ಭದ್ರತೆ ಸಮಸ್ಯೆಗಳನ್ನು ಪರಿಹರಿಸಲಾಗಿದೆ, ಹಿಂದೂ, ಸಿಖ್‌ ಗಳು ದೇಶಕ್ಕೆ ಮರಳಿ ಬನ್ನಿ: ತಾಲಿಬಾನ್‌ ಕರೆ

Update: 2022-07-26 15:44 GMT

 ಕಾಬೂಲ್, ಜು.26: ಅಫ್ಘಾನಿಸ್ತಾನದಲ್ಲಿನ ಭದ್ರತಾ ಪರಿಸ್ಥಿತಿಯ ಸಮಸ್ಯೆ ಪರಿಹಾರವಾಗಿದ್ದು ಅಲ್ಪಸಂಖ್ಯಾತ ಹಿಂದೂ ಮತ್ತು ಸಿಖ್ ಸಮುದಾಯದವರು ದೇಶಕ್ಕೆ ಹಿಂತಿರುಗಬೇಕು ಎಂದು ತಾಲಿಬಾನ್ ಹೇಳಿದೆ.

    ಜುಲೈ 24ರಂದು ತಾಲಿಬಾನ್ ಸಹಾಯಕ ಸಚಿವರ ಇಲಾಖೆಯ ಪ್ರಧಾನ ನಿರ್ದೇಶಕ ಡಾ. ಮುಲ್ಲಾ ಅಬ್ದುಲ್ ವಾಸಿ ಹಿಂದು ಮತ್ತು ಸಿಖ್ ಮಂಡಳಿಯ ಹಲವು ಸದಸ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಈ ಹೇಳಿಕೆ ನೀಡಲಾಗಿದೆ ಎಂದು ಸಿಬಂದಿ ಸಚಿವಾಲಯದ ಕಚೇರಿ ಟ್ವೀಟ್ ಮಾಡಿದೆ. ದೇಶದಲ್ಲಿ ಈಗ ಭದ್ರತೆ ಮರುಸ್ಥಾಪನೆಯಾಗಿದ್ದು ದೇಶ ಬಿಟ್ಟು ತೆರಳಿರುವ ಅಲ್ಪಸಂಖ್ಯಾತರು ಮರಳಿ ಬರಬೇಕೆಂದು ಕಾಬೂಲ್ನಲ್ಲಿ ಹಿಂದು ಮತ್ತು ಸಿಖ್ ಸಮುದಾಯದ ಮುಖಂಡರ ನಿಯೋಗವನ್ನು ಭೇಟಿ ಮಾಡಿದ ಸಂದರ್ಭ ವಾಸಿ ದೃಡಪಡಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಸಿಖ್ ಮುಖಂಡರು, ಇಸ್ಲಾಮಿಕ್ ಸ್ಟೇಟ್ ಖೊರಸಾನ್ ಪ್ರಾವಿನ್ಸ್ (ಐಎಸ್ಕೆಪಿ) ಕಾಬೂಲ್ನ ಗುರುದ್ವಾರದ ಮೇಲೆ ನಡೆಸಿದ ದಾಳಿಯನ್ನು ತಡೆದಿರುವುದಕ್ಕೆ ತಾಲಿಬಾನ್ಗೆ ಧನ್ಯವಾದ ಅರ್ಪಿಸಿದರು ಎಂದು ಮೂಲಗಳು ಹೇಳಿವೆ. ಜೂನ್ 18ರಂದು ಐಎಸ್ಕೆಪಿ ಸಂಘಟನೆ ಕಾಬೂಲ್ನ ಕರ್ತೆಪರ್ವಾನ್ ಗುರುದ್ವಾರದ ಮೇಲೆ ನಡೆಸಿದ ದಾಳಿಯಲ್ಲಿ ಇಬ್ಬರು ಹತರಾಗಿದ್ದರು.

ಉಗ್ರರ ದಾಳಿಯಲ್ಲಿ ಹಾನಿಗೊಂಡಿರುವ ಗುರುದ್ವಾರವನ್ನು ನವೀಕರಿಸಲು ಅಫ್ಗಾನ್ನಲ್ಲಿನ ತಾಲಿಬಾನ್ ನೇತೃತ್ವದ ಸರಕಾರ ನಿರ್ಧರಿಸಿದ್ದು ಹಾನಿಯ ನಷ್ಟವನ್ನು ಅಂದಾಜು ಮಾಡಲು ತಂತ್ರಜ್ಞರ ತಂಡವನ್ನು ನೇಮಿಸಲಾಗಿದೆ. ಗುರುದ್ವಾರದ ಕಟ್ಟಡ ನವೀಕರಣಕ್ಕೆ ಸರಕಾರ ಸುಮಾರು 7.5 ಮಿಲಿಯನ್ ಅಫ್ಘಾನ್ ಅಫ್ಘಾನಿ (ಅಫ್ಘಾನ್ನ ಕರೆನ್ಸಿ) ವೆಚ್ಚ ಮಾಡಲಾಗುವುದು ಎಂದು ಸರಕಾರದ ಮೂಲಗಳು ಹೇಳಿವೆ. 

ಆಂತರಿಕ ಸಚಿವಾಲಯದ ಉನ್ನತ ಮಟ್ಟದ ನಿಯೋಗವು ಗುರುದ್ವಾರಕ್ಕೆ ಹಲವು ಭೇಟಿ ನೀಡಿ ಮೃತಪಟ್ಟ ಕುಟುಂಬದವರಿಗೆ ಸಂತಾಪ ಸೂಚಿಸಿದೆ ಎಂದು ವರದಿಯಾಗಿದೆ. ಸಿಖ್ ಸಮುದಾಯ ಸೇರಿದಂತೆ ಅಫ್ಘಾನ್ನ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಹಿಂಸಾಚಾರ ಪ್ರಕರಣ ಹೆಚ್ಚುತ್ತಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News