ಪ್ರವೀಣ್ ಮನೆಗೆ ಭೇಟಿ ನೀಡುವಾಗ ಮಸೂದ್ ಮನೆಗೂ ಭೇಟಿ ನೀಡಿ: ಸಿಎಂ ಬೊಮ್ಮಾಯಿಗೆ ಮುನೀರ್ ಕಾಟಿಪಳ್ಳ ಆಗ್ರಹ

Update: 2022-07-28 10:10 GMT

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಹತ್ಯೆಯಾದ ಪ್ರವೀಣ್ ನೆಟ್ಟಾರು ಅವರ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಲಿದ್ದು, ಇದೇ  ವೇಳೆ ಅದೇ ಗ್ರಾಮದಲ್ಲಿ ವಾರದ ಹಿಂದಷ್ಟೇ ಹತ್ಯೆಗೀಡಾಗಿರುವ ಮಹಮ್ಮದ್ ಮಸೂದ್ ಮನೆಗೂ ಭೇಟಿ ನೀಡಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

'ಬೊಮ್ಮಾಯಿಯವರು ಕರ್ನಾಟಕ ರಾಜ್ಯಕ್ಕೆ ಮುಖ್ಯಮಂತ್ರಿ. ಆರು ಕೋಟಿ ಕನ್ನಡಿಗರಿಗೂ ಅವರೇ ಮುಖ್ಯಮಂತ್ರಿ. ಬಿಜೆಪಿ ಪಕ್ಷದವರಿಗೆ, ಒಂದು ಮತ ಧರ್ಮಕ್ಕೆ ಮಾತ್ರ ಮುಖ್ಯಮಂತ್ರಿ ಅಲ್ಲ.  ಬೆಳ್ಳಾರೆಯಲ್ಲಿ ಕೊಲೆಗೀಡಾದ ಪ್ರವೀಣ್ ನೆಟ್ಟಾರು ಮನೆಗೆ ಇಂದು ನೀವು ಭೇಟಿ ನೀಡುವಾಗ ಅದೇ ಗ್ರಾಮದಲ್ಲಿ ವಾರದ ಹಿಂದೆ ಮತೀಯ ದ್ವೇಷಕ್ಕೆ ಬಲಿಯಾದ ಅಮಾಯಕ ಹುಡುಗ ಮಹಮ್ಮದ್ ಮಸೂದ್ ಮನೆಗೂ ಭೇಟಿ ನೀಡಬೇಕು. ಪ್ರವೀಣ್ ನ ವಿಧವೆ ಹೆಂಡತಿ, ಅನಾಥ ತಂದೆ ತಾಯಿಯರಿಗೆ ಸಾಂತ್ವನ ಹೇಳುವಾಗ, ಮಸೂದ್ ನ ವಿಧವೆ ತಾಯಿಗೂ ಸಾಂತ್ವನ ಹೇಳಬೇಕು' ಎಂದು ತಿಳಿಸಿದ್ದಾರೆ.

'ಯಾವುದೇ ಕಾರಣಕ್ಕು ತಾರತಮ್ಯ ಎಸಗಬಾರದು. ಕೊಲೆ ಗೀಡಾದ ಎರಡೂ ಕುಟುಂಬದ ಹೆಣ್ಣು ಜೀವಗಳು ಸಮಾನವಾಗಿ ನೊಂದಿವೆ. ಮುಖ್ಯಮಂತ್ರಿಗಳೇ ರಾಜಧರ್ಮ ಪಾಲಿಸಿ.‌ ಇಲ್ಲದಿದ್ದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ನೀವು ಅಯೋಗ್ಯರಾಗಿ ಬಿಡುತ್ತೀರಿ. ಕನ್ನಡ ನಾಡಿನ ಮಹಾನ್ ಪರಂಪರೆಗೆ, ಮುಖ್ಯಮಂತ್ರಿ ಸ್ಥಾನದ ಘನತೆಗೆ ಅಪಚಾರ ಎಸಗಬೇಡಿ‌. ಇದು ನಿಮ್ಮಲ್ಲಿ ಕಳಕಳಿಯ ಮನವಿ' ಎಂದು ಮುನೀರ್ ಕಾಟಿಪಳ್ಳ *ಪ್ರಕಟನೆಯಲ್ಲಿ ತಿಳಿಸಿದ್ದಾರೆ*. 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News