ಸ್ವಂತ ಜನರು ದ್ರೋಹಿಗಳಾದರು, ನನ್ನ ಆಪರೇಷನ್‌ ವೇಳೆಯಲ್ಲೇ ಸರಕಾರ ಉರುಳಿಸಿದರು: ಉದ್ಧವ್‌ ಠಾಕ್ರೆ

Update: 2022-07-26 06:45 GMT

ಮುಂಬೈ: "ನನ್ನ ಸರಕಾರ ಹೋಯಿತು, ಮುಖ್ಯಮಂತ್ರಿ ಹುದ್ದೆಯೂ ಹೋಯಿತು. ನನಗೆ ಅದರ ಬಗ್ಗೆ ಚಿಂತೆಯಿಲ್ಲ. ಆದರೆ ನನ್ನ ಸ್ವಂತ ಜನರು ದ್ರೋಹಿಗಳಾಗಿ ಬಿಟ್ಟರು. ನಾನು ಶಸ್ತ್ರಕ್ರಿಯೆಯಿಂದ ಚೇತರಿಸಿಕೊಳ್ಳುತ್ತಿರುವ ಸಂದರ್ಭ ನನ್ನ ಸರಕಾರವನ್ನು ಉರುಳಿಸಲು ಯತ್ನಿಸಿದರು" ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು  ಶಿವಸೇನೆ ಮುಖವಾಣಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

"ಅವರು ನನಗೆ ದ್ರೋಹವೆಸಗಿದ್ದಾರೆ, ಪಕ್ಷವನ್ನು ಒಡೆದರು. ಅವರು ತಮ್ಮ ತಂದೆಯ ಚಿತ್ರವನ್ನು ಬಳಸಿಕೊಂಡು ಮತ ಯಾಚಿಸಬೇಕು. ಶಿವಸೇನೆಯ ತಂದೆಯ ಚಿತ್ರವನ್ನು  ಬಳಸಿ ಮತಗಳನ್ನು ಬೇಡುವುದನ್ನು ನಿಲ್ಲಿಸಿ" ಎಂದು ಅವರು ಏಕನಾಥ್ ಶಿಂಧೆ ಬಣದ ಬಗ್ಗೆ ಪರೋಕ್ಷವಾಗಿ ಖಾರವಾಗಿ ಪ್ರತಿಕ್ರಿಯಿಸಿದರು.

"ನಾನು ಪಕ್ಷ  ಪ್ರಮುಖ, ಕುಟುಂಬದ ಮುಖ್ಯಸ್ಥ, ಶಸ್ತ್ರಕ್ರಿಯೆ ನಂತರ  ಅಲುಗಾಡಲು ಸಾಧ್ಯವಿಲ್ಲದೇ ಇದ್ದಾಗ ಅವರು ನನ್ನ ವಿರುದ್ಧ ಸಂಚು ರೂಪಿಸುತ್ತಿದ್ದರು. ಈ ನೋವಿನ ವಾಸ್ತವದೊಂದಿಗೆ ನಾನು ಬದುಕುತ್ತೇನೆ. ಪಕ್ಷದ ಜವಾಬ್ದಾರಿಯನ್ನು ಒಬ್ಬರಿಗೆ ವಹಿಸಿದೆ ಹಾಗೂ ನಂ. 2 ಸ್ಥಾನವನ್ನೂ ನೀಡಿದೆ. ಪಕ್ಷವನ್ನು ನೋಡಿಕೊಳ್ಳಲು ನಿಮ್ಮ ಮೇಲೆ ನಂಬಿಕೆಯಿರಿಸಿದ್ದೆ ಆದರೆ ನೀವು ಆ ನಂಬಿಕೆಯನ್ನು ಮುರಿದಿದ್ದೀರಿ" ಎಂದು ಠಾಕ್ರೆ ಹೇಳಿದರು.

"ಬಾಳ್ ಠಾಕ್ರೆ ಅವರ ನಿಧನಾನಂತರವೂ ಶಿವಸೇನೆಯು ಪ್ರಬಲವಾಗಿರುವುದನ್ನು ಅವರಿಗೆ ಸಹಿಸಲಾಗಿಲ್ಲ, ಅವರು ಶಿವಸೇನೆಯನ್ನು ಠಾಕ್ರೆಗಳಿಂದ ಪ್ರತ್ಯೇಕಿಸಲು ಯತ್ನಿಸಿದ್ದರು, ಇದು ಗಾಂಧಿಗಳನ್ನು ಕಾಂಗ್ರೆಸ್‍ನಿಂದ ಪ್ರತ್ಯೇಕಿಸಿದಂತೆ" ಎಂದು ಉದ್ಧವ್ ಹೇಳಿದರು.

"ಠಾಕ್ರೆಯನ್ನು ಶಿವಸೇನೆಯಿಂದ ಪ್ರತ್ಯೇಕಿಸಲು ಪ್ರಯತ್ನಿಸಿ ಎಂದು ಅವರಿಗೆ ಸವಾಲೆಸೆಯುತ್ತೇನೆ, ನಿಮಗೆ ನಿಷ್ಠೆಯಿಲ್ಲ, ಧೈರ್ಯವಿಲ್ಲ, ನೀವೊಬ್ಬ ದ್ರೋಹಿ" ಎಂದು ಠಾಕ್ರೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News