×
Ad

ನಂದಳಿಕೆ : ಆಟಿಡೊಂಜಿ ದಿನ ಕಾರ್ಯಕ್ರಮ

Update: 2022-07-25 19:26 IST

ಕಾರ್ಕಳ : ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ವತಿಯಿಂದ ಅಬ್ಬನಡ್ಕ ಕುಂಟಲಗುಂಡಿ ಯಲ್ಲಿರುವ ಸಂಘದ ರಂಗಮಂದಿರದಲ್ಲಿ ರವಿವಾರ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪತ್ರಕರ್ತ ರಾಮಚಂದ್ರ ಬರೆಪ್ಪಾಡಿ, ಆಟಿಡೊಂಜಿ ಕಾರ್ಯಕ್ರಮದ ಮೂಲಕ ಹಿರಿಯರು ಪಾಲನೆ ಮಾಡಿಕೊಂಡು ಬಂದಿರುವ ತುಳುನಾಡಿನ ಸಂಪ್ರದಾಯ, ಆಚಾರ-ವಿಚಾರ, ವೈಜ್ಞಾನಿಕ ಸಂಗತಿ ಯುವ ಸಮುದಾಯಕ್ಕೆ ತಿಳಿಸಿಕೊಡುವ ಕಾರ್ಯವಾಗುತ್ತಿದೆ. ಇಂತಹ ಆಚರಣೆಯಿಂದ ನಮ್ಮತನದ ಉಳಿವು ಸಾಧ್ಯ ಎಂದರು.

ಕಳೆದೆರಡು ದಶಕಗಳಿಂದ ನಿರಂತರವಾಗಿ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್‌ ಕ್ಲಬ್‌ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಸಂಘಟನೆ, ಶಿಸ್ತುವಿಗೆ ಹೆಸರುವಾಸಿಯಾಗಿರುವ ಫ್ರೆಂಡ್ಸ್‌ ಕ್ಲಬ್‌ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸುತ್ತಿದೆ ಎಂದು ರಾಮಚಂದ್ರ ಅಭಿಪ್ರಾಯಪಟ್ಟರು. 

ಶಶಿ ಕಿಚನ್ ಯೂಟ್ಯೂಬರ್ ಶಿರ್ವದ ಶಶಿಕಲಾ ಕುಲಾಲ್ ಮಾತನಾಡಿ, ಆಟಿಡೊಂಜಿ ದಿನ ಆಚರಣೆಯಿಂದ ಆಟಿ ತಿಂಗಳ ವೈಶಿಷ್ಟತೆ ಕುರಿತು ತಿಳಿಸಿಕೊಡುವ ಕಾರ್ಯವಾಗುತ್ತಿದೆ. ಈಗಿನ ಫಾಸ್ಟ್‌ಫುಡ್‌, ಮೊಬೈಲ್ ಯುವ ಜನತೆಯ ಮೇಲೆ ಅಗಾಧ ಪರಿಣಾಮ ಬೀರುತ್ತಿದ್ದು ನಮ್ಮೂರಿನ ಸಂಸ್ಕೃತಿ ದೂರುವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. 

ಹಚ್ಚಹಸುರಿನ ವೇದಿಕೆ ಅತ್ಯಂತ ಆಕರ್ಷಕವಾಗಿತ್ತು. ತೆಂಗಿನಗರಿಯಲ್ಲಿ ಕಟ್ಟಿದ ಸೌತೆಕಾಯಿ, ಹಳೆಯ ಕಾಲದ ದೀಪ, ಚೆನ್ನೆಮಣೆ, ಮರ ಮತ್ತು ಲೋಹದ ಹಳೆಯ ಪಾತ್ರೆಗಳು, ಹಳೆ ಕಾಲದ ನಾಣ್ಯ ವೇದಿಕೆಯನ್ನು ಅಲಂಕರಿಸಿತ್ತು. ಸಂಘದ ಸದಸ್ಯ ಬೋಳ ಕೀರ್ತನ್ ಪೂಜಾರಿ ಅವರು ವೇದಿಕೆ ನಿರ್ಮಾಣ ಮಾಡಿದ್ದರು. 

ಲೀಲಾ ಜತೊಟ್ಟು, ಅಮಣಿ ಆಚಾರ್ಯ, ಸಂಜೀವಿ ಆಚಾರ್ಯ ಅವರು ತುಳು ಪಾಡ್ದನ ಹಾಡಿದರು. ಸಂಘದ ಬಾಲ ಪ್ರತಿಭೆ ನಿಯಾ ಶೆಟ್ಟಿ ಸುಮಾರು 50ಕ್ಕೂ ಅಧಿಕ ತುಳು ಗಾದೆಗಳನ್ನು ವಾಚಿಸಿದರು.

ಆಟಿಡೊಂಜಿ ದಿನದ ಕಾರ್ಯಕ್ರಮದಲ್ಲಿ 28 ಬಗೆ ಬಗೆಯ ಸ್ವಾದಿಷ್ಟಕರ ಖಾದ್ಯಗಳಿದ್ದವು. ಪೆಜಕಾಯಿ ಚಟ್ನಿ, ಕುಕ್ಕುದ ಚಟ್ನಿ, ಕುಕ್ಕುದ ಉಪ್ಪಡ್, ಕುಡುತ ಚಟ್ನಿ, ಪುನರ್ ಪುಳಿತ ಚಟ್ನಿ, ತಿಮರೆ ಚಟ್ನಿ, ನುರ್ಗೆ ತೊಪ್ಪು, ತೊಂಜಕ್ ಬೊಲೆದ ಸುಕ್ಕ, ತೆಕ್ಕರೆ ತಲ್ಲಿ, ಉಪ್ಪಡ್ ಪಚ್ಚಿರ್, ಗೆಂಡದಡ್ಡೆ, ಹಪ್ಪಳ, ಸೆಂಡಿಗೆ, ಖಾರ ಮುಂಚಿ, ಉರ್ಪೆಲ್ ನುಪ್ಪು, ಕುಡುತ ಸಾರ್, ರೊಟ್ಟಿ ಪಾಯಸ, ಅರಿತ ಪಾಯಸ, ಜೀರಿಗೆದ ಕಷಾಯ, ಪೋಡಿ, ಬಚ್ಚಿರೆ ಬಜ್ಜೆಯಿ, ಅಲೆ (ಮಜ್ಜಿಗೆ), ಗುಜ್ಜೆದ ಗಟ್ಟಿ, ಗುಜ್ಜೆದ ಮುಲ್ಕ, ಅರೆಪುದ ಪುಂಡಿ, ಪತ್ರೊಡ್ಡೆ, ಚಿಲ್ಮಿ, ಲಡ್ಡು‌ ಮೊದಲಾದ ರುಚಿರುಚಿಯಾದ ತಿನಿಸುಗಳಿದ್ದವು.

ಸಂಘದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದಿನೇಶ್ ಪೂಜಾರಿ ಬೀರೊಟ್ಟು, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಘುವೀರ್ ಶೆಟ್ಟಿ, ನಿಕಟ ಪೂರ್ವಾಧ್ಯಕ್ಷ ಉದಯ ಅಂಚನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಬ್ಬನಡ್ಕ ಶ್ರೀ ವನದುರ್ಗಾ ಸ್ವ ಸಹಾಯ ಸಂಘದ ಅಧ್ಯಕ್ಷೆ ಲಲಿತಾ ಆಚಾರ್ಯ ಪ್ರಾರ್ಥಸಿದರು. ಮಹಿಳಾ ಸಂಘಟನಾ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ ಸ್ವಾಗತಿಸಿ, ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸುರೇಶ್ ಕಾಸ್ರಬೈಲು ವರದಿ ವಾಚಿಸಿ, ಕಾರ್ಯಕ್ರಮದ ನಿರ್ದೇಶಕ ಅಬ್ಬನಡ್ಕ ಪದ್ಮಶ್ರೀ ಸತೀಶ್ ಪೂಜಾರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News