ಪ್ರತಿಭಟನೆಯ ವೇಳೆ ಯೂತ್‌ ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷರ ತಲೆಗೂದಲು ಎಳೆದಾಡಿದ ದಿಲ್ಲಿ ಪೊಲೀಸರು: ವೀಡಿಯೊ ವೈರಲ್‌

Update: 2022-07-26 13:19 GMT
Photo: Twitter/Video screengrab

ಹೊಸದಿಲ್ಲಿ: ಇಂದು ದಿಲ್ಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ಕಾಂಗ್ರೆಸ್‌ ಮುಖಂಡರನ್ನು ಬಂಧಿಸಲಾಗಿದ್ದು, ಯೂತ್‌ ಕಾಂಗ್ರೆಸ್‌ ಮುಖ್ಯಸ್ಥ ಬಿ.ವಿ ಶ್ರೀನಿವಾಸ್‌ ಅವರ ತಲೆಗೂದಲನ್ನು ಪೊಲೀಸರು ಎಳೆದಾಡಿದ ದೃಶ್ಯ ವಿಡಿಯೋದಲ್ಲಿ ಕಂಡುಬಂದಿದೆ.

"ಅವರು ನನಗೆ ಹೊಡೆದರು. ಅವರು ನನ್ನ ಕೂದಲನ್ನು ಎಳೆದರು" ಎಂದು ಶ್ರೀನಿವಾಸ್ ಹೇಳುತ್ತಿರುವುದು, ಇದಕ್ಕೂ ಮುನ್ನ ಪೋಲೀಸರೊಬ್ಬರು ಅವರ ತಲೆಗೂದಲು ಹಿಡಿದು ಎಳೆದಾಡಿದ್ದು ವೀಡಿಯೋದಲ್ಲಿ ಸೆರೆಯಾಗಿದೆ. ಒಬ್ಬ ಪೋಲೀಸ್ ಅವರನ್ನು ಕಾರಿನೊಳಗೆ ತಳ್ಳುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ.

ಈ ವಿಡಿಯೋವನ್ನು ಹಲವು ಕಾಂಗ್ರೆಸ್ ನಾಯಕರು ಶೇರ್ ಮಾಡಿದ್ದು, ಪ್ರತಿಭಟನಾಕಾರರ ಮೇಲೆ ದಬ್ಬಾಳಿಕೆ ನಡೆಸಿರುವುದನ್ನು ಖಂಡಿಸಿದ್ದಾರೆ. ವಿಡಿಯೋದಲ್ಲಿ ಕಾಣುವ ತನ್ನ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ದಿಲ್ಲಿ ಪೊಲೀಸರು ತಿಳಿಸಿದ್ದಾರೆ.

"ನಾವು ಸಿಬ್ಬಂದಿಯನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ. ಗುರುತಿಸಿದ ನಂತರ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮವನ್ನು ಪ್ರಾರಂಭಿಸಲಾಗುವುದು" ಎಂದು ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಹಲವು ಮುಖಂಡರನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ಪ್ರಶ್ನಿಸಿದ್ದನ್ನು ವಿರೋಧಿಸಿ, ಬೆಲೆ ಏರಿಕೆ, ಜಿಎಸ್‌ಟಿ ಮತ್ತು ನಿರುದ್ಯೋಗದಂತಹ ಇತರ ವಿಷಯಗಳ ವಿರುದ್ಧ ಅವರು ಪ್ರತಿಭಟನೆ ನಡೆಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News