×
Ad

ಚೀನಾ ಉಡಾಯಿಸಿದ ರಾಕೆಟ್ ನ ಅವಶೇಷ ಭೂಮಿಗೆ ಬೀಳುವ ಸಾಧ್ಯತೆ: ವರದಿ

Update: 2022-07-26 22:51 IST

   ನ್ಯೂಯಾರ್ಕ್, ಜು.26: ಚೀನಾವು ಇತ್ತೀಚೆಗೆ ಹೈನಾನ್ ಪ್ರಾಂತದಿಂದ ಬಾಹ್ಯಾಕಾಶಕ್ಕೆ ಉಡಾಯಿಸಿದ ರಾಕೆಟ್ ನ ಅವಶೇಷಗಳು ಭೂಮಿಯ ಮೇಲೆ ಬೀಳುವ ನಿರೀಕ್ಷೆಯಿದೆ ಎಂದು ‘ನ್ಯೂಸ್ವೀಕ್’ ಸುದ್ಧಿಸಂಸ್ಥೆ ವರದಿ ಮಾಡಿದೆ. ರವಿವಾರ ಚೀನಾವು ರಾಕೆಟ್ ಅನ್ನು ಬಾಹ್ಯಾಕಾಶಕ್ಕೆ ಉಡಾಯಿಸಿದ್ದು ಅದು ಯಾವಾಗ ಮರಳುತ್ತದೆ ಎಂಬ ಬಗ್ಗೆ ಮಾಹಿತಿಯಿಲ್ಲ.

ರವಿವಾರ ಹೈನಾನ್ ಪ್ರಾಂತದಿಂದ ಅಂತರಿಕ್ಷಕ್ಕೆ ಉಡಾವಣೆಗೊಂಡ ಲಾಂಗ್ಮಾರ್ಚ್ 5ಬಿ ರಾಕೆಟ್ ತನ್ನೊಂದಿಗೆ ಪ್ರಯೋಗದ ಮಾಡ್ಯೂಲ್, ಸೌರಶಕ್ತಿಯ ಪ್ರಯೋಗಾಲಯವನ್ನು ಬಾಹ್ಯಾಕಾಶದಲ್ಲಿರುವ ಚೀನಾದ ತಿಯಾಂಗ್ಗಾಂಗ್ ಅಂತರಿಕ್ಷ ನಿಲ್ದಾಣಕ್ಕೆ ರವಾನಿಸುವ ಗುರಿ ಹೊಂದಿದೆ. ಆದರೆ, ರಾಕೆಟ್‌ನ ಜತೆಗಿರುವ ಪ್ಯಾಕೇಜ್ ಗಳ ಅಗಾಧತೆಯಿಂದಾಗಿ ಈ ರಾಕೆಟ್ ಬಾಹ್ಯಾಕಾಶದ ವಾತಾವರಣದಲ್ಲಿ ಉರಿದು ಹೋಗಬಹುದು ಎಂದು ಆತಂಕ ವ್ಯಕ್ತವಾಗಿದೆ.

ಸಾಮಾನ್ಯ ಸಂದರ್ಭಗಳಲ್ಲಿ, ಪ್ರಥಮ ಹಂತದಲ್ಲಿ ರಾಕೆಟ್‌ನ ಎಲ್ಲಾ ಇಂಧನ ಉರಿದು ಕಾಲಿಯಾದಾಗ ಕಾಲಿಯಾದ ಭಾಗವು ಬೇರ್ಪಡುವ ಮೂಲಕ ಹೆಚ್ಚುವರಿ ಭಾರ ತುಸು ಕಡಿಮೆಯಾಗುತ್ತದೆ ಮತ್ತು ಬೇರ್ಪಟ್ಟ ಭಾಗ ಭೂಮಿಯತ್ತ ಬೀಳುತ್ತದೆ. ಆ ಸಂದರ್ಭದಲ್ಲಿ ಅವು ವಾತಾವರಣದಲ್ಲಿ ಉರಿದುಹೋಗುತ್ತದೆ.

ಆದರೆ ಚೀನಾದ ರಾಕೆಟ್ ಜತೆಗಿದ್ದ ಮಾಡ್ಯೂಲ್ 23,000 ಕಿ.ಗ್ರಾಂ ತೂಕವಿದ್ದರೆ, ಲಾಂಗ್ಮಾರ್ಚ್ 5ಬಿ ರಾಕೆಟ್ ಕೂಡಾ 176 ಅಡಿ ಎತ್ತರ ಮತ್ತು 1.8 ಮಿಲಿಯನ್ ಪೌಂಡ್ಗೂ ಹೆಚ್ಚು ಭಾರವಿದೆ. ಈ ಹಿಂದಿನ ಉದಾಹರಣೆಯ ಪ್ರಕಾರ, 100 ಅಡಿಗಿಂತ ಉದ್ದದ ಲೋಹದ ವಸ್ತು ಗಂಟೆಗೆ ನೂರಾರು ಕಿ.ಮೀ ವೇಗದಲ್ಲಿ ಭೂಮಿಗೆ ಬೀಳುವ ಸಾಧ್ಯತೆಯೇ ಹೆಚ್ಚು ಎಂದು ಖಗೋಳಶಾಸ್ತ್ರಜ್ಞ ಜೊನಾಥನ್ ಮೆಕ್ಡೊವೆಲ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News