ಆರೆಸ್ಸೆಸ್ ಮಾತು ಮತ್ತು ಕೃತಿ

Update: 2022-07-26 05:14 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದು ಕರೆದುಕೊಳ್ಳುವ ಆರೆಸ್ಸೆಸ್ ಸಂಘಟನೆ ತನಗೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದು ಹೇಳಿಕೊಳ್ಳುತ್ತದೆ. ಆದರೆ ಅದರ ಚಟುವಟಿಕೆಗಳಲ್ಲಿ ಯಾವಾಗಲೂ ರಾಜಕೀಯಕ್ಕೆ ಅಗ್ರಸ್ಥಾನ. ಈಗ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಮೂಗುದಾರವಿರುವುದು ಈ ಸಂಘದ ಕೈಯಲ್ಲಿ. ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದರೂ ಸರಕಾರದ ನೀತಿ ಧೋರಣೆಗಳು ರೂಪುಗೊಳ್ಳುವುದು ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದಲ್ಲಿ. ವಾಸ್ತವಾಂಶ ಇದಾಗಿದ್ದರೂ ಸಂಘಕ್ಕೂ ಬಿಜೆಪಿ ಸರಕಾರಕ್ಕೂ ಸಂಬಂಧವಿಲ್ಲವೆಂಬಂತೆ ಅದು ತೋರಿಸಿಕೊಳ್ಳುತ್ತದೆ. ಅಗತ್ಯ ಪದಾರ್ಥಗಳ ಬೆಲೆ ಏರಿಕೆಯ ಬಗ್ಗೆ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆಯವರು ನೀಡಿರುವ ಹೇಳಿಕೆ ಇಂತಹ ಇಬ್ಬಂದಿತನಕ್ಕೆ ಒಂದು ಉದಾಹರಣೆಯಾಗಿದೆ.

ಕರ್ನಾಟಕದ ಸೊರಬದವರಾದ ದತ್ತಾತ್ರೇಯ ಹೊಸಬಾಳೆ ಅವರು ''ಆಹಾರ, ಬಟ್ಟೆಯಂತಹ ಅಗತ್ಯ ವಸ್ತುಗಳ ಬೆಲೆ ಕೈಗೆ ಎಟುಕುವಂತಿರಬೇಕು'' ಎಂದು ಹೇಳಿದ್ದಾರೆ. ಕೃಷಿ ಕುರಿತ ಅಂತರ್‌ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಹೊಸಬಾಳೆಯವರು ಬೆಲೆ ಏರಿಕೆಯ ಬಗ್ಗೆ ಆತಂಕ ವ್ಯಕ್ತಪಡಿಸಿ ಹಿಟ್ಟು, ಮೊಸರಿನಂತಹ ಅಗತ್ಯ ಆಹಾರ ಪದಾರ್ಥಗಳ ಮೇಲೆ ಕೇಂದ್ರ ಸರಕಾರ ಜಿಎಸ್‌ಟಿ ವಿಧಿಸಿರುವ ಕುರಿತು ತೀವ್ರ ವಾಗ್ದಾಳಿ ನಡೆಸಿದರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸಂಘದ ನಾಯಕರಿಗೆ ಜಿಎಸ್‌ಟಿ ಬಗ್ಗೆ ಗೊತ್ತೇ ಇರಲಿಲ್ಲವೇನೋ! ಹೊಸಬಾಳೆಯವರ ಈ ಹೇಳಿಕೆಯನ್ನು ಓದುವ ನಮ್ಮ ಮಧ್ಯಮ ವರ್ಗದ ಅಮಾಯಕ ಜನರು, ಸಂಘದ ಆರಾಧಕರು ಇದನ್ನೇ ಉದಾಹರಣೆಯಾಗಿ ನೀಡಿ ''ಸಂಘದವರು ಹಾಗಿಲ್ಲ, ಅವರ ಮಾತು ಅಧಿಕಾರದಲ್ಲಿರುವವರು ಕೇಳುತ್ತಿಲ್ಲ'' ಎಂದು ಸಮಾಧಾನ ಪಟ್ಟುಕೊಳ್ಳುತ್ತಾರೆ. ಆದರೆ ರಾಜಕಾರಣದ ಪ್ರಾಥಮಿಕ ತಿಳುವಳಿಕೆ ಇರುವವರಾರೂ ಇವರನ್ನು ಅಮಾಯಕ ಎಂದು ನಂಬುವುದಿಲ್ಲ. ಬಿಜೆಪಿ ಸರಕಾರದಲ್ಲಿ ಒಂದು ಹುಲ್ಲು ಕಡ್ಡಿ ಅತ್ತಲಿಂದ ಇತ್ತ ಸರಿದಾಡಬೇಕಾದರೆ ಆರೆಸ್ಸೆಸ್ ಗುರುಗಳ ಒಪ್ಪಿಗೆ ಬೇಕು. ಬಿಜೆಪಿಯನ್ನು ನಿಯಂತ್ರಿಸಲೆಂದೇ ಸಂಘದಿಂದ ಒಬ್ಬರನ್ನು ಬಿಜೆಪಿಗೆ ಡೆಪ್ಯುಟ್ ಮಾಡಿ ಅವರಿಗೆ ಸಂಘಟನಾ ಕಾರ್ಯದರ್ಶಿ ಎಂಬ ಹುದ್ದೆಯನ್ನು ನೀಡಲಾಗುತ್ತದೆ. ಸಚಿವ ಸಂಪುಟ ರಚನೆ, ನಿಗಮ, ಮಂಡಳಿಗಳಿಗೆ ನೇಮಕ, ಮಂತ್ರಿಗಳಖಾತೆ ಹಂಚಿಕೆ, ಹೀಗೆ ಪ್ರತಿಯೊಂದರಲ್ಲೂ ಸಂಘದ ಆದೇಶ ಅಂತಿಮ. ಹಾಗಾಗಿಯೇ ಅಧಿಕಾರಕ್ಕಾಗಿ ಬಿಜೆಪಿ ಸೇರಿದವರು ಕೂಡ ಸಂಘದ ನಾಯಕರನ್ನು ಓಲೈಸಲು ನಾನಾ ಕಸರತ್ತುಗಳನ್ನು ಮಾಡುತ್ತಾರೆ. ಇಷ್ಟವಿಲ್ಲದಿದ್ದರೂ ಮುಸ್ಲಿಮರ ವಿರುದ್ಧ ಮಾತಾಡುತ್ತಾರೆ. ಸಂಘದ ಪಥ ಸಂಚಲನವಿದ್ದರೆ ಸಂಘದ ಸಮವಸ್ತ್ರ ಧರಿಸಿ, ಲಾಠಿ ಹಿಡಿದು ಅದರಲ್ಲಿ ಪಾಲ್ಗೊಳ್ಳುತ್ತಾರೆ. ಜಿಎಸ್‌ಟಿಯಂತಹ ಮಹತ್ವದ ವಿಷಯದ ಬಗ್ಗೆ ಕೇಂದ್ರ ಸರಕಾರ ಆರೆಸ್ಸೆಸ್ ನಾಯಕರ ಜೊತೆಗೆ ಸಮಾಲೋಚನೆ ಮಾಡಿಯೇ ತೀರ್ಮಾನಿಸಿರುತ್ತದೆ. ಆದರೂ ಸಂಘದ ನಾಯಕರು ತಾವು ಅಮಾಯಕರು ತಮಗೇನೂ ಗೊತ್ತಿಲ್ಲ ಎಂದು ಜನಸಾಮಾನ್ಯರನ್ನು ನಂಬಿಸಲು ಇಂತಹ ಹೇಳಿಕೆಗಳನ್ನು ಆಗಾಗ ಕೊಡುತ್ತಿರುತ್ತಾರೆ.

 ಜಾತ್ಯತೀತ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಬದಲಿಸುವ ಗುರಿ ಹೊಂದಿರುವ ಆರೆಸ್ಸೆಸ್ ಈ ಗುರಿ ಸಾಧನೆಗಾಗಿ ಹಲವಾರು ಸಂಘಟನೆಗಳನ್ನು ಕಟ್ಟಿದೆ. ಬಿಜೆಪಿ ಅದರ ರಾಜಕೀಯ ಅಂಗವಾದರೆ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ಅದರ ಕಾರ್ಮಿಕ ವಿಭಾಗ. ಮಾರುಕಟ್ಟೆ ಆರ್ಥಿಕ ನೀತಿಯನ್ನು ಬಿಜೆಪಿ ಸರಕಾರ ಜಾರಿಗೆ ತರುತ್ತದೆ. ಆಗ ಭಾರತೀಯ ಮಜ್ದೂರ್ ಸಂಘ ಕಾರ್ಮಿಕರ ಬೆಂಬಲ ಉಳಿಸಿಕೊಳ್ಳಲು ಬಹಿರಂಗವಾಗಿ ಆದರೆ ಸಾಂಕೇತಿಕವಾಗಿ ಬಿಜೆಪಿ ಸರಕಾರದ ನೀತಿಯನ್ನು ವಿರೋಧಿಸುತ್ತದೆ. ಬಿಎಂಎಸ್‌ನ ಈ ವಿರೋಧ ನಿಜವೆಂದು ಅಮಾಯಕ ಕಾರ್ಮಿಕರು ಮಾತ್ರವಲ್ಲ ವಾಮಪಂಥೀಯ ಕಾರ್ಮಿಕ ಸಂಘಟನೆಗಳು ಅನೇಕ ಬಾರಿ ನಂಬಿ ಮೋಸ ಹೋಗಿವೆ. ಹೀಗೆ ಅಧಿಕಾರ ಮತ್ತು ವಿರೋಧ ಹೀಗೆ ಎರಡೂ ಕಡೆ ಅವತರಿಸುವ ಆರೆಸ್ಸೆಸ್‌ಗೆ ತನ್ನ ಅಜೆಂಡಾ ಜಾರಿ ಮುಖ್ಯ. ಅದಕ್ಕಾಗಿ ಎಲ್ಲಾ ಆಟಗಳನ್ನೂ ಆಡುತ್ತದೆ.

 ಬಿಜೆಪಿ ಸರಕಾರದ ಮಂತ್ರಿಗಳ ಭ್ರಷ್ಟಾಚಾರದ ಹಗರಣಗಳು ಬಯಲಿಗೆ ಬಂದಾಗ ತಕ್ಷಣ ಎಚ್ಚೆತ್ತು ಅಂತರ ಕಾಯ್ದುಕೊಳ್ಳುವ ಆರೆಸ್ಸೆಸ್ ತೋರಿಕೆಗೆ ಅದನ್ನು ವಿರೋಧಿಸಿದಂತೆ ನಾಟಕ ಮಾಡುತ್ತದೆ. ಆದರೆ ಈ ವಿರೋಧವನ್ನು ಅದು ಎಂದೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಿಲ್ಲ. 2008ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರಕಾರವಿತ್ತು. ಆಗ ಬಳ್ಳಾರಿಯಲ್ಲಿ ಲಂಗು ಲಗಾಮಿಲ್ಲದ ಗಣಿಗಾರಿಕೆ ನಡೆಯುತ್ತಿತ್ತು. ಜನಾರ್ದನ ರೆಡ್ಡಿ ಮತ್ತು ಅವರ ಪರಿವಾರ ಅಮೂಲ್ಯ ಅದಿರನ್ನು ಲೂಟಿ ಮಾಡಿ ಲಕ್ಷಾಂತರ ಕೋಟಿ ರೂಪಾಯಿ ಲಪಟಾಯಿಸಿದ ಆರೋಪ ಎದುರಿಸಿತ್ತು. ಆಗ ದೇಶದಲ್ಲಿ 'ಬಳ್ಳಾರಿ ರಿಪಬ್ಲಿಕ್' ಎಂದು ಈ ಪರಿವಾರ ಹೆಸರಾಗಿತ್ತು. ಇದೆಲ್ಲ ಗೊತ್ತಿದ್ದರೂ ಆರೆಸ್ಸೆಸ್ ಜಾಣ ಮೌನ ತಾಳಿತ್ತು. ಸಂಘಕ್ಕೂ ರೆಡ್ಡಿಗಳು ಗುರುದಕ್ಷಿಣೆ ನೀಡುತ್ತಿದ್ದಾರೆ ಎಂದು ಜನ ಮಾತನಾಡುತ್ತಿದ್ದರು. ಸಂಘದ ನಾಯಕರು ಗಣಿ ದಂಧೆಕೋರರನ್ನು ಆಗಾಗ ಭೇಟಿಯಾಗುತ್ತಿದ್ದರು. ಇದರರ್ಥ ಸಂಘಕ್ಕೆ ಪ್ರಾಮಾಣಿಕತೆ, ರಾಷ್ಟ್ರ ಭಕ್ತಿ ಮುಖ್ಯವಲ್ಲ. ಜಾತಿ ಶ್ರೇಣೀಕರಣದ ಹಿಂದೂ ರಾಷ್ಟ್ರ ನಿರ್ಮಾಣದ ದೂರದ ಗುರಿ ಸಾಧನೆಗಾಗಿ ಅದು ಎಲ್ಲಾ ಅನಾಚಾರಗಳ ಬಗ್ಗೆ ಮೌನ ತಾಳುತ್ತದೆ. ಈ ಮೌನವೆಂದರೆ 'ಮೌನ ಸಮ್ಮತಿ' ಎಂದು ರಾಜಕೀಯ ವಿಶ್ಲೇಷಕರು ವ್ಯಾಖ್ಯಾನಿಸುತ್ತಾರೆ.

ಬಿಜೆಪಿ ಸರಕಾರದ ಯಾವುದೇ ತೀರ್ಮಾನ ಪ್ರಧಾನಿ ಮೋದಿ ಇಲ್ಲವೇ ಅಮಿತ್ ಶಾ ಅವರ ತೀರ್ಮಾನ ಮಾತ್ರವಲ್ಲ. ಅದಕ್ಕೆ ಸಂಘದ ಅಂಗೀಕಾರ ಮುದ್ರೆ ಬಿದ್ದಿರುತ್ತದೆ. ಪ್ರತೀ ವರ್ಷ ನಾಗಪುರದಲ್ಲಿ ನಡೆಯುವ ಆರೆಸ್ಸೆಸ್ ಅಂಗ ಸಂಘಟನೆಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಮಂತ್ರಿ ಅಮಿತ್ ಶಾ ಸೇರಿದಂತೆ ಎಲ್ಲ ಹಿರಿಯ ನಾಯಕರೂ ಪಾಲ್ಗೊಳ್ಳುತ್ತಾರೆ. ಜಿಎಸ್‌ಟಿಯಂತಹ ವಿಷಯಗಳು ಅಲ್ಲಿ ಅಂಗೀಕಾರ ಪಡೆಯುತ್ತವೆ ಎನ್ನಲಾಗಿದೆ. ನಂತರ ಮಂತ್ರಿ ಮಂಡಲದ ಸಂಸತ್ತಿನ ಒಪ್ಪಿಗೆ ಪಡೆದು ಜಾರಿಗೆ ತರುವ ಪ್ರಹಸನ ನಡೆಯುತ್ತದೆ. ಇದು ಎಲ್ಲರಿಗೂ ಗೊತ್ತಿದ್ದರೂ ಸಂಘದ ಉನ್ನತ ನಾಯಕರಾದ ಹೊಸಬಾಳೆಯವರು ಬೆಲೆ ಏರಿಕೆ ವಿರುದ್ಧ ಬಹಿರಂಗ ಹೇಳಿಕೆ ನೀಡಿ ಯಾರನ್ನು ದಾರಿ ತಪ್ಪಿಸಲು ಹೊರಟಿದ್ದಾರೆ?

ಆಪರೇಷನ್ ಕಮಲದಂತಹ ಶಾಸಕರ ಖರೀದಿ ಮತ್ತು ಮಾರಾಟ ವ್ಯವಹಾರ ನಡೆದಾಗಲೂ ಆರೆಸ್ಸೆಸ್ ಮೌನ ಮುರಿಯುವುದಿಲ್ಲ. ಸರಕಾರದ ನೂರಾರು ಎಕರೆ ಗೋಮಾಳ ಜಮೀನನ್ನು ಅಗ್ಗದ ಬೆಲೆಗೆ ರಾಷ್ಟ್ರೋತ್ಥಾನ ಪರಿಷತ್‌ಗೆ ನೀಡಿದಾಗಲೂ ಸಂಘಕ್ಕೆ ಅದು ಅನೈತಿಕ ಅನಿಸುವುದಿಲ್ಲ. ಚೀನಾದಿಂದ ಲಕ್ಷಾಂತರ ಕೋಟಿ ರೂಪಾಯಿ ಸರಕುಗಳನ್ನು ಆಮದು ಮಾಡಿಕೊಳ್ಳುತ್ತಿರುವಾಗಲೂ ಆರೆಸ್ಸೆಸ್‌ನ ಸ್ವದೇಶಿ ಜಾಗರಣ ಮಂಚ ತೆಪ್ಪಗಿರುತ್ತದೆ. ಇದರರ್ಥ ಸಂಘಕ್ಕೆ ಭಾರತದ ಭಾರತೀಯರ ಏಳಿಗೆ ಮುಖ್ಯವಲ್ಲ. ತನ್ನ ಮನುವಾದಿ, ಕೋಮುವಾದಿ ಅಜೆಂಡಾ ಜಾರಿಗೆ ತರುವುದು ಮುಖ್ಯ. ಹಾಗಾಗಿಯೇ ದತ್ತಾತ್ರೇಯ ಹೊಸಬಾಳೆಯಂತಹವರ ನಾಟಕೀಯ ಮಾತುಗಳು ಬಹಳ ಕಾಲ ಜನರನ್ನು ಮರುಳು ಮಾಡಲು ಸಾಧ್ಯವಿಲ್ಲ. ಸೆಕ್ಯುಲರ್ ಎಂದು ಕರೆದುಕೊಳ್ಳುವ ಪಕ್ಷ ಮತ್ತು ಸಂಘಟನೆಗಳು ಇಂತಹ ದಾರಿ ತಪ್ಪಿಸುವ ಮಾತುಗಳನ್ನು ನಂಬಲಾರರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News