ಸುರತ್ಕಲ್; ದುಷ್ಕರ್ಮಿಗಳ ತಂಡದಿಂದ ದಾಳಿ: ಗಾಯಾಳು ಯುವಕ ಮೃತ್ಯು

Update: 2022-07-28 17:12 GMT
ಮುಹಮ್ಮದ್ ಫಾಝಿಲ್

ಮಂಗಳೂರು, ಜು 28: ಮಂಗಳೂರಿನ ಸುರತ್ಕಲ್ ಸಮೀಪ ಯುವಕನೋರ್ವನಿಗೆ ತಂಡವೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡ ಯುವಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಸುರತ್ಕಲ್  ಸಮೀಪದ ಮಂಗಳಪೇಟೆ ನಿವಾಸಿ ಮುಹಮ್ಮದ್ ಫಾಝಿಲ್ (23) ಮೃತರು ಎಂದು ತಿಳಿದು ಬಂದಿದೆ.

ಮೃತ ಫಾಝಿಲ್ ಅವರು ಸುರತ್ಕಲ್ ಎಚ್ ಪಿಸಿಎಲ್ ಗ್ಯಾಸ್ ಕಂಪೆನಿಯಲ್ಲಿ ಗ್ಯಾಸ್ ಸಿಲಿಂಡರ್ ಗಳನ್ನು ಲೋಡ್ ಮಾಡುವ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.‌

ಘಟನೆಯ ವಿವರ: ಮುಹಮ್ಮದ್ ಫಾಝಿಲ್ ಅವರು ಸುರತ್ಕಲ್ ನ ಮೂಡ ಮಾರುಕಟ್ಟೆಯಲ್ಲಿ ಕಾರ್ಯಾಚರಿಸುತ್ತಿರುವ ಸಂತೋಷ್ ಎಂಬವರ‌ ಮಾಲಕತ್ವದ ಬೀಜೇಸ್ ಮಹಿಳೆಯರ ಬಟ್ಟೆಯ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತನನ್ನು ಭೇಟಿ ಮಾಡಿ ಅಂಗಡಿಯಿಂದ ಹೊರ‌ಬರುತ್ತಿದ್ದಂತೆಯೇ ಕಾರಿನಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ತಲವಾರು ದಾಳಿ ನಡೆಸಿದ್ದಾರೆ.‌ ಆಗ ಓಡಿದ ಫಾಝಿಲ್ ರನ್ನು ಅಟ್ಟಡಿಸಿ ತಂಡ ತಲವಾರಿನಿಂದ ದಾಳಿ ಮಾಡಿ ಪರಾರಿಯಾಗಿದೆ.

ದಾಳಿಯಿಂದ ಅವರ ತಲೆ, ಕಾಲು, ಕೈಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.

ಘಟನಗೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು, ಸಿಸಿಬಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದು, ಅಂಗಡಿಯ ಸಿಸಿಟಿವಿ ಫೂಟೇಜ್, ಮತ್ತು ಸಮಿಪದ ಅಂಗಡಿಗಳ‌ ಸಿಸಿಟಿವಿ ಫೂಟೇಜ್ ಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ಆರಂಭಿಸಿದ್ದಾರೆ.

ಘಟನೆಯ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ. ಸ್ಥಳಕ್ಕೆ ಕಮಿಷನರ್ ಶಶಿ ಕುಮಾರ್,  ಕ್ರೈಂ ಡಿಸಿಪಿ ಅನ್ಶುಕ್ ಕುಮಾರ್ ಮೊದಲಾದ ಆಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿಷೇಧಾಜ್ಞೆ ಜಾರಿ

ಮಂಗಳೂರು ಹೊರವಲಯದ ಪಣಂಬೂರು, ಸುರತ್ಕಲ್, ಬಜ್ಪೆ, ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ದಿನಗಳ ಕಾಲ ಸೆಕ್ಷನ್ 144 ವಿಧಿಸಿ ಕಮಿಷನರ್ ಶಶಿಕುಮಾರ್ ಆದೇಶಿಸಿದ್ದಾರೆ.

ಕಾದು ಕುಳಿತು ಕೃತ್ಯ ಎಸಗಿದ ದುಷ್ಕರ್ಮಿಗಳು

ದುಷ್ಕರ್ಮಿಗಳ ತಂಡ ಫಾಝಿಲ್ ರನ್ನು ಹಿಂಬಾಲಿಸಿಕೊಂಡು ಬಂದಿದ್ದರೆನ್ನಲಾಗಿದ್ದು, ಫಾಝಿಲ್ ಬಟ್ಟೆ ಅಂಗಡಿಗೆ ಹೋಗುವುದನ್ನು ಕಂಡು ಅಣತಿ ದೂರದಲ್ಲಿ ಕಾರು ನಿಲ್ಲಿಸಿ ಕೃತ್ಯ ಎಸಗಲು ಕಾದು ನಿಂತಿದ್ದರು ಎನ್ನಲಾಗಿದೆ. ಫಾಝಿಲ್ ಬಟ್ಟೆ ಮಳಿಗೆಯಿಂದ ಹೊರಬರುತ್ತಿದ್ದಂತೆ ತಂಡ ಮಾರಕಾಸ್ತ್ರಗಳಿಂದ ಏಕಾಏಕಿ ದಾಳಿ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News