×
Ad

ಮಂಗಳೂರು: ರಸ್ತೆಯ ಹೊಂಡಕ್ಕೆ ಸ್ಕೂಟರ್‌ ಬಿದ್ದು ವಿದ್ಯಾರ್ಥಿನಿಗೆ ಗಂಭೀರ ಗಾಯ

Update: 2022-07-26 00:06 IST

ಮಂಗಳೂರು: ನೇತ್ರಾವತಿ ಸೇತುವೆಯ ಮಧ್ಯಭಾಗದಲ್ಲಿ ನಿರ್ಮಾಣಗೊಂಡ ಹೊಂಡಕ್ಕೆ ಬಿದ್ದು ಸ್ಕೂಟರ್‌ ಸವಾರೆ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡ ಬಗ್ಗೆ ವರದಿಯಾಗಿದೆ.

ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ಪರಿಸರ ವಿಜ್ಞಾನ ವಿಭಾಗದ ದ್ವಿತೀಯ ವರ್ಷದ ಎಂ.ಎಸ್ಸಿ ವಿದ್ಯಾರ್ಥಿನಿ, ಕೊಟ್ಟಾರ ನಿವಾಸಿ ನಿಶ್ಮಿತಾ (19) ಗಾಯಾಳು.

ಜು.22ರಂದು ಸಂಜೆ ಕೊಣಾಜೆ ಕಡೆಯಿಂದ ಮಂಗಳೂರಿಗೆ ತೆರಳುವ ಸಂದರ್ಭ ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ಸೇತುವೆಯ ಮಧ್ಯಭಾಗದಲ್ಲಿರುವ ಬೃಹತ್‌ ಗಾತ್ರದ ಹೊಂಡದಲ್ಲಿ ಅವರ ದ್ವಿಚಕ್ರ ವಾಹನ ಸಿಲುಕಿ ರಸ್ತೆಗೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ರಿಕ್ಷಾ ಚಾಲಕರೊಬ್ಬರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಬಲಗೈ ಮೂಳೆ ಮುರಿತಕ್ಕೊಳಗಾಗಿರುವುದ್ದು, ಮೂಳೆ ಜೋಡಿಸಲು ಶಸ್ತ್ರ ಚಿಕಿತ್ಸೆ ನಡೆಸಿ ರಾಡನ್ನು ಅಳವಡಿಸಲಾಗಿದೆ.  ಮುಂದಿನ ಆರು ತಿಂಗಳುಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.

"ಕಾಲೇಜಿನಿಂದ ಮನೆಗೆ ವಾಪಸ್ಸು ಮರಳುವ ಸಂದರ್ಭ ನೇತ್ರಾವತಿ ಸೇತುವೆಯಲ್ಲಿನ ಹೊಂಡ ಅರಿವಿಗೆ ಬಾರದೆ ಬಿದ್ದು   ಕೈ ಮುರಿತಕ್ಕೊಳಗಾಗಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದೇನೆ. ಎಂ.ಎಸ್ಸಿ ಅಂತಿಮ ವರ್ಷವಾಗಿರುವುದರಿಂದ ಆಗಸ್ಟ್ ತಿಂಗಳಿನಲ್ಲಿ ಆಂತರಿಕ ಪರೀಕ್ಷೆಗಳಿವೆ. ಅದನ್ನು ಎದುರಿಸಲು ಸಾಧ್ಯವಿಲ್ಲ. ಜೊತೆಗೆ ಆ.12ರಂದು ಯುಜಿಸಿ ಪರೀಕ್ಷೆಯೂ ಇರುವುದರಿಂದ  ಭವಿಷ್ಯವೇ ಅತಂತ್ರವಾಗಿದೆ. ಹೆದ್ದಾರಿ ಅವ್ಯವಸ್ಥೆಯೇ ಅಪಘಾತಕ್ಕೆ ಕಾರಣ ಎಂದು ನಿಶ್ಮಿತಾ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News