ಚಾರ್ಲಿಯ ನಾಯಿ ಮರಿಗೆ ಮಿಡಿದವರು ಜನಸಾಮಾನ್ಯರಿಗಾಗಿಯೂ ಮಿಡಿಯಲಿ

Update: 2022-08-01 03:01 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮುಖ್ಯಮಂತ್ರಿ ಬೊಮ್ಮಾಯಿಯವರು ಇತ್ತೀಚೆಗೆ 'ಕಣ್ಣೀರು' ಹಾಕಿದ ಘಟನೆಯೊಂದು ಮಾಧ್ಯಮಗಳಲ್ಲಿ ವರದಿಯಾದವು. 'ಚಾರ್ಲಿ' ಎನ್ನುವ ಸಿನೆಮಾ ವೀಕ್ಷಿಸಿ, ಆ ಚಿತ್ರದಲ್ಲಿ ಬರುವ ನಾಯಿಯೊಂದರ ದುರಂತ ಅಂತ್ಯವನ್ನು ಕಂಡು ಮುಖ್ಯಮಂತ್ರಿ ಸಾರ್ವಜನಿಕವಾಗಿ ಕಣ್ಣೀರು ಹಾಕಿ, ಆ ಚಿತ್ರದ ಬಗ್ಗೆ ತಮ್ಮ ಹೇಳಿಕೆಯನ್ನೂ ನೀಡಿದರು. ಸಿನೆಮಾದಲ್ಲಿ ನಾಯಿಯೊಂದರ ಸಾವಿಗೆ ಮರುಗುವ ಮೃದು ಹೃದಯದ ಮುಖ್ಯಮಂತ್ರಿಯೊಬ್ಬರನ್ನು ಈ ನಾಡು ಹೊಂದಿರುವುದರ ಬಗ್ಗೆ ನಾಡಿನ ಜನರೂ ಅಭಿಮಾನ ಪಟ್ಟರು. ಇಂತಹ ಮುಖ್ಯಮಂತ್ರಿ ಬೆಂಗಳೂರಿನಿಂದ ಹಲವು ಕಿಲೋಮೀಟರ್ ದೂರದಲ್ಲಿರುವ ಪುತ್ತೂರಿನಲ್ಲಿ ಬಿಜೆಪಿಯ ಕಾರ್ಯಕರ್ತನೊಬ್ಬ ಬರ್ಬರವಾಗಿ ಹತ್ಯೆಗೀಡಾದಾಗ ಧಾವಿಸಿ ಬರುವುದು ಸಹಜವೇ ಆಗಿದೆ. ಧಾವಿಸಿ ಬಂದಿರುವುದು ಮಾತ್ರವಲ್ಲ, ಮೃತನ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರದ ಚೆಕ್ ಒಂದನ್ನು ನೀಡಿದರು. ಸಾವನ್ನು ಖಂಡಿಸಿರುವ ಮುಖ್ಯಮಂತ್ರಿ ಕೃತ್ಯದ ತನಿಖೆಯನ್ನು 'ಎನ್‌ಐಎ'ಗೆ ನೀಡುವ ಮೂಲಕ, ನಾಡಿನ ಪೊಲೀಸ್ ವ್ಯವಸ್ಥೆಯ ಬಗ್ಗೆ 'ತನಗೇ ನಂಬಿಕೆಯಿಲ್ಲ' ಎನ್ನುವುದನ್ನು ಕೂಡ ಬಹಿರಂಗಪಡಿಸಿದ್ದಾರೆ.

ಸಂತ್ರಸ್ತನ ಕುಟುಂಬವನ್ನು ಮುಖ್ಯಮಂತ್ರಿ ಭೇಟಿ ಮಾಡಿರುವುದು, ಬಳಿಕ ತನಿಖೆಗೆ ಎಲ್ಲ ಬಗೆಯ ಕ್ರಮಗಳನ್ನು ತೆಗೆದುಕೊಂಡಿರುವುದು ಶ್ಲಾಘನೀಯ ಕ್ರಮವಾಗಿದೆ. ಆದರೆ ಮುಖ್ಯಮಂತ್ರಿಯವರು ಬಿಜೆಪಿ ಕಾರ್ಯಕರ್ತನ ಮನೆಗೆ ಭೇಟಿ ನೀಡಿದ ರಾತ್ರಿಯೇ ಇನ್ನೊಂದು ಬರ್ಬರ ಹತ್ಯೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಿತು. ಈತ ದುರದೃಷ್ಟಕ್ಕೆ ಆಡಳಿತ ಪಕ್ಷವಾಗಿರುವ ಬಿಜೆಪಿಯ ಕಾರ್ಯಕರ್ತನೋ ಅಥವಾ ಇನ್ನಾವುದೋ ಪಕ್ಷದ, ಸಂಘಟನೆಗಳ ಸದಸ್ಯನೋ ಆಗಿರಲಿಲ್ಲ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಈತ, ಶ್ರಮದ ಬದುಕು ನಡೆಸುತ್ತಾ ತನ್ನ ಕುಟುಂಬದ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದ. ಈತನ ಮೇಲೆ ಈ ಹಿಂದೆ ಯಾವುದೇ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದು ಕಂಡು ಬಂದಿಲ್ಲ. ಹತ್ಯೆಗೆ ಇನ್ನಿತರ ವೈಯಕ್ತಿಕ ಅಥವಾ ರಾಜಕೀಯ ದ್ವೇಷದ ಕಾರಣಗಳೂ ಇರಲಿಲ್ಲ. ಕೊಲೆಗಾರರಿಗೂ ಈತನ ವೈಯಕ್ತಿಕ ಪರಿಚಯವಿದೆ ಎಂಬ ಬಗ್ಗೆ ಈವರೆಗೆ ಯಾವುದೇ ಮಾಹಿತಿಯಿಲ್ಲ. ಸದ್ಯಕ್ಕೆ ಈತನ ಕೊಲೆಗೆ ಕಾರಣ, ಈತನ 'ಹೆಸರು' ಎಂದು ಜನಸಾಮಾನ್ಯರು ನಂಬಿದ್ದಾರೆ. ಅಂದರೆ ಸಮಾಜದಲ್ಲಿ ಕೋಮು ಉದ್ವಿಗ್ನತೆಯನ್ನು ನಿರ್ಮಿಸುವುದಕ್ಕಾಗಿಯೇ ಈ ಕೊಲೆಯನ್ನು ಮಾಡಲಾಗಿದೆ ಎನ್ನಲಾಗುತ್ತಿದೆ. ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತನ ಕೊಲೆಯ ಮುಂದುವರಿದ ಭಾಗ ಇದು ಎಂದೂ ಕೆಲವರು ಚರ್ಚಿಸುತ್ತಿದ್ದಾರೆ. ಒಟ್ಟಿನಲ್ಲಿ ದುಷ್ಕರ್ಮಿಗಳ ದುಷ್ಟ ಸಂಚಿನ ಭಾಗವಾಗಿ ಈ ಅಮಾಯಕನ ಕೊಲೆ ನಡೆದಿದೆ. ದೂರದ ಬೆಂಗಳೂರಿನಿಂದ ಪುತ್ತೂರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ, ಅಲ್ಲಿಂದ ಕೆಲವೇ ಕಿಲೋ ಮೀಟರ್‌ಗಳಿದ್ದ ಸುರತ್ಕಲ್‌ಗೆ ಆಗಮಿಸಿ ಸಂತ್ರಸ್ತನ ಕುಟುಂಬವನ್ನು ಭೇಟಿ ಮಾಡಿ ಅವರನ್ನು ಸಂತೈಸಿ, ಅವರಿಗೂ ಪರಿಹಾರವನ್ನು ನೀಡುವುದು ತುಂಬಾ ಕಷ್ಟದ ಸಂಗತಿಯೇನು ಆಗಿರಲಿಲ್ಲ. ಆದರೂ, ಪುತ್ತೂರಿಗೆ ಭೇಟಿ ನೀಡಿದ ಮುಖ್ಯಮಂತ್ರಿಯವರು ಸುರತ್ಕಲ್‌ಗೆ ಭೇಟಿ ನೀಡಲಿಲ್ಲ. ಇದೀಗ ಮುಖ್ಯಮಂತ್ರಿಯ ಭೇಟಿ ಕರಾವಳಿಯಲ್ಲಿ ಶಾಂತಿ ಸ್ಥಾಪನೆಯ ಉದ್ದೇಶವನ್ನು ಹೊಂದಿದೆಯೋ ಅಥವಾ ಒಂದು ನಿರ್ದಿಷ್ಟ ಸಂಘಟನೆಯನ್ನು ಸಂತೃಪ್ತಿ ಪಡಿಸುವ ಉದ್ದೇಶವನ್ನು ಹೊಂದಿದೆಯೋ ಎನ್ನುವ ಪ್ರಶ್ನೆ ಜನರಲ್ಲಿ ಎದ್ದಿದೆ.

ಬೊಮ್ಮಾಯಿ ಶಾಸಕರಾಗಿ ಬಿಜೆಪಿ ಪಕ್ಷವನ್ನು ಪ್ರತಿನಿಧಿಸಿದ್ದಾರೆ. ಶಾಸಕರಾಗುವವರೆಗೆ ಅವರು ಬಿಜೆಪಿ ಪಕ್ಷದವರು. ಗೆದ್ದ ಬಳಿಕ ಕ್ಷೇತ್ರದ ಶಾಸಕರು. ಹಾಗೆಯೇ ಅವರು ನಾಡಿನ ಮುಖ್ಯಮಂತ್ರಿಯೇ ಹೊರತು, ಬಿಜೆಪಿ ಪಕ್ಷದ ಮುಖ್ಯಮಂತ್ರಿಯಲ್ಲ. ಮುಖ್ಯಮಂತ್ರಿಯಾಗಿ ಬಿಜೆಪಿ ಕಾರ್ಯಕರ್ತರಿಗೆ ಒಂದು ನ್ಯಾಯ, ಉಳಿದವರಿಗೆ ಇನ್ನೊಂದು ನ್ಯಾಯವನ್ನು ನೀಡಲಾಗುವುದಿಲ್ಲ. ನಾಡಿನ ಎಲ್ಲ ಜಾತಿ, ಪಕ್ಷ, ಧರ್ಮಗಳ ಜನರನ್ನು ಸಮಾನವಾಗಿ ನೋಡುವ ಮುತ್ಸದ್ದಿತನ ಇದ್ದಾಗಷ್ಟೇ ಅವರು ತಾನು ವಹಿಸಿಕೊಂಡ ಮುಖ್ಯಮಂತ್ರಿ ಸ್ಥಾನಕ್ಕೆ ನ್ಯಾಯ ನೀಡಲು ಸಾಧ್ಯ. ಆದರೆ ಕರಾವಳಿಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಅವರು 'ನಾನು ನಾಡಿನ ಮುಖ್ಯಮಂತ್ರಿಯಲ್ಲ, ಬಿಜೆಪಿಯ ಮುಖ್ಯಮಂತ್ರಿ' ಎನ್ನುವುದನ್ನು ಪರೋಕ್ಷವಾಗಿ ಘೋಷಿಸಿ ಬಿಟ್ಟರು. ಹಿಂಸಾಚಾರ ನಡೆದ ಸ್ಥಳಕ್ಕೆ ಮುಖ್ಯಮಂತ್ರಿ ಭೇಟಿ ನೀಡುವುದರ ಹಿಂದೆ ಎರಡು ಉದ್ದೇಶಗಳಿರುತ್ತವೆ. ಒಂದು, ಸಂತ್ರಸ್ತ ಕುಟುಂಬಕ್ಕೆ ಸಂತೈಕೆ ಹೇಳಿ, ಜನಸಾಮಾನ್ಯರಲ್ಲಿ ಆತ್ಮವಿಶ್ವಾಸವನ್ನು ತುಂಬುವುದು. ಎರಡನೆಯ ಉದ್ದೇಶ, ಘಟನೆಯ ತೀವ್ರತೆಯನ್ನು ಪೊಲೀಸರಿಗೆ ಮನವರಿಕೆ ಮಾಡುವುದು. ನಾಡಿನಲ್ಲಿ ಶಾಂತಿ ಸುವ್ಯವಸ್ಥೆಯನ್ನು ಸ್ಥಾಪಿಸುವುದು. ಜೊತೆಗೆ ಮಾನಸಿಕವಾಗಿ ವಿಭಜನೆಗೊಂಡ ಸಮಾಜವನ್ನು ಒಂದು ಗೂಡಿಸುವುದು. ಆದರೆ ಮುಖ್ಯಮಂತ್ರಿ ಬೊಮ್ಮಾಯಿಯವರು ತಮ್ಮ ಭೇಟಿಯ ಮೂಲಕ ನಾಡಿಗೆ ನೀಡಿದ ಸಂದೇಶವಾದರೂ ಏನು? ಮುಖ್ಯಮಂತ್ರಿ ಬೊಮ್ಮಾಯಿಯವರು ಕರಾವಳಿಗೆ ಆಗಮಿಸಿ, ಗಾಯಗೊಂಡ ಮನಸ್ಸುಗಳನ್ನು ಇನ್ನಷ್ಟು ಗಾಯಗೊಳಿಸಿ ಹೊರಟು ಹೋದರು.

ಹಿಂದೂ-ಮುಸ್ಲಿಮ್ ಎನ್ನುವ ಭೇದಭಾವಗಳನ್ನು ಅಳಿಸಿ ಒಂದಾಗಲು ಕರೆ ನೀಡಬೇಕಾದ ಮುಖ್ಯಮಂತ್ರಿಯೇ, ಹಿಂದೂ ಮೃತದೇಹ-ಮುಸ್ಲಿಮ್ ಮೃತದೇಹ ಎಂದು ವಿಭಜಿಸಿದರು. ಸಂತ್ರಸ್ತರ ಕುಟುಂಬವನ್ನು ಮುಖ್ಯಮಂತ್ರಿ ಭೇಟಿ ನೀಡಿ ಸಂತೈಸಬೇಕಾದರೆ ಮೃತವ್ಯಕ್ತಿ ಈ ನಾಡಿನ ಒಬ್ಬ ಶ್ರೀಸಾಮಾನ್ಯನಾಗಿದ್ದರೆ ಸಾಕಾಗುವುದಿಲ್ಲ, ಆತ ಬಿಜೆಪಿ ಅಥವಾ ಸಂಘಪರಿವಾರದ ಕಾರ್ಯಕರ್ತನಾಗಿರಬೇಕು ಎನ್ನುವುದನ್ನು ಅವರು ಸಾಬೀತು ಮಾಡಿದರು. ಹಾಗೆಯೇ, ಯಾವ ತನಿಖೆಯನ್ನು ಆದ್ಯತೆಯ ಮೇಲೆ ಮಾಡಬೇಕು, ಯಾವ ತನಿಖೆಯನ್ನು ಉಪೇಕ್ಷೆ ಮಾಡಬೇಕು ಎನ್ನುವ ಸೂಚನೆಯೂ ಪೊಲೀಸರಿಗೆ ನೀಡಿದ್ದಾರೆ. ಈ ನಾಡಿನಲ್ಲಿ ಕಳೆದ ವರ್ಷ ಸಂಭವಿಸಿದ ಅತಿವೃಷ್ಟಿಯಿಂದ ಬೆಳೆ ನಾಶಗೊಂಡು ಪರಿಹಾರ ಸಿಗದೇ ಸಂತ್ರಸ್ತರಾಗಿರುವ ರೈತರ ಸಂಖ್ಯೆ ಒಂದು ಲಕ್ಷಕ್ಕೂ ಅಧಿಕ. ಕೆಲವರಿಗೆ ಪರಿಹಾರ ಸಿಕ್ಕಿದೆಯಾದರೂ, ಒಂದು ಎಕರೆಗೆ ಒಂದು ಸಾವಿರ ರೂಪಾಯಿಯಂತೆ ಅಧಿಕಾರಿಗಳು ಪರಿಹಾರ ವಿತರಿಸಿದ್ದಾರೆ. ಕೊರೋನದಿಂದ ಪ್ರಾಣ ಕಳೆದುಕೊಂಡ ವೈದರು, ಪೌರ ಕಾರ್ಮಿಕರ ಕುಟುಂಬಕ್ಕೆ ಸರಕಾರದಿಂದ ಇನ್ನೂ ಪರಿಹಾರ ಸಿಕ್ಕಿಲ್ಲ. ಆದರೆ, ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತನ ಕುಟುಂಬಕ್ಕೆ ಮುಖ್ಯಮಂತ್ರಿಯವರು ಸರಕಾರದ ವತಿಯಿಂದ ಅಧಿಕೃತವಾಗಿ 25 ಲಕ್ಷ ರೂ. ಪರಿಹಾರವನ್ನು ವಿತರಿಸಿದ್ದಾರೆ.

ಈ ಹಿಂದೆ ಶಿವಮೊಗ್ಗದಲ್ಲೂ ಸಂಘಪರಿವಾರದ ಕಾರ್ಯಕರ್ತನಾಗಿದ್ದ, ಹತ್ತು ಹಲವುಕ್ರಿಮಿನಲ್ ಪ್ರಕರಣಗಳ ಹಿನ್ನೆಲೆಯಿದ್ದ ಹರ್ಷನ ಸಾವಿಗೂ ಸರಕಾರ ಪರಿಹಾರ ವಿತರಿಸಿತು. ವಿಪರ್ಯಾಸವೆಂದರೆ, ಕೊರೋನ ಸಂತ್ರಸ್ತರಿಗೆ ಮೀಸಲಾಗಿದ್ದ ಪರಿಹಾರ ನಿಧಿಯಿಂದ ಈ ಹಣವನ್ನು ಸರಕಾರ ಎತ್ತಿ ಕೊಟ್ಟಿತ್ತು. ಪರಿಹಾರ ಕೊಟ್ಟದ್ದೇನೋ ಸರಿ. ಆದರೆ ಸುರತ್ಕಲ್‌ನ ಫಾಝಿಲ್ ಕುಟುಂಬಕ್ಕೆ ಪರಿಹಾರ ದಕ್ಕದೇ ಇರುವುದಕ್ಕೆ ಇರುವ ಕಾರಣವಾದರೂ ಏನು? ಆತ ಕರ್ನಾಟಕಕ್ಕೆ ಸೇರಿದವನಲ್ಲವೆ? ಆತ ಭಾರತೀಯನಲ್ಲವೆ? ಮೃತನ ಯಾವ ತಪ್ಪಿಗಾಗಿ ಆತನಿಗೆ ಪರಿಹಾರ ಧನವನ್ನು ಸರಕಾರ ನಿರಾಕರಿಸಿದೆ ಎನ್ನುವುದನ್ನಾದರೂ ಮುಖ್ಯಮಂತ್ರಿ ಬೊಮ್ಮಾಯಿ ಸ್ಪಷ್ಟಪಡಿಸಬೇಕು. ಒಟ್ಟಿನಲ್ಲಿ, ಮುಖ್ಯಮಂತ್ರಿಯವರ ಆಗಮನದಿಂದ ಜನರಲ್ಲಿ ಕಹಿ ಭಾವನೆ ಇನ್ನಷ್ಟು ಬೆಳೆಯುವುದಕ್ಕೆ ಕಾರಣವಾಯಿತೇ ಹೊರತು, ಅದು ಎರಡು ಧರ್ಮೀಯರನ್ನು ಬೆಸೆಯುವುದಕ್ಕೆ ಕಾರಣವಾಗಲಿಲ್ಲ. ಅವರು ಸಮಾಜವನ್ನು ಹಿಂದೂ-ಮುಸ್ಲಿಮ್ ಎಂದು ಇನ್ನಷ್ಟು ವಿಭಜಿಸಿ ಬೆಂಗಳೂರು ಸೇರಿದರು. ಇದೀಗ ಅಲ್ಲಿ ಕುಳಿತು ದುಷ್ಕರ್ಮಿಗಳ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ನಿಜಕ್ಕೂ ಕರಾವಳಿಯಲ್ಲಿ ಸೌಹಾರ್ದವಾಗಿ ಜನರು ಬದುಕುವುದು ಮುಖ್ಯಮಂತ್ರಿ ಬೊಮ್ಮಾಯಿಗಾಗಲಿ, ಅವರ ಸರಕಾರಕ್ಕಾಗಲಿ ಬೇಕಾಗಿದೆಯೆ? ಬೇಕಾಗಿದೆ ಎಂದಾಗಿದ್ದರೆ, ಅವರೇಕೆ ಒಂದು ಕೊಲೆಯನ್ನು ಖಂಡಿಸುತ್ತಾ, ಇನ್ನೊಂದು ಕೊಲೆಯನ್ನು ಪರೋಕ್ಷವಾಗಿ ಸಮರ್ಥಿಸಿದರು? ನೆಮ್ಮದಿಯ ಬದುಕನ್ನು ಬಯಸುವ ನಾಡಿನ ಪ್ರತಿಯೊಬ್ಬ ಶ್ರೀಸಾಮಾನ್ಯ ಕೇಳುತ್ತಿರುವ ಪ್ರಶ್ನೆ ಇದು. ಬೊಮ್ಮಾಯಿಯವರು ಉತ್ತರಿಸಬೇಕಾಗಿದೆ. ಕನಿಷ್ಠ ಚಾರ್ಲಿ ಸಿನೆಮಾದ ನಾಯಿಮರಿಗೆ ಸುರಿಸಿದ ಕಣ್ಣೀರನ್ನಾದರೂ, ಈ ನಾಡಿನ ಶ್ರೀಸಾಮಾನ್ಯರ ಸಾವಿಗಾಗಿ ಅವರು ಸುರಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News