×
Ad

ಕನ್ನಡಿಗರಿಗೆ ಉದ್ಯೋಗ: ಸರೋಜಿನಿ ಮಹಿಷಿ ವರದಿ ಏನು ಹೇಳುತ್ತಿದೆ?

Update: 2022-07-30 11:29 IST

ಕನ್ನಡಿಗರಿಗೆ ಉದ್ಯೋಗ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಇತ್ತೀಚೆಗೆ ಪ್ರತ್ಯೇಕ ನೀತಿ ರೂಪಿಸಿದ್ದು, ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳು ಇನ್ನು ಮುಂದೆ ಬಂಡವಾಳ ಹೂಡಿಕೆ ವಿಸ್ತರಣೆ ಮಾಡುವಾಗ ಹೆಚ್ಚುವರಿ ಉದ್ಯೋಗ ಸೃಷ್ಟಿಯ ಭರವಸೆ ನೀಡುವುದು ಕಡ್ಡಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಹಿಂದೆ ಸರೋಜಿನಿ ಮಹಿಷಿ ವರದಿಯ ಶಿಫಾರಸುಗಳ ಆಯ್ದ ಭಾಗವನ್ನು ಇಲ್ಲಿ ನೀಡಲಾಗಿದೆ.

ಯಾವ ಹುದ್ದೆಗಳಲ್ಲಿ ಈಗ ಇರುವ ಕನ್ನಡಿಗರ ಪ್ರಮಾಣ ಕಡಿಮೆ ಇದೆಯೋ ಅಂತಹ ಹುದ್ದೆಗಳಿಗೆ ಕನ್ನಡಿಗರ ಸಂಖ್ಯೆ ನಿರ್ದಿಷ್ಟ ಪ್ರಮಾಣ ತಲುಪುವ ತನಕ ಎಲ್ಲಾ ಖಾಲಿ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸಬೇಕು.

ರಾಜ್ಯ ಸರಕಾರಿ ವಲಯದ ಉದ್ಯಮಗಳಲ್ಲಿ ಉನ್ನತ ಮಟ್ಟದ ತಾಂತ್ರಿಕ ಅರ್ಹತೆಯುಳ್ಳ ಅಭ್ಯರ್ಥಿಗಳು ದೊರೆಯದೆ ಇರುವ ಹುದ್ದೆಗಳನ್ನು ಬಿಟ್ಟು ಇನ್ನುಳಿದ ಎಲ್ಲಾ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸಬೇಕು, ಈ ನೀತಿಯ ಪರಿಪಾಲನೆ ಬಗ್ಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಎಚ್ಚರ ವಹಿಸಬೇಕು.

ಖಾಸಗಿ ಉದ್ಯಮಗಳು ರಾಜ್ಯ ಸರಕಾರದಿಂದ ನೆಲ, ಜಲ, ವಿದ್ಯುತ್ ಮುಂತಾದ ಸೌಲಭ್ಯಗಳನ್ನು ಪಡೆಯುತ್ತಿರುವುದರಿಂದ ಅವುಗಳ ಮೇಲೆ ಒತ್ತಡ ತರಲು ಸಾಧ್ಯವಿದೆ. ಉದ್ಯಮಗಳಲ್ಲಿ ಉನ್ನತ ಮಟ್ಟದ ಆಡಳಿತ ಹುದ್ದೆಗಳನ್ನು ಅವಶ್ಯ ಬಿದ್ದಲ್ಲಿ ಎಲ್ಲಾ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸುವಂತೆ ಕಡ್ಡಾಯ ಮಾಡಬೇಕು. ಉದ್ಯಮಗಳಲ್ಲಿ ಅಪ್ರೆಂಟಿಸ್‌ಗಳನ್ನು ನೇಮಕ ಮಾಡುವಾಗ ಉದ್ಯೋಗ ವಿನಿಮಯ ಕೇಂದ್ರಗಳ ಮೂಲಕ ಆಯ್ಕೆ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅದೇಶಗಳನ್ನು ಹೊರಡಿಸಬೇಕು.

ಕೇಂದ್ರ ಸರಕಾರಿ ವಲಯದ ಉದ್ಯಮಗಳಲ್ಲಿ ಸಿಬ್ಬಂದಿ ಇಲಾಖೆಯಲ್ಲಿ ಮುಖ್ಯಾಧಿಕಾರಿ ಹಾಗೂ ಇತರ ಅಧಿಕಾರಿಗಳಲ್ಲಿ ಹೆಚ್ಚಿನವರು ಕನ್ನಡಿಗರಿರುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ತರಬೇಕು, ಕನ್ನಡಿಗರು ದೊರೆಯದೆ ಇದ್ದಲ್ಲಿ ರಾಜ್ಯ ಸರಕಾರದ ಅಧಿಕಾರಿಗಳನ್ನು ಈ ಹುದ್ದೆಗಳಿಗೆ ಪ್ರತಿನಿಯೋಜನೆಯ ಮೇಲೆ ಪಡೆದು ನೇಮಕ ಮಾಡಬೇಕು, ರಾಜ್ಯ ಸರಕಾರಿ ವಲಯದ ಉದ್ಯಮಗಳಲ್ಲಿ ಕೂಡ ಇದೇ ಪದ್ಧತಿಯನ್ನು ಅನುಸರಿಸಬೇಕು.

 ದಿ ಎಂಪ್ಲಾಯ್‌ಮೆಂಟ್ ಎಕ್ಸ್‌ಚೇಂಜಸ್ (ಕಂಪಲ್ಸರಿ ನೋಟಿಫಿಕೇಷನ್ ಆಫ್ ವೇಕೆನ್ಸೀಸ್) ಆ್ಯಕ್ಟ್ 1959 ಈ ಅಧಿನಿಯಮಕ್ಕೆ ಕೆಳಗೆ ನಮೂದಿಸಿದ ತಿದ್ದುಪಡಿ ಮಾಡುವ ವ್ಯವಸ್ಥೆ ಮಾಡಬೇಕು.

ಅಧಿನಿಯಮದ 4ನೇ ಅನುಚ್ಛೇದವನ್ನು ತಿದ್ದುಪಡಿ ಮಾಡಿ ಖಾಲಿ ಹುದ್ದೆಗಳನ್ನು ಅವಶ್ಯವಾಗಿ ಉದ್ಯೋಗ ವಿನಿಮಯ ಕೇಂದ್ರಗಳಿಗೆ ತಿಳಿಸಿದ ಮೇಲೆ ಅಲ್ಲಿ ಹೆಸರು ನೋಂದಾಯಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಡ್ಡಾಯ ನೇಮಕ ಮಾಡಬೇಕು. ರಾಜ್ಯದ ಯಾವುದೇ ಕೇಂದ್ರದಲ್ಲಿ ಅರ್ಹತೆಯುಳ್ಳ ಅಭ್ಯರ್ಥಿಗಳು ದೊರೆಯದೆ ಇದ್ದಲ್ಲಿ ಮಾತ್ರ ಇತರ ಮೂಲಗಳಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅವಕಾಶ ಇರಬೇಕು.

ಅಕುಶಲ ಕೆಲಸಗಾರರ ಹುದ್ದೆಗಳಿಗೂ ಅಧಿನಿಯಮ ಅನ್ವಯಿಸುವಂತೆ ಮಾಡಲು ಅನುಚ್ಛೇದ ಸಿ(1)(0)ಯನ್ನು ತಿದ್ದುಪಡಿ ಮಾಡಬೇಕು.

ಕರ್ನಾಟಕದಲ್ಲಿ ಎಸೆಸೆಲ್ಸಿ ಅಥವಾ ಪದವಿ ಪರೀಕ್ಷೆ ಪಾಸಾದ ಅಭ್ಯರ್ಥಿಗಳು ಮಾತ್ರ ರಾಜ್ಯದಲ್ಲಿರುವ ರಾಷ್ಟ್ರೀಕೃತ ಬ್ಯಾಂಕುಗಳಿಗೆ ನೇಮಕವಾಗಲು ಅರ್ಹರು ಎಂಬುದಾಗಿ ಪರಿಗಣಿಸುವಂತೆ ಬ್ಯಾಂಕು ನೇಮಕಾತಿ ಮಂಡಳಿಗಳಿಗೆ ಸೂಚಿಸಬೇಕು. ಈ ಮಂಡಳಿಗಳ ಜಾಹೀರಾತುಗಳನ್ನು ಕನಿಷ್ಠ ಒಂದು ರಾಜ್ಯ ಮಟ್ಟದ ಕನ್ನಡ ಪತ್ರಿಕೆಯಲ್ಲಿ ಪ್ರಕಟಿಸಬೇಕು.

ರಾಜ್ಯದಲ್ಲಿರುವ ಎರಡು ರಾಷ್ಟ್ರೀಕೃತ ಬ್ಯಾಂಕುಗಳ ನೇಮಕಾತಿ, ಮಂಡಳಿಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಭಾಷಾ ಜ್ಞಾನವನ್ನು ಕುರಿತು ಒಂದು ಪ್ರಶ್ನೆ ಪತ್ರಿಕೆಯನ್ನು ಸೇರಿಸುವಂತೆ ಸಲಹೆ ನೀಡಬೇಕು.

ಈ ಮಂಡಳಿಗಳು ಅರ್ಜಿಗಳನ್ನು ಆಹ್ವಾನಿಸುವ ಜಾಹೀರಾತುಗಳಲ್ಲಿ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಜ್ಞಾನ ಅವಶ್ಯವೆಂಬುದಾಗಿ ಸೂಚಿಸಬೇಕು.

ಬ್ಯಾಂಕುಗಳಲ್ಲಿ ಕನ್ನಡ ಬಳಕೆಯು ನಾಗರಿಕರ ಅನುಕೂಲತೆಯ ದೃಷ್ಟಿಯಿಂದಲೂ ಇದು ಅವಶ್ಯ. ಆದುದರಿಂದ ರಾಜ್ಯದಲ್ಲಿರುವ ಎಲ್ಲಾ ಬ್ಯಾಂಕುಗಳ ಶಾಖೆಗಳು ಕನ್ನಡದಲ್ಲಿಯೇ ವ್ಯವಹರಿಸುವಂತೆ ಒತ್ತಾಯ ಮಾಡಬೇಕು.

ರಾಜ್ಯದಲ್ಲಿ ಬ್ಯಾಂಕುಗಳ ನೇಮಕಾತಿ ಮಂಡಳಿಗಳನ್ನು ರಚಿಸುವಾಗ ಕೇಂದ್ರ ಸರಕಾರವು ರಾಜ್ಯ ಸರಕಾರವನ್ನು ಸಂಪರ್ಕಿಸುವಂತೆಯೂ ಮತ್ತು ಈ ಮಂಡಳಿಗಳ ಸದಸ್ಯರಲ್ಲಿ ರಾಜ್ಯ ಸರಕಾರದ ಪ್ರತಿನಿಧಿಯನ್ನು ಸೇರಿಸಿ ಬಹು ಸಂಖ್ಯೆಯಲ್ಲಿ ಕನ್ನಡಿಗರನ್ನು ಸೇರಿಸುವಂತೆ ಕೇಂದ್ರ ಸರಕಾರವನ್ನು ರಾಜ್ಯ ಸರಕಾರವು ಒತ್ತಾಯಿಸಬೇಕು.

ಕೆಲವು ಕೇಂದ್ರ ಸರಕಾರಿ ಇಲಾಖೆಗಳು ದೈಹಿಕಶ್ರಮದ ಹಾಗೂ ದಿನಗೂಲಿ ಕೆಲಸಗಳಿಗೆ ಉದ್ಯೋಗ ವಿನಿಮಯ ಕೇಂದ್ರಗಳನ್ನು ಸಂಪರ್ಕಿಸದೆ ಕನ್ನಡೇತರರನ್ನು ನೇರವಾಗಿ ನೇಮಕ ಮಾಡಿ ಕೆಲವು ತಿಂಗಳ ನಂತರ ಅವರ ಸೇವೆಯನ್ನು ಖಾಯಂಗೊಳಿಸುವರು. ಇಂತಹ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಉದ್ಯೋಗ ವಿನಿಮಯ ಕೇಂದ್ರಗಳ ಮೂಲಕ ಆಯ್ಕೆ ಮಾಡುವಂತೆ ಒತ್ತಾಯಿಸಬೇಕು.

 ಮಾಜಿ ಸೈನಿಕರಿಗೆ ಹಾಗೂ ಪರಿಶಿಷ್ಟ ಜಾತಿ/ಬುಡಕಟ್ಟಿನವರಿಗೆ ಮೀಸಲಾಗಿರಿಸಿದ ಹುದ್ದೆಗಳಿಗೆ ಕನ್ನಡೇತರರು ಆಯ್ಕೆಯಾಗುವುದನ್ನು ತಡೆಗಟ್ಟಲು ರಾಜ್ಯ ಸರಕಾರದ ಇಲಾಖೆಗಳಲ್ಲಿ ಮತ್ತು ಎಲ್ಲಾ ಉದ್ಯಮಗಳಲ್ಲಿ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಕನ್ನಡ ಭಾಷಾಜ್ಞಾನ ಅವಶ್ಯವೆಂಬ ನಿಯಮವನ್ನು ರೂಪಿಸಬೇಕು. ರಾಜ್ಯದಲ್ಲಿರುವ ಕೆಲವು ತಾಂತ್ರಿಕ ಮತ್ತು ಇತರ ತರಬೇತಿ ಕೇಂದ್ರಗಳಲ್ಲಿ ಪ್ರವೇಶ ಕೊಡುವಾಗ ಪರಪ್ರಾಂತದ ಅಭ್ಯರ್ಥಿಗಳಿಗೆ ಆದ್ಯತೆ ಕೊಡುತ್ತಿರುವುದು ಮತ್ತು ಅದರಿಂದ ಅವರಿಗೆ ಉದ್ಯೋಗಾವಕಾಶ ದೊರೆತು ಕನ್ನಡಿಗರ ಉದ್ಯೋಗಾವಕಾಶಕ್ಕೆ ಧಕ್ಕೆ ಉಂಟಾಗುತ್ತಿರುವುದು ಸಮಿತಿ ಗಮನಕ್ಕೆ ಬಂದಿದೆ. ಆದುದರಿಂದ ಈ ತರಬೇತಿ ಕೇಂದ್ರಗಳಲ್ಲಿ ಪ್ರವೇಶ ಕನ್ನಡಿಗರಿಗೆ ಮಾತ್ರ ಸೀಮಿತಗೊಳಿಸಬೇಕು. ಅನಿವಾರ್ಯ ಪ್ರಸಂಗಗಳಲ್ಲಿ ಪರ ಪ್ರಾಂತದವರಿಗೆ ಪ್ರವೇಶ ಕೊಟ್ಟರೂ ಅದು ನೂರಕ್ಕೆ 5ಕ್ಕಿಂತ ಹೆಚ್ಚಿರಬಾರದು. (ಶೇ.5)

ಸರಕಾರ ಆದೇಶ ಸಂಖ್ಯೆ ಸಿಐ121ಎಸ್‌ಪಿಸಿ82, ದಿನಾಂಕ 30ನೇ ಅಕ್ಟೋಬರ್ 1982 ಇದರಲ್ಲಿ ಹೊಸ ಕೈಗಾರಿಕಾ ಬಂಡವಾಳ ಹೂಡಿಕೆಗೆ ಆಕರ್ಷಣೆಯಾಗಿ ಪರಿಷ್ಕೃತ ಪ್ರೋತ್ಸಾಹ ಹಾಗೂ ರಿಯಾಯಿತಿಗಳನ್ನು ಘೋಷಿಸಿದೆ. ಈ ಪ್ರೋತ್ಸಾಹ ರಿಯಾಯಿತಿಗಳನ್ನು ಕೊಡುವಾಗ ಕನ್ನಡಿಗರಿಗೆ ಆದ್ಯತೆ ಕೊಡುವಂತೆ ಆದೇಶಿಸಬೇಕು ಮತ್ತು ಸರಕಾರದ ನೆರವನ್ನು ಪಡೆದು ಸ್ಥಾಪಿಸಲಾಗುವ ಕೈಗಾರಿಕೆಗಳು ಕನ್ನಡಿಗರಿಗೇ ಉದ್ಯೋಗಾವಕಾಶವನ್ನು ಕೊಡಬೇಕೆಂಬ ಕರಾರನ್ನು ಹಾಕಬೇಕು.

ಹಿಂದೆ ಕೇಂದ್ರ ಸರಕಾರವು (ಸಂವಿಧಾನದ ಅನುಚ್ಛೇದ 16ರ ಉಪವಾಕ್ಯ (3)ರ ಆಧಾರದ ಮೇಲೆ ‘‘The Public Employment Requirement as to Residence Act 1957’’ 

ಎಂಬ ಕಾಯ್ದೆಯನ್ನು ರಚಿಸಿತ್ತು. ಇದರಂತೆ ಕಾಯ್ದೆ ಅನ್ವಯಿಸುವ ಆಂಧ್ರ ಪ್ರದೇಶ ಇತ್ಯಾದಿ ರಾಜ್ಯಗಳಲ್ಲಿ ಕೆಲವು ಹುದ್ದೆಗಳಿಗೆ ನೇಮಕ ಮಾಡಲ್ಪಡುವ ಅಭ್ಯರ್ಥಿಗಳು ಆಯಾಯಾ ರಾಜ್ಯಗಳಲ್ಲಿ ವಾಸವಾಗಿದ್ದಿರ ಬೇಕೆಂಬ ನಿಯಮಗಳನ್ನು ರಚಿಸಲು ಕೇಂದ್ರ ಸರಕಾರಕ್ಕೆ ಅಧಿಕಾರವನ್ನು ಕೊಡಲಾಗಿತ್ತು. ಈಗ ಕರ್ನಾಟಕದ ಪರವಾಗಿ ಇದೇ ರೀತಿಯ ಕಾಯ್ದೆಯನ್ನು ರಚಿಸಬೇಕೆಂದು ಕೇಂದ್ರ ಸರಕಾರವನ್ನು ಕೇಳಿಕೊಳ್ಳಬೇಕು. ಈ ಕಾಯಿದೆಯ ಕಾಲಾವಧಿ ಪ್ರಥಮ ಹಂತದಲ್ಲಿ 10 ವರ್ಷಗಳಾಗಿರಬೇಕು. ಉದ್ಯಮಗಳ ಸ್ಥಾಪನೆಗಾಗಿ ಜಮೀನನ್ನು ಕಳೆದುಕೊಂಡವರಿಗೆ ಪರಿಹಾರ ದೊರೆಯುವಂತೆ ಮಾಡಲು ನಿಗದಿಪಡಿಸಿದ ಸಮಯದೊಳಗೆ ಉದ್ಯಮಗಳನ್ನು ಕಡ್ಡಾಯವಾಗಿ ಸ್ಥಾಪಿಸುವ ಮತ್ತು ಜಮೀನು ಕಳೆದುಕೊಂಡ ಪ್ರತೀ ಕುಟುಂಬಕ್ಕೆ ಸೇರಿದ ಕನಿಷ್ಠ ಒಬ್ಬ ಸದಸ್ಯರಿಗೆ ಉದ್ಯೋಗಾವಕಾಶವನ್ನು ಕೊಡುವ ವ್ಯವಸ್ಥೆಯನ್ನು ಮಾಡಬೇಕು. ಹೆಚ್ಚು ಪ್ರಮಾಣದಲ್ಲಿ ಭೂಮಿಯನ್ನು ಕಳೆದು ಕೊಂಡವರಿಗೆ ಸಂದರ್ಭಕ್ಕೆ ಅನುಸಾರವಾಗಿ ಒಂದಕ್ಕಿಂತ ಹೆಚ್ಚು ಹುದ್ದೆಗಳನ್ನು ಒದಗಿಸತಕ್ಕದ್ದು.

ನೂರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಇರುವ ಖಾಸಗಿ ಉದ್ಯಮಗಳ ನೇಮಕಾತಿ ಸಮಿತಿಗಳಲ್ಲಿ ರಾಜ್ಯ ಸರಕಾರದ ಪ್ರತಿನಿಧಿಯನ್ನು ಸೇರಿಸುವಂತೆ ಉದ್ಯಮಿಗಳನ್ನು ಒತ್ತಾಯಿಸಬೇಕು.

ಉದ್ಯಮಗಳ ನೇಮಕಾತಿ ಸಮಿತಿಗಳಲ್ಲಿರುವ ರಾಜ್ಯ ಸರಕಾರದ ಪ್ರತಿನಿಧಿಗಳು ಈ ಸಮಿತಿಗಳ ನಡಾವಳಿಗಳ ಬಗ್ಗೆ ಸರಕಾರಕ್ಕೆ ವರದಿಗಳನ್ನು ಕಳುಹಿಸುವಂತೆಯೂ, ಈ ವರದಿಗಳ ಪರಿಶೀಲನೆಗೆ ಒಂದು ಘಟಕವನ್ನು ರಚಿಸುವಂತೆಯೂ ವ್ಯವಸ್ಥೆ ಮಾಡಬೇಕು. ಈ ಘಟಕಕ್ಕೆ ಶಾಸನಬದ್ಧ ಅಂತಸ್ತು ದೊರೆಯುವಂತೆ ಮಾಡುವ ವ್ಯವಸ್ಥೆ ಮಾಡಬೇಕು. ಅವಶ್ಯವಿದ್ದರೆ ವಿಭಾಗಮಟ್ಟದಲ್ಲಿ ಸಹ ಈ ಘಟಕಗಳ ಶಾಖೆಗಳು ಪರಿಶೀಲನೆ ನಡೆಸುವಂತೆ ಮಾಡಬಹುದು.

ಉದ್ಯಮಗಳಲ್ಲಿ ನೌಕರರ ಮಕ್ಕಳಿಗೆ ಆದ್ಯತೆ ಮೇಲೆ ನೇಮಕ ಮಾಡುವುದರಿಂದ ಕನ್ನಡೇತರರು ಬಹುಸಂಖ್ಯೆಯಲ್ಲಿರುವ ಉದ್ಯಮಗಳಲ್ಲಿ ಕನ್ನಡಿಗರ ಸಂಖ್ಯೆಯನ್ನು ಹೆಚ್ಚಿಸುವ ಸಾಧ್ಯತೆ ಇರುವುದಿಲ್ಲ ಮತ್ತು ಅರ್ಹತೆಯಿರುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶದಲ್ಲಿ ಸರಿಸಮಾನವಾದ ಅವಕಾಶ ಕೊಟ್ಟಂತಾಗುವುದಿಲ್ಲ. ಆದುದರಿಂದ ಈ ಪದ್ಧತಿಯನ್ನು ರದ್ದುಮಾಡಬೇಕು.

ಮಹಾರಾಷ್ಟ್ರದಲ್ಲಿರುವ ಪದ್ಧತಿಯಂತೆ ಉದ್ಯಮಗಳಿಂದ ಕನ್ನಡಿಗರಿಗೆ ನಿಗದಿ ಪಡಿಸಿದ ಪ್ರಮಾಣದಲ್ಲಿ ಉದ್ಯೋಗಾವಕಾಶ ವನ್ನು ಒದಗಿಸುವ ಬಗ್ಗೆ ಪ್ರತೀ ವರ್ಷ ಘೋಷಣೆ ಪತ್ರವನ್ನು (ಡಿಕ್ಲರೇಷನ್) ಪಡೆಯಬೇಕು. ಉದ್ಯಮಗಳ ಸ್ಥಾಪನೆ ಮತ್ತು ವಿಸ್ತರಣೆ, ಪ್ರಸ್ತಾಪ ಬಂದಾಗ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯೂ ಮತ್ತು ಉದ್ಯಮಗಳಿಗೆ ಆರ್ಥಿಕ ನೆರವನ್ನು ನೀಡಿದಾಗ ಕರ್ನಾಟಕ ರಾಜ್ಯ ಆರ್ಥಿಕ ನಿಗಮವೂ ಉದ್ಯೋಗ ವಿನಿಮಯ ಕೇಂದ್ರಗಳಿಗೆ ತಿಳಿಸಬೇಕು. ಈ ಕೇಂದ್ರಗಳು ತಮ್ಮಲ್ಲಿ ಹೆಸರು ನೋಂದಾಯಿಸಿದ ಅಭ್ಯರ್ಥಿಗಳ ನೇಮಕಕ್ಕೆ ಪ್ರಯತ್ನಿಸಬೇಕು.

ಕನ್ನಡಿಗರ ನಾನ್-ರೆಸಿಡೆಂಟ್ ಅಕೌಂಟಿನಲ್ಲಿರುವ ಠೇವಣಿಯನ್ನು ಕನ್ನಡಿಗರಿಗೆ ನೇಮಕ ಮಾಡಬೇಕೆಂಬ ಷರತ್ತಿನ ಮೇಲೆ ಉದ್ಯಮ ಗಳ ಸ್ಥಾಪನೆಗಾಗಿ ಉಪಯೋಗಿಸಲು ಒಪ್ಪಿಗೆ ಕೊಡುವಂತೆ ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕು.

ಸರಕಾರದಲ್ಲಿರುವ ಮುಖ್ಯವಾದ ಸ್ಥಾನಗಳಿಗೆ ಅಧಿಕಾರಿಗಳನ್ನು ನೇಮಿಸುವಾಗ ಕನ್ನಡಿಗರ ಬಗ್ಗೆ ಕಳಕಳಿಯಿರುವ ಅಥವಾ ಅದರ ಅಭಿವೃದ್ಧಿ ಬಗ್ಗೆ ಆಸಕ್ತಿ ವಹಿಸುವ ಮನೋಭಾವ ಇರುವ ಅಧಿಕಾರಿಗಳನ್ನು ಆಯ್ಕೆ ಮಾಡಿ ನೇಮಕ ಮಾಡಬೇಕು.

ಸರಕಾರದ ಅಧಿಕೃತ ಜ್ಞಾಪನಾ ಪತ್ರ ಸಂಖ್ಯೆ ಡಿಪಿಎಆರ್ 38 ಎಸ್‌ಸಿಆರ್ 83, ದಿನಾಂಕ 20ನೇ ಜುಲೈ 1983 ಇದರಂತೆ ಸಂದರ್ಶನ ಕಾಲದಲ್ಲಿ ಅಭ್ಯರ್ಥಿಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಕನ್ನಡದಲ್ಲಿಯೇ ಪ್ರಶ್ನಿಸಿ ಉತ್ತರವನ್ನು ಪಡೆಯಬೇಕೆಂದಿರುವುದು. ಇದನ್ನು ತಿದ್ದುಪಡಿ ಮಾಡಿ ಕನ್ನಡದಲ್ಲಿಯೇ ಪ್ರಶ್ನಿಸಿ ಉತ್ತರ ಪಡೆಯುವ ವ್ಯವಸ್ಥೆ ಮಾಡಬೇಕು.

ಅಭ್ಯರ್ಥಿಗಳ ಆಯ್ಕೆಗಾಗಿ ಲೋಕಸೇವಾ ಆಯೋಗ ಅಥವಾ ಇತರ ನೇಮಕಾತಿ ಸಮಿತಿಗಳು ನಡೆಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ಗಳಲ್ಲಿ ಒಂದು ಕನ್ನಡ ಪ್ರಶ್ನೆ ಪತ್ರಿಕೆಯನ್ನು ಕಡ್ಡಾಯವಾಗಿ ಸೇರಿಸಬೇಕು. ಈ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಉತ್ತೀರ್ಣರಾಗದೆ ಇರುವವರು ಆಯ್ಕೆಗೆ ಅನರ್ಹರಾಗುವಂತೆ ನಿಯಮಗಳಲ್ಲಿ ತಿದ್ದುಪಡಿ ಮಾಡಬೇಕು.

ಸ್ಪರ್ಧಾತ್ಮಕ ಪರೀಕ್ಷೆ ಇಲ್ಲದೆ ಬರೀ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವ ಅಭ್ಯರ್ಥಿಗಳಿಗೆ ಲೋಕಸೇವಾ ಆಯೋಗವು ಕನ್ನಡ ಪರೀಕ್ಷೆಯನ್ನು ನಡೆಸಬೇಕು.

ಪರಿಶಿಷ್ಟ ಜಾತಿ, ಬುಡಕಟ್ಟಿಗೆ ಸೇರಿದ ಅಭ್ಯರ್ಥಿಗಳ ಕೊರತೆಯನ್ನು ನೀಗಿಸಲು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಬೇಕು.

1.ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ಅಭ್ಯರ್ಥಿಗಳು ದೊರೆಯದೆ ಇದ್ದರೆ ವೃತ್ತಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸು ವುದರ ಮೂಲಕ, ಪರಿಶಿಷ್ಟ ಜಾತಿ ಬುಡಕಟ್ಟಿನವರ ಕಲ್ಯಾಣ ಇಲಾಖೆಯ ಗಮನಕ್ಕೆ ತರುವುದರ ಮೂಲಕ ಮತ್ತು ಆಕಾಶ ವಾಣಿ, ದೂರದರ್ಶನಗಳಲ್ಲಿ ಪ್ರಕಟಿಸುವುದರ ಮೂಲಕ ಅಭ್ಯರ್ಥಿಗಳನ್ನು ಪಡೆಯುವ ಪ್ರಯತ್ನ ಮಾಡಬೇಕು.

2.ಎಲ್ಲಾ ಇಲಾಖೆ ಉದ್ಯಮಗಳಲ್ಲಿರುವ ನೇಮಕಾತಿ ಸಮಿತಿ ಗಳಲ್ಲಿ ಪರಿಶಿಷ್ಟ ಜಾತಿ ಬುಡಕಟ್ಟಿನವರ ಕಲ್ಯಾಣ ಇಲಾಖೆಯ ಪ್ರತಿನಿಧಿಯನ್ನು ಸೇರಿಸಬೇಕು.

3.ಈ ಅಭ್ಯರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ದೊರೆಯದೆ ಇದ್ದಾಗ ಪರಿಶಿಷ್ಟ ಜಾತಿ ಬುಡಕಟ್ಟಿನವರ ಕಲ್ಯಾಣ ನಿರ್ದೇಶಕ ರನ್ನು ಸಂಪರ್ಕಿಸುವಂತೆ ಉದ್ಯಮಗಳಿಗೆ ಸ್ಥಾಯಿ ಆದೇಶ ವನ್ನು ಕೊಡಬೇಕು.

4.ಇಲಾಖೆಯು ಜಾಹೀರಾತುಗಳನ್ನು ಗಮನಿಸಿ ಇಲಾಖೆಯಲ್ಲಿ ಹೆಸರು ನೋಂದಾಯಿಸಿದ ಸೂಕ್ತ ಅರ್ಹತೆಯಿರುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವಂತೆ ಮಾರ್ಗದರ್ಶನ ನೀಡಬೇಕು.

ನೀರಾವರಿ ಯೋಜನೆಗಳಲ್ಲಿ ಭಾರೀ ಕಾಮಗಾರಿಗಳಿಗೆ ಗುತ್ತಿಗೆ ಕೊಡುವಾಗ ಕನ್ನಡಿಗರಿಗೆ ಆದ್ಯತೆ ಕೊಡಬೇಕು. ಗುತ್ತಿಗೆ ಕೊಡುವಾಗ ಕನ್ನಡಿಗರನ್ನೇ ಕೆಲಸಗಾರರನ್ನಾಗಿ ನೇಮಕ ಮಾಡಬೇಕೆಂಬ ಶರತ್ತನ್ನು ಒಪ್ಪಂದದಲ್ಲಿ ಸೇರಿಸಬೇಕು.

ನೀರಾವರಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಹಿಡುವಳಿದಾರರು ತಮ್ಮ ಜಮೀನನ್ನು ಹೊರ ರಾಜ್ಯದವರಿಗೆ ವಿಕ್ರಯಿಸಿ ಈ ಯೋಜನೆಗಳ ಲಾಭವನ್ನು ಕಳೆದುಕೊಳ್ಳುವರು. ಇದನ್ನು ತಡೆಗಟ್ಟಲು ಜಮೀನನ್ನು ಪರಭಾರೆ ಮಾಡುವುದನ್ನು ನಿಯಂತ್ರಣಗೊಳಿಸಬೇಕು. ಈ ಬಗ್ಗೆ ಮಹಾರಾಷ್ಟ್ರದಲ್ಲಿ ಜಾರಿಯಲ್ಲಿರುವ The Maharashtra Resettlement of Project Displaced Persons Act 1976 ಮಾದರಿಯನ್ನು ಅನುಸರಿಸಬಹುದು. ಎರಡನೆಯದಾಗಿ ಸರಕಾರ ಅಚ್ಚುಕಟ್ಟು ಪ್ರದೇಶದಲ್ಲಿರುವ ಸಣ್ಣ ಹಿಡುವಳಿದಾರರಿಗೆ ಪರಭಾರೆ ಮಾಡುವ ವ್ಯವಸ್ಥೆ ಮಾಡಬೇಕು.

ರಾಜ್ಯದಲ್ಲಿರುವ ಉದ್ಯಮಗಳಿಗೆ ಬೇಕಾಗಿರುವ ವಿಶೇಷ ತಾಂತ್ರಿಕ ತರಬೇತಿ ಪಡೆಯಲು ಉದ್ಯೋಗ ತರಬೇತಿ ಕೇಂದ್ರಗಳಲ್ಲಿ (ಐಟಿಐ) ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಅವಕಾಶ ಮಾಡಿದರೆ ಹೊರ ರಾಜ್ಯದಿಂದ ಈ ವಿಶೇಷ ತರಬೇತಿ ಪಡೆದ ಅಭ್ಯರ್ಥಿಗಳನ್ನು ಕರೆಯಿಸಿಕೊಳ್ಳುವ ಅವಶ್ಯಕತೆಯಿರುವುದಿಲ್ಲ. ಸಮಿತಿಯು ಉದ್ಯಮಗಳಿಗೆ ಭೇಟಿಕೊಟ್ಟಾಗ ಇಂತಹ ತಾಂತ್ರಿಕ ವಿಷಯಗಳನ್ನು ಗುರುತಿಸಿ, ಅವುಗಳ ಪಟ್ಟಿಯನ್ನು ಸಂಗ್ರಹಿಸಿಕೊಟ್ಟಿರುವುದು, ಈ ಬಗ್ಗೆ ಸರಕಾರವು ಸೂಕ್ತ ವ್ಯವಸ್ಥೆ ಮಾಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News