ಸ್ಪೈಸ್ ಜೆಟ್ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿಲ್ಲ: ಕೇಂದ್ರ ಸರಕಾರ

Update: 2022-07-26 16:10 GMT

 ಹೊಸದಿಲ್ಲಿ,ಜು.26: ಈ ತಿಂಗಳ ಆರಂಭದಲ್ಲಿ ನಡೆಸಲಾದ ಸ್ಥಳ ತಪಾಸಣೆಯ ಸಂದರ್ಭದಲ್ಲಿ ಸ್ಪೈಸ್ ಜೆಟ್ ವಿಮಾನವು ಪ್ರಮುಖ ಸುರಕ್ಷತಾ ನಿಮಯಗಳನ್ನು ಉಲ್ಲಂಘಿಸಿರುವ ಯಾವುದೇ ನಿದರ್ಶನಗಳು ನಾಗರಿಕ ವಾಯುಯಾನ ಇಲಾಖೆಯ ಮಹಾನಿರ್ದೇಶನಾಲಯಕ್ಕೆ ಕಂಡುಬಂದಿಲ್ಲವೆಂದು ಕೇಂದ್ರ ಸರಕಾರವು ಸೋಮವಾರ ಲೋಕಸಭೆಗೆ ತಿಳಿಸಿದೆ.

ಕಳೆದ 30 ದಿನಗಳಲ್ಲಿ  ಸ್ಪೈಸ್ ಜೆಟ್ ವಿಮಾನಗಳ ತಾಂತ್ರಿಕ ದೋಷಕ್ಕೆ ಸಂಬಂಧಿಸಿದ ಕನಿಷ್ಠ 9 ಘಟನೆಗಳು ವರದಿಯಾದ ಬಳಿಕ ಕೇಂದ್ರ ಸರಕಾರ ಈ ಹೇಳಿಕೆ ನೀಡಿದೆ.

ಜುಲೈ 9ರಿಂದ ಜುಲೈ 13ರವರೆಗೆ ನಾಗರಿಕ ವಾಯುಯಾನ ನಿಯಂತ್ರಣ ಪ್ರಾಧಿಕಾರವು ಎಲ್ಲಾ  ಸ್ಪೈಸ್ ಜೆಟ್ ವಿಮಾನಗಳ ಸ್ಥಳತಪಾಸಣೆ (ಸ್ಪಾಟ್ ಚೆಕ್)ಗಳನ್ನು ನಡೆಸಿದೆಯೆಂದು ಕೇಂದ್ರ ಸಹಾಯಕ ನಾಗರಿಕ ವಾಯುಯಾನ ಸಚಿವ ವಿ.ಕೆ.ಸಿಂಗ್ ತಿಳಿಸಿದ್ದಾರೆ.

 48 ವಿಮಾನಗಳಲ್ಲಿ ಒಟ್ಟು 53 ಸ್ಥಳ ತಪಾಸಣೆ (ಸ್ಪಾಟ್ಚೆಕ್)ಗಳನ್ನು ನಡೆಸಲಾಗಿದ್ದು, ಯಾವುದೇ ಗಣನೀಯ ಮಟ್ಟದ ಸುರಕ್ಷತಾ ಉಲ್ಲಂಘನೆಗಳು ಆಗಿರುವುದು ಪತ್ತೆಯಾಗಿಲ್ಲ’’ ಎಂದವರು ತಿಳಿಸಿದ್ದಾರೆ.

 ಸ್ಪೈಸ್ ಜೆಟ್ ವಿಮಾನಗಳ ಪೈಕಿ ಗುರುತಿಸಲಾದ ಹತ್ತು ವಿಮಾನಗಳನ್ನು ಅವುಗಳಲ್ಲಿ ವರದಿಯಾಗಿರುವ ಎಲ್ಲಾ ನ್ಯೂನತೆ ಅಥವಾ ಲೋಪಗಳನ್ನು ಸರಿಪಡಿಸಲಾಗಿದೆಯೆಂದು ಡಿಜಿಸಿಎ ದೃಢಪಡಿಸುವವರೆಗೆ ಅವುಗಳು ಕಾರ್ಯಾಚರಿಸುವಂತಿಲ್ಲವೆಂದು ಆ ಸಂಸ್ಥೆಗೆ ಸೂಚನೆ ನೀಡಲಾಗಿದೆಯೆಂದು ಸಚಿವರು ತಿಳಿಸಿದರು.

 ಸ್ಪೈಸ್ ಜೆಟ್ ಸಂಸ್ಥೆಯ ಸುರಕ್ಷತಾ ಮಾನದಂಡಗಳು ಕೆಳದರ್ಜೆಗೆ ಇಳಿದಿರುವ ಬಗ್ಗೆ ವಿವರಣೆ ನೀಡುವಂತೆ ಕೋರಿ ನಾಗರಿಕ ವಾಯುಯಾನ ಮಹಾನಿರ್ದೇಶನಾಲಯವು ಜುಲೈ 6ರಂದು ಕೇಂದ್ರ ಸರಕಾರಕ್ಕೆ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News