‘ಉಚಿತ’ಗಳು ಖಚಿತವಾಗಬೇಕೇ ಹೊರತು ಕಡಿತವಾಗಬಾರದು

Update: 2022-07-29 03:01 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಹಣದುಬ್ಬರ, ಬೆಲೆ ಏರಿಕೆ, ಆರ್ಥಿಕ ಸ್ಥಗಿತ, ಹೆಚ್ಚುತ್ತಿರುವ ನಿರುದ್ಯೋಗ ಹಾಗೂ ಅರೆ-ಉದ್ಯೋಗಗಳಿಂದ ಈ ದೇಶದ ಮುಕ್ಕಾಲುವಾಸಿ ಜನ ಎರಡು ಹೊತ್ತು ಹೊಟ್ಟೆ ತುಂಬಾ ಊಟ ಮಾಡುವುದೇ ಕಷ್ಟವಾಗುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಮೊನ್ನೆ ವಿರೋಧಿ ರಾಜಕೀಯ ಪಕ್ಷಗಳ ‘ರೇವ್ಡಿ’ (ಉಚಿತಗಳ ಭರವಸೆ) ಸಂಸ್ಕೃತಿಯ ಬಗ್ಗೆ ಲೇವಡಿ ಮಾಡಿದ್ದಾರೆ ಹಾಗೂ ಈ ಬಗೆಯ ಉಚಿತಗಳ ರಾಜಕಾರಣ ಮಾಡಿದರೆ ಭಾರತದ ಬೊಕ್ಕಸವೂ ಬರಿದಾಗಿ ದೇಶವು ಶ್ರೀಲಂಕಾದ ದಾರಿ ಹಿಡಿಯಬಹುದು ಎಂದು ಎಚ್ಚರಿಸಿದ್ದಾರೆ.

ಅವರ ಸೂಚನೆಗಾಗಿಯೇ ಕಾಯುತ್ತಿದ್ದ ಆಳುವ ಪಕ್ಷದ ವಕೀಲ ಅಶ್ವಿನ್ ಉಪಾಧ್ಯ ಎಂಬವರು ರಾಜಕೀಯ ಪಕ್ಷಗಳು ಈ ರೀತಿ ಉಚಿತ ಭರವಸೆ ಕೊಟ್ಟು ದೇಶದ ಆರ್ಥಿಕತೆಯನ್ನು ದಿಕ್ಕು ತಪ್ಪಿಸುವುದಕ್ಕೆ ಕಡಿವಾಣ ಹಾಕಬೇಕೆಂದು ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದಾರೆ. ಈ ವಕೀಲರು ಸಾರ್ವಜನಿಕ ಹಿತಾಸಕ್ತಿಯ ಹೆಸರಿನಲ್ಲಿ ಆಳುವ ಪಕ್ಷದ ಹಿತಾಸಕ್ತಿ ಕಾಯುವ ಅರ್ಜಿಗಳನ್ನೇ ಹಾಕುತ್ತಾ ಕೋರ್ಟಿನ ಸಮಯ ಹಾಳು ಮಾಡುತ್ತಿರುವ ಬಗ್ಗೆ ಹಲವಾರು ಬಾರಿ ಎಚ್ಚರಿಕೆ ನೀಡಿದ್ದ ಸುಪ್ರೀಂ ಕೋರ್ಟು ಈ ವಿಷಯವನ್ನು ಮಾತ್ರ ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರಕಾರಕ್ಕೆ ನೋಟೀಸ್ ಜಾರಿ ಮಾಡಿದೆ.

ಅದಕ್ಕೆ ಕೇವಲ ಒಂದು ದಿನದ ಮುನ್ನ ಕೇಂದ್ರದ ಆರ್ಥಿಕ ಇಲಾಖೆ ಇನ್ನು ಮುಂದೆ ಜನರಿಗೆ ಆಹಾರ ಪಡಿತರ ಒದಗಿಸುವ ಬದಲು ಅವರ ಖಾತೆಗಳಿಗೆ ನೇರ ಹಣ ವರ್ಗಾವಣೆ ಮಾಡುವುದರ ಕುರಿತು ಗಂಭೀರವಾಗಿ ಚಿಂತಿಸುತ್ತಿರುವುದಾಗಿ ಬಾಂಬ್ ಹಾಕಿದೆ. ಇದಕ್ಕೆ ಕೇವಲ ಒಂದು ತಿಂಗಳ ಮುನ್ನ ಎಲ್ಲಾ ರಾಜ್ಯಗಳಿಗೆ ಸುತ್ತೋಲೆ ಕಳುಹಿಸಿರುವ ನೀತಿ ಆಯೋಗ ರಾಜ್ಯ ಸರಕಾರಗಳು ಜನರ ಕಲ್ಯಾಣ ಕಾರ್ಯಕ್ರಮಗಳ ಮೇಲೆ ಮಾಡುತ್ತಿರುವ ವೆಚ್ಚವನ್ನು ಕೂಡಲೇ ಕಡಿತಗೊಳಿಸಬೇಕು ಅಥವಾ ಅದಕ್ಕೆ ತಗಲುತ್ತಿರುವ ವೆಚ್ಚವನ್ನು ಜನರಿಂದ ವಸೂಲಿ ಮಾಡಬೇಕೆಂದು ಗಂಭೀರವಾದ ಸಲಹೆ ನೀಡಿದೆ.

ಈ ಎಲ್ಲಾ ಬೆಳವಣಿಗೆಗಳನ್ನು ಸಮಗ್ರವಾಗಿ ಗಮನಿಸಿದರೆ ದೇಶದ ಬಡ-ಮಧ್ಯಮವರ್ಗದ ಮೇಲೆ ಮತ್ತೊಂದು ದೊಡ್ಡ ಪ್ರಹಾರಕ್ಕೆ ಸರಕಾರ ಸಿದ್ಧವಾಗುತ್ತಿರುವಂತೆ ಕಾಣುತ್ತಿದೆ. ವಾಸ್ತವದಲ್ಲಿ ದೇಶದ ಎಲ್ಲಾ ರಾಜಕೀಯ ಪಕ್ಷಗಳು ಅದರಲ್ಲೂ ವಿಶೇಷವಾಗಿ ಆಳುವ ಬಿಜೆಪಿ ಪಕ್ಷವು ಜನರಿಗೆ ಸುಳ್ಳು ಭರವಸೆಗಳನ್ನು ಕೊಡುತ್ತಿರುವುದರಲ್ಲಿ ಮುಂಚೂಣಿಯಲ್ಲಿದೆ. 2014ರಲ್ಲಿ ಭರವಸೆ ಕೊಟ್ಟ ವರ್ಷಕ್ಕೆ ಎರಡು ಕೋಟಿ ಹೊಸ ಉದ್ಯೋಗ ಸೃಷ್ಟಿ, ಕಪ್ಪುಹಣ ವಾಪಸಾತಿಗಳ ಜೊತೆಜೊತೆಗೆ ನೋಟು ನಿಷೇಧದಿಂದ ಕಪ್ಪುಆರ್ಥಿಕತೆಯ ಮೇಲಿನ ನಿಯಂತ್ರಣ, ಜಿಎಸ್‌ಟಿಯಿಂದ ತೆರಿಗೆಯ ಮೂಲಕ ಸರಕುಗಳ ಬೆಲೆ ಇಳಿಕೆಯಾಗುವ ಭರವಸೆಗಳು ಇವು ಯಾವುದನ್ನೂ ಈ ಸರಕಾರ ಈಡೇರಿಸಿಲ್ಲ. ಬದಲಿಗೆ 2014ರ ನಂತರ ನಿರುದ್ಯೋಗ, ಕಪ್ಪುಹಣ ಸೃಷ್ಟಿ, ಸರಕುಗಳ ಬೆಲೆ.. ಎಲ್ಲವೂ ಹೆಚ್ಚಾಗಿವೆ. ಅದರ ಬದಲಿಗೆ ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು, ರೈತ ವಿರೋಧಿ ಕಾಯ್ದೆಗಳು, ಲಾಕ್‌ಡೌನ್...ಇತ್ಯಾದಿಗಳ ಮೂಲಕ ಜನರ ಬದುಕನ್ನು ಮೋದಿ ಸರಕಾರ ಇನ್ನಷ್ಟು ಬೀದಿಪಾಲು ಮಾಡಿದೆ.

ಹಾಗೆ ನೋಡಿದರೆ ನೇರ ನಗದು ವರ್ಗಾವಣೆ ಎಂಬ ನವ ಉದಾರವಾದಿ ಯೋಜನೆಯೇ ಸರಕಾರ ಹಾಗೂ ಸಂಸತ್ತು ಜನರಿಗೆ ಮಾಡುತ್ತಿರುವ ಒಂದು ದೊಡ್ಡ ವಂಚನೆ. ಈಗಾಗಲೇ ಇದೇ ಹೆಸರಿನಲ್ಲಿ ಗ್ಯಾಸ್ ಸಬ್ಸಿಡಿಗಳನ್ನು ಒಂದೆರಡು ವರ್ಷ ನೇರ ನಗದು ವರ್ಗಾವಣೆ ಮಾಡಿದ ಸರಕಾರ ಕಳೆದ ಎರಡು ವರ್ಷಗಳಿಂದ ಅದಕ್ಕಾಗಿ ಬಜೆಟ್‌ನಲ್ಲಿ ಎತ್ತಿಡುತ್ತಿದ್ದ ಮೊತ್ತವನ್ನೇ ಅಧಿಕೃತವಾಗಿ 53,000 ಕೋಟಿಯಿಂದ 10,000 ಕೋಟಿಗೆ ಅಂದರೆ ಶೇ.82ರಷ್ಟು ಕಡಿತ ಮಾಡಿದೆ. ಬರಲಿರುವ ದಿನಗಳಲ್ಲಿ ವಿದ್ಯುತ್, ಗೊಬ್ಬರ ಹಾಗೂ ಇದೀಗ ಪಡಿತರ ಆಹಾರ ಧಾನ್ಯಗಳ ವಿಷಯದಲ್ಲೂ ಹೀಗೆ ನೇರ ನಗದು ವರ್ಗಾವಣೆಯ ಹೆಸರಿನಲ್ಲಿ ಮಹಾನ್ ವಂಚನೆ ಮಾಡಲಿದೆ.

ಸರಕಾರ ತನ್ನನ್ನು ಚುನಾಯಿಸಿದ ಜನರಿಗೆ ಈ ರೀತಿ ಮಾತು ಕೊಟ್ಟು ವಂಚನೆ ಮಾಡುತ್ತಿರುವುದು ಇದನ್ನೆಲ್ಲ ಕೋರ್ಟುಗಳಾಗಲೀ, ಸರಕಾರ-ಪಕ್ಷಗಳಾಗಲೀ, ಪಂಡಿತರಾಗಲೀ ಜನರಿಗೆ ಮಾಡುತ್ತಿರುವ ವಂಚನೆ ಎಂದು ಭಾವಿಸುವುದೇ ಇಲ್ಲ. ಬದಲಿಗೆ ವೋಟಿನ ಸಲುವಾಗಿಯಾದರೂ ಈವರೆಗೆ ಸರಕಾರಗಳು ಜನರಿಗಾಗಿ ವೆಚ್ಚ ಮಾಡುತ್ತಿದ್ದ ಆಹಾರ ಸಬ್ಸಿಡಿ, ಗೊಬ್ಬರ ಸಬ್ಸಿಡಿ, ಸಾಲ ಮನ್ನಾ ಇತ್ಯಾದಿಗಳನ್ನು ಜನರಿಗೆ ವಂಚನೆ, ಆರ್ಥಿಕ ಅಭದ್ರತೆಗೆ ಕಾರಣ ಎಂಬ ಹೆಸರಿನಲ್ಲಿ ಕತ್ತರಿಸುವ ಸುವ್ಯವಸ್ಥಿತ ಯೋಜನೆಯೊಂದು ಶಾಸಕಾಂಗ, ನ್ಯಾಯಾಂಗ ಸೇರಿಯೇ ಮಾಡುತ್ತಿರುವಂತಿದೆ.

ಇದಕ್ಕೆ ಸರಕಾರ ಕೊಡುವ ಕಾರಣ ಬಜೆಟ್‌ನಲ್ಲಿ ಕಮಿಟೆಡ್ ವೆಚ್ಚದಡಿ ಬರುವ ಸಂಬಳ, ಪಿಂಚಣಿ ಮತ್ತು ಸಬ್ಸಿಡಿಗಳ ಗಾತ್ರ ಹೆಚ್ಚುತ್ತಾ ಹೋಗಿ ಅಭಿವೃದ್ಧಿ ವೆಚ್ಚಗಳಿಗೆ ಹಣ ಉಳಿಯುತ್ತಿಲ್ಲ ಎಂಬ ಸಬೂಬು. ಇಲ್ಲಿ ಅಭಿವೃದ್ಧಿ ಎಂದರೆ ದೇಶಿ ಹಾಗೂ ವಿದೇಶಿ ಕಾರ್ಪೊರೇಟ್ ಉದ್ದಿಮೆಗಳಿಗೆ ಬೇಕಿರುವ ಹೈಟೆಕ್ ರಸ್ತೆ, ಬಂದರು, ವಿಮಾನ ನಿಲ್ದಾಣ, ಟೆಲಿಕಾಂ ಸೌಕರ್ಯ ಹಾಗೂ ಅದಕ್ಕೆ ಬೇಕಿರುವ ಬಂಡವಾಳ ಸಬ್ಸಿಡಿಗಳೇ. ಈ ದೇಶದ ಶೇ.85 ಜನರಿಗೆ ಬೇಕಿರುವ ಆಹಾರ, ವಸತಿ, ಆರೋಗ್ಯಗಳನ್ನು ಅಭಿವೃದ್ಧಿಯ ಮೇಲಿನ ಹೂಡಿಕೆಯೆಂದೇ ಚಾಲ್ತಿಯಲ್ಲಿರುವ ನವ ಉದಾರವಾದಿ ರಾಜಕೀಯ-ಆರ್ಥಿಕತೆ ಪರಿಗಣಿಸುವುದಿಲ್ಲ.

ಜನರ ಕಲ್ಯಾಣ ಕಾರ್ಯಕ್ರಮಗಳನ್ನು ಮಾತ್ರ ಒಂದು ಆರ್ಥಿಕ ಹೊರೆಯೆಂದು ಭಾವಿಸುವ ವ್ಯವಸ್ಥೆ, ಈ ದೇಶದ 4-5 ಸಾವಿರ ಕಾರ್ಪೊರೇಟ್ ಉದ್ದಿಮೆಗಳಿಗೆ ವಿಧಿಸುತ್ತಿದ್ದ ತೆರಿಗೆಯನ್ನು ಶೇ.40 ರಿಂದ ಶೇ.25ಕ್ಕೆ ಇಳಿಸಿದ್ದನ್ನು ಅಭಿವೃದ್ಧಿ ಹೂಡಿಕೆ ಎಂದು ಪರಿಗಣಿಸುತ್ತದೆ. ಹಾಗೆಯೇ ಕಳೆದ ಹತ್ತು ವರ್ಷಗಳಲ್ಲಿ ಕಾರ್ಪೊರೇಟ್ ಉದ್ದಿಮೆಗಳಿಗೆ ಮನ್ನಾ ಮಾಡಿರುವ 11 ಲಕ್ಷ ಕೋಟಿ ರೂ. ಸಾಲಗಳನ್ನೂ ಅಭಿವೃದ್ಧಿಗೆ ಪೂರಕ ಎಂದು ಪರಿಗಣಿಸಲಾಗುತ್ತದೆ.

ಆದರೆ ಅದೇ ಸಮಯದಲ್ಲಿ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರ ಈಗ ಇರುವುದಕ್ಕಿಂತ ಅರ್ಧದಷ್ಟಿದ್ದರೂ ಅದರ ಲಾಭವನ್ನು ಜನರಿಗೆ ವರ್ಗಾಯಿಸದೆ ತೆರಿಗೆಯನ್ನು ಎರಡು ಪಟ್ಟು ಜಾಸ್ತಿ ಮಾಡಿ ಜನರಿಂದ ಸುಲಿಯುವುದನ್ನು, ಇದೀಗ ವಜ್ರ-ಚಿನ್ನಗಳ ಮೇಲೆ ಜಿಎಸ್‌ಟಿ ಕಡಿಮೆ ಮಾಡಿ ಜನಸಾಮಾನ್ಯರ ಹಾಲು ಮೊಸರುಗಳ ಮೇಲೆ ಹೆಚ್ಚಿಸಿರುವುದನ್ನು ಅಭಿವೃದ್ಧಿ ಆರ್ಥಿಕತೆ ಎಂದುದೇಶಕ್ಕೆ ಪಾಠ ಮಾಡಲಾಗುತ್ತದೆ.

ತಲೆಕೆಳಗಾಗಿರುವ ಈ ಚಿಂತನೆ ಬದಲಾಗಬೇಕು. ಉಚಿತಗಳೆಂದು ಹೀಯಾಳಿಸಲ್ಪ ಡುವ ಜನರ ಹಕ್ಕಿನ ಹಾಗೂ ಅತ್ಯಗತ್ಯ ಸರಕು ಸೇವೆಗಳನ್ನು ರಿಯಾಯಿತಿ ದರದಲ್ಲಿ ಅಥವಾ ಉಚಿತವಾಗಿ ಕೊಡುವುದನ್ನು ಕಡ್ಡಾಯ ಮಾಡುವ ಶಾಸನ ಬರಬೇಕೇ ಹೊರತು ಉಚಿತವನ್ನು ಕಡಿತ ಮಾಡುವ ಶಾಸನಗಳಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News