×
Ad

ದುಬೈ, ಅಬುಧಾಬಿಯಿಂದ ಮಂಗಳೂರಿಗೆ ಬರಬೇಕಿದ್ದ 2 ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಯಾನದಲ್ಲಿ ವ್ಯತ್ಯಯ

Update: 2022-07-25 14:44 IST
ಸಾಂದರ್ಭಿಕ ಚಿತ್ರ (Photo credit: Air India Express)

ಮಂಗಳೂರು, ಜು.25: ದುಬೈ ಹಾಗೂ ಅಬುಧಾಬಿಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಬಂದಿಳಿಯಬೇಕಿದ್ದ ಎರಡು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಗಳು ಹವಾಮಾನ ವೈಪರೀತ್ಯ ಕಾರಣ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದಿವೆ.

ದುಬೈ ಹಾಗೂ ಅಬುಧಾಬಿಯಿಂದ ಜು.24ರಂದು ರಾತ್ರಿ 11:30ಕ್ಕೆ ಹೊರಟ ಏರ್ ಇಂಡಿಯಾ ಎಕ್ಸ್ ಪ್ರೆಸ್ (ಐಎಕ್ಸ್ 0384) ಮತ್ತು (ಐಎಕ್ಸ್0816) ವಿಮಾನಗಳು ಸೋಮವಾರ ಮುಂಜಾನೆ 4:30ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ ವಿಮಾನ ನಿಲ್ದಾಣ ಪರಿಸರದಲ್ಲಿ ದಟ್ಟವಾದ ಮಂಜು ಆವರಿಸಿದ್ದ ಕಾರಣ ರನ್ ವೇಗೆ ಇಳಿಯಲು ಸಾಧ್ಯವಾಗಿಲ್ಲ. ಬಳಿಕ ಎರಡು ವಿಮಾನಗಳು ಬೆಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿ ನಿಲುಗಡೆ ಮಾಡಲಾಗಿದೆ. ಈ ಪೈಕಿ ದುಬೈಯಿಂದ ಆಗಮಿಸಿದ ವಿಮಾನ ಇಂದು ಅಪರಾಹ್ನ 2:30ಕ್ಕೆ ಬೆಂಗಳೂರಿನಿಂದ ಹೊರಟಿದ್ದು, 3:30ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದೆ. ಅದೇರೀತಿ ಅಬುಧಾಬಿಯಿಂದ ಆಗಮಿಸಿದ ವಿಮಾನವು 3:30ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಟು 4:30ಕ್ಕೆ ಮಂಗಳೂರು ತಲುಪಲಿದೆ ಎಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ಅಧಿಕಾರಿಗಳು ವಾರ್ತಾಭಾರತಿಗೆ ತಿಳಿಸಿದ್ದಾರೆ.

ದುಬೈ-ಮಂಗಳೂರು ವಿಮಾನದಲ್ಲಿ 150 ಪ್ರಯಾಣಿಕರಿದ್ದರೆ, ಅಬುಧಾಬಿಯಿಂದ ಆಗಮಿಸಿರುವ ವಿಮಾನದಲ್ಲಿ 130 ಪ್ರಯಾಣಿಕರಿದ್ದಾರೆ. ಈ ಪ್ರಯಾಣಿಕರು ಹಮಾಮಾನ ವೈಪರೀತ್ಯ ಕಾರಣ ಸುಮಾರು 12 ಗಂಟೆ ಹೆಚ್ಚುವರಿಯಾಗಿ ವಿಮಾನದಲ್ಲಿ ಕಳೆಯಬೇಕಾಗಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News