ಬೆಳ್ಳಾರೆ: ಸಚಿವ, ಸಂಸದರಿಗೆ ಕಾರ್ಯಕರ್ತರಿಂದ ಘೇರಾವ್: ಪರಿಸ್ಥಿತಿ ನಿಯಂತ್ರಣಕ್ಕೆ ಲಾಠಿಚಾರ್ಜ್

Update: 2022-07-27 10:07 GMT

ಬೆಳ್ಳಾರೆ, ಜು.27: ಮಂಗಳವಾರ ರಾತ್ರಿ ಹತ್ಯೆಯಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ ಅಂತಿಮ ಯಾತ್ರೆ ಬೆಳ್ಳಾರೆಗೆ ಆಗಮಿಸಿದ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗು ಸಚಿವರಾದ ಸುನೀಲ್ ಕುಮಾರ್ ,ಎಸ್. ಅಂಗಾರರಿಗೆ ಘೇರಾವ್ ಹಾಕಿದ ಕಾರ್ಯಕರ್ತರು ಧಿಕ್ಕಾರ ಕೂಗಿದರು. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಪ್ರವೀಣ್ ನೆಟ್ಟಾರು ಅವರ ಮೃತದೇಹದ ಅಂತಿಮ ಯಾತ್ರೆಯ ಮೆರವಣಿಗೆ ‍1 ಗಂಟೆ ಸುಮಾರಿಗೆ ಬೆಳ್ಳಾರೆ ತಲುಪಿತು. ಈ ವೇಳೆ ಅಂತಿಮ ದರ್ಶನ ಪಡೆಯಲು ಆಗಮಿಸಿದ ಬಿಜೆಪಿ ಹಾಗೂ ಆರೆಸ್ಸೆಸ್ ಮುಖಂಡರಿಗೆ ಘೇರಾವ್ ಹಾಕಿ, ಧಿಕ್ಕಾರ ಕೂಗಿ ಪಕ್ಷದ ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸಿದರು. 

ನಳಿನ್ ಅವರ ಕಾರನ್ನು ಅಡ್ಡಗಟ್ಟಿ, ಅಲುಗಾಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ, ರಾಜ್ಯದಲ್ಲಿ ನಮ್ಮದೇ ಸರಕಾರವಿದ್ದರೂ ಕಾರ್ಯಕರ್ತರನ್ನು ಉಳಿಸಿಕೊಳ್ಳಲು ಏಕೆ ಆಗುತ್ತಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಸಂಸದ, ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

 ಪ್ರವೀಣ್ ಮೃತದೇಹದ ಮೆರವಣಿಗೆ ಮೃತರ ಮನೆ ಪರಿಸರ ತಲುಪಿದಾಗ ಆಕ್ರೋಶ ಸ್ಫೋಟಗೊಂಡು ಕಲ್ಲು ತೂರಾಟ ನಡೆದಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದರು. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರು ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News