17 ವರ್ಷಕ್ಕಿಂತ ಮೇಲ್ಪಟ್ಟವರು ಮತದಾರರ ಗುರುತು ಪತ್ರಕ್ಕೆ ಅರ್ಜಿ ಸಲ್ಲಿಸಬಹುದು: ಚುನಾವಣಾ ಆಯೋಗ
Update: 2022-07-28 23:55 IST
ಭೋಪಾಲ್, ಜು. 28: ಹದಿನೇಳು ವರ್ಷಕ್ಕಿಂತ ಮೇಲ್ಪಟ್ಟ ಯುವ ಜನರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಮುಂಗಡವಾಗಿ ಅರ್ಜಿ ಸಲ್ಲಿಸಬಹುದು. ಈ ವರ್ಷದ ಜನವರಿ 1ಕ್ಕೆ 18 ವರ್ಷ ಪ್ರಾಯ ಪೂರ್ತಿಯಾಗಿರಬೇಕು ಎಂಬ ಪೂರ್ವಾಪೇಕ್ಷಿತ ಮಾನದಂಡಕ್ಕೆ ಕಾಯಬೇಕಾಗಿಲ್ಲ ಎಂದು ಚುನಾವಣಾ ಆಯೋಗ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಜನವರಿ 1 ಮಾತ್ರವಲ್ಲದೆ ತರುವಾಯದ ಮೂರು ಅರ್ಹ ದಿನಾಂಕಗಳಾದ ಎಪ್ರಿಲ್ 1, ಜುಲೈ 1 ಹಾಗೂ ಅಕ್ಟೋಬರ್ 1ರಂದು ಮುಂಗಡವಾಗಿ ಯುವಜನತೆ ಅರ್ಜಿ ಸಲ್ಲಿಸಲು ಸಾಧ್ಯವಾಗಲು ಕಾರ್ಯ ನಿರ್ವಹಿಸುವಂತೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹಾಗೂ ಚುನಾವಣಾ ಆಯುಕ್ತ ಅನೂಪ್ ಚಂದ್ರ ಪಾಂಡೆ ನೇತೃತ್ವದ ಆಯೋಗ ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳು ಹಾಗೂ ಮತದಾರ ನೋಂದಣಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ನೋಂದಣಿಯಾದ ಬಳಿಕ ಯುವಜನತೆಗೆ ಮತದಾರರ ಗುರುತು ಪತ್ರ ನೀಡಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ.