸ್ ಟಿ ಹಿಂಪಡೆಯಿರಿ ಎಂದು ಅವರು ಆಗ್ರಹಿಸಿದರು. ಕಾರ್ಪೊರೇಟ್ ತೆರಿಗೆ ಕಡಿತಗೊಳಿಸಿ ಅದಾನಿ, ಅಂಬಾನಿಯಂತಹ ಕಾರ್ಪೊರೇಟ್ ವ್ಯಕ್ತಿಗಳನ್ನು ಮತ್ತಷ್ಟು ಶ್ರೀಮಂತಗೊಳಿಸಿ ಬಡ, ಮಧ್ಯಮ ವರ್ಗವನ್ನು ಬೀದಿಗೆ ತಳ್ಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾ ನಾಯಕಿ ಶಝ್ಮಾ ಬಂಟ್ವಾಳ ಮಾತನಾಡಿ, ಪ್ರಧಾನಿಯವರ 'ಬೇಟಿ ಬಚಾವೊ ಬೇಟಿ ಪಡಾವೊ' ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿದೆ, ಮಕ್ಕಳ ಶಿಕ್ಷಣ ದುಬಾರಿಯಾಗುತ್ತಿದೆ. ಹೀಗಿರುವಾಗ ಹೆಣ್ಣು ಮಕ್ಕಳು ಮಾತ್ರವಲ್ಲ ಬಡ, ಮಧ್ಯಮ ವರ್ಗದ ಯಾರೂ ಶಿಕ್ಷಣ ಪಡೆಯದಂತಾಗಿದೆ ಎಂದರು.

ಲೇಖನಿ, ಪುಸ್ತಕಗಳ ಬೆಲೆ ದುಪ್ಪಟ್ಟಾಗಿದೆ. ಬಸ್ ಪಾಸ್ ದರ ಹೆಚ್ಚಳವಾಗಿದೆ. ಹಿಜಾಬ್ ವಿರುದ್ಧ ಕೂಗಾಡಿದವರು ಜನ ಸಾಮಾನ್ಯರ ಸಮಸ್ಯೆಗಳ ಬಗ್ಗೆ ಧ್ವನಿಯೇ ಎತ್ತುತ್ತಿಲ್ಲ ಎಂದವರು ಹೇಳಿದರು.

ಪ್ರತಿಭಟನಾ ನಿರತ ಮಹಿಳೆಯರು ಬಿಜೆಪಿ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು. ಸಂಘಟನೆಯ ನಾಯಕಿಯರಾದ ಮಿಸ್ರಿಯಾ ಕಣ್ಣೂರು, ಮುಮ್ತಾಝ್, ಶಾಝಿಯಾ ಫರ್ವೇಜ್ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News