ಮನೀಷಾ ರೊಪೇಟಾ ಪಾಕಿಸ್ತಾನದ ಮೊಟ್ಟಮೊದಲ ಹಿಂದೂ ಹಿರಿಯ ಪೊಲೀಸ್ ಅಧಿಕಾರಿ

Update: 2022-07-29 02:42 GMT
ಮನೀಷಾ ರೊಪೇಟಾ (ಫೋಟೊ: Twitter.com)

ಇಸ್ಲಾಮಾಬಾದ್: ಮನೀಷಾ ರೊಪೇಟಾ ಪಾಕಿಸ್ತಾನದಲ್ಲಿ ಉಪ ಪೊಲೀಸ್ ಅಧೀಕ್ಷಕರಾಗಿ ಆಯ್ಕೆಯಾದ ಮೊಟ್ಟಮೊದಲ ಹಿಂದೂ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಸಿಂಧ್ ಪೊಲೀಸ್ ಇಲಾಖೆಯಲ್ಲಿ 26 ವರ್ಷ ವಯಸ್ಸಿನ ಮನೀಷಾ ರೊಪೇಟಾ ಸೇರ್ಪಡೆಯಾಗಿದ್ದು, ಅಧಿಕಾರಯುತ ಹುದ್ದೆಯಲ್ಲಿರುವ ಕೆಲವೇ ಮಹಿಳಾ ಅಧಿಕಾರಿಗಳಲ್ಲಿ ಇವರೂ ಒಬ್ಬರು ಎಂದು hindustantimes.com ವರದಿ ಮಾಡಿದೆ.

ಪಾಕಿಸ್ತಾನದ ಪುರುಷ ಪ್ರಧಾನ ಸಮಾಜ ಮತ್ತು ಸಂಸ್ಕೃತಿಯಲ್ಲಿ ಪೊಲೀಸ್ ಪಡೆಯಂಥ ವೃತ್ತಿಗೆ ಮಹಿಳೆಯರು ಸೇರುವುದು ನಿಯಕ್ಕೂ ಕಷ್ಟಕರ.

"ಬಾಲ್ಯದಿಂದಲೂ ನಾನು ಹಾಗೂ ಸಹೋದರಿ ಇಬ್ಬರೂ ಹಳೆಯ ಪುರುಷ ಪ್ರಧಾನ ವ್ಯವಸ್ಥೆಯಲ್ಲೇ ಬೆಳೆದಿದ್ದೇವೆ. ಸುಶಿಕ್ಷಿತರಾಗಿ ಉದ್ಯೋಗ ಮಾಡಬೇಕಾದರೆ ಶಿಕ್ಷಕಿ ಅಥವಾ ವೈದ್ಯೆ ಹುದ್ದೆ ಮಾತ್ರ ಎಂಬ ಭಾವನೆ ಇತ್ತು" ಎಂದು ಸಿಂಧ್ ಪ್ರಾಂತ್ಯದ ಜಾಕೋಬಾಬಾದ್‍ನ ಮನೀಷಾ ರೊಪೇಟಾ ಹೇಳುತ್ತಾರೆ.

ಒಳ್ಳೆಯ ಕುಟುಂಬದ ಹಿನ್ನೆಲೆಯ ಹುಡುಗಿಯರು ಪೊಲೀಸ್ ಅಥವಾ ಜಿಲ್ಲಾ ನ್ಯಾಯಾಲಯಗಳ ಹುದ್ದೆಗಳಿಗೆ ಹೋಗಬಾರದು ಎಂಬ ಭಾವನೆಯನ್ನು ಕೊನೆಗೊಳಿಸಲು ತಾವು ಬಯಸಿದ್ದಾಗಿ ಸಿಂಧ್ ಪ್ರಾಂತ್ಯದ ಜಾಕೋಬಾಬಾದ್‍ನ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಮನೀಷಾ ರೊಪೇಟಾ ಹೇಳಿದ್ದಾರೆ.

"ಮಹಿಳೆಯರು ಅತ್ಯಂತ ದಮನಕ್ಕೆ ಒಳಗಾದವರು ಹಾಗೂ ಬಹುತೇಕ ಅಪರಾಧಗಳು ಸಮಾಜದಲ್ಲಿ ಮಹಿಳೆಯರನ್ನೇ ಗುರಿ ಮಾಡಿ ನಡೆಯುತ್ತವೆ. ಸಮಾಜದಲ್ಲಿರುವ ಮಹಿಳೆಯರಿಗೆ ಸಂರಕ್ಷಕರ ಅಗತ್ಯವಿದೆ ಎಂಬ ಭಾವನೆ ನನ್ನಲ್ಲಿರುವುದರಿಂದ ಪೊಲೀಸ್ ಪಡೆ ಸೇರಿದ್ದೇನೆ" ಎಂದು ಅವರು ಸ್ಪಷ್ಟಪಡಿಸಿದರು.

ಪ್ರಸ್ತುತ ತರಬೇತಿಯಲ್ಲಿರುವ ಮನೀಷಾ ರೊಪೇಟಾ ಅವರನ್ನು ಅಪರಾಧ ಪೀಡಿತ ಲೈಯಾರಿ ಪ್ರದೇಶಕ್ಕೆ ನಿಯೋಜಿಸುವ ಸಾಧ್ಯತೆ ಇದೆ. ಹಿರಿಯ ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುವುದು ಮಹಿಳೆಯರ ಸಬಲೀಕರಣಕ್ಕೆ ಕಾರಣವಾಗುತ್ತದೆ ಹಾಗೂ ಅವರಿಗೆ ಅಧಿಕಾರ ನೀಡುತ್ತದೆ ಎಂದು ಮನೀಷಾ ರೊಪೇಟಾ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News