ವೆಸ್ಟ್‌ ಇಂಡೀಸ್ ವಿರುದ್ಧ ಏಕದಿನ ಸರಣಿ: ಕ್ಲೀನ್‍ಸ್ವೀಪ್ ಸಾಧಿಸಿದ ಭಾರತ

Update: 2022-07-28 04:31 GMT

PC: @ICC | Twitter

ಪೋರ್ಟ್ ಆಫ್ ಸ್ಪೇನ್: ಶುಭಮನ್ ಗಿಲ್ ಅವರು ತಮ್ಮ ಚೊಚ್ಚಲ ಶತಕದ ಅವಕಾಶವನ್ನು ಕಳೆದುಕೊಂಡರೂ, ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಅತಿಥೇಯ ವೆಸ್ಟ್ ಇಂಡೀಸ್ ತಂಡವನ್ನು 119 ರನ್‍ಗಳ ಭಾರಿ ಅಂತರದಿಂದ ಸೋಲಿಸಿದ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದೆ.

ಶುಭಮನ್ ಗಿಲ್ ತಮ್ಮ ಅದ್ಭುತ ಇನಿಂಗ್ಸ್ ನಲ್ಲಿ ಔಟಾಗದೇ 98 ರನ್ ಗಳಿಸಿದರು. ಮಳೆಬಾಧಿತ ಪಂದ್ಯದಲ್ಲಿ ಭಾರತ 36 ಓವ‌ರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 225 ರನ್‍ಗಳನ್ನು ಗಳಿಸಿತು. ಗಿಲ್ ಅವರ ಜೀವಮಾನದ ಗರಿಷ್ಠ ಸ್ಕೋರ್ (98 ನಾಟೌಟ್) ಮತ್ತು ನಾಯಕ ಶಿಖರ್ ಧವನ್ (74 ಎಸೆತಗಳಲ್ಲಿ 58) ಅವರ ಅರ್ಧಶತಕಗಳು ಭಾರತ ಗೌರವಾರ್ಹ ಮೊತ್ತ ಕಲೆಹಾಕಲು ನೆರವಾದವು.‌

ಡಿಎಲ್‍ಎಸ್ ನಿಯಮಾವಳಿ ಅನ್ವಯ ವೆಸ್ಟ್ ಇಂಡೀಸ್‍ನ ಗೆಲುವಿಗೆ 35 ಓವರ್‌ ಗಳಲ್ಲಿ 257 ರನ್‍ಗಳ ಗುರಿ ನಿಗದಿಪಡಿಸಲಾಯಿತು. ಮೊಹ್ಮದ್ ಸಿರಾಜ್ (3 ಓವರ್‍ಗಳಲ್ಲಿ 14 ರನ್‍ಗೆ 2 ವಿಕೆಟ್) ನೇತೃತ್ವದ ಬಿಗಿ ಬೌಲಿಂಗ್ ದಾಳಿಗೆ ಕಂಗೆಟ್ಟ ವೆಸ್ಟ್ ಇಂಡೀಸ್ ಕೇವಲ 26 ಓವರ್‍ಗಳಲ್ಲಿ 137 ರನ್‍ಗಳಿಗೆ ಆಲೌಟ್ ಆಯಿತು.

ಸ್ಪಿನ್ನರ್ ಯಜುವೇಂದ್ರ ಚಹಲ್ (4 ಓವರ್‍ಗಳಲ್ಲಿ 17ಕ್ಕೆ 4) ಮತ್ತು ಅಕ್ಷರ್ ಪಟೇಲ್ (6 ಓವರ್‍ಗಳಲ್ಲಿ 38ಕ್ಕೆ 1), ವೇಗದ ಬೌಲರ್ ಶಾರ್ದೂಲ್ ಠಾಕೂರ್ (5 ಓವರ್‍ಗಳಲ್ಲಿ 17ಕ್ಕೆ 2) ವೆಸ್ಟ್ ಇಂಡೀಸ್‍ನ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ವೆಸ್ಟ್ ಇಂಡೀಸ್ ಪರವಾಗಿ ಬ್ರೆಂಡನ್ ಕಿಂಗ್ (37 ಎಸೆತಗಳಲ್ಲಿ 42) ಮತ್ತು ನಿಲೋಲಸ್ ಪೂರನ್ (32 ಎಸೆತಗಳಲ್ಲಿ 42) ಮಾತ್ರ ಪ್ರತಿರೋಧ ತೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News