ಮೋದಿಜಿ ಪೆನ್ಸಿಲ್, ಮ್ಯಾಗಿ ಕೂಡಾ ತುಟ್ಟಿ: ಆರರ ಪೋರಿಯ 'ಮನ್ ಕೀ ಬಾತ್'

Update: 2022-08-01 02:25 GMT

ಕಾನ್ಪುರ: ದೇಶದಲ್ಲಿ ಹಣದುಬ್ಬರ ಪರ್ವ ಮುಂದುವರಿದಿರುವ ನಡುವೆಯೇ ಪೆನ್ಸಿಲ್, ಮ್ಯಾಗಿಯಂಥ ವಸ್ತುಗಳು ಕೂಡಾ ತುಟ್ಟಿಯಾಗಿರುವ ಬಗ್ಗೆ ಇಲ್ಲಿನ ಒಂದನೇ ತರಗತಿಯ ಬಾಲಕಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕನೌಜ್ ಜಿಲ್ಲೆಯ ಛಿಬ್ರಮಾವು ಎಂಬಲ್ಲಿನ ಕೀರ್ತಿ ದುಬೆ (6) ಎಂಬ ಬಾಲಕಿ ಹಿಂದಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾಳೆ.

"ನನ್ನ ಹೆಸರು ಕೀರ್ತಿ ದುಬೆ. ನಾನು ಒಂದನೇ ತರಗತಿಯಲ್ಲಿ ಓದುತ್ತಿದ್ದೇನೆ. ಮೋದಿ ಜೀ, ನೀವು ಭಾರಿ ಬೆಲೆ ಏರಿಕೆಗೆ ಕಾರಣರಾಗಿದ್ದೀರಿ. ನನ್ನ ಪೆನ್ಸಿಲ್ ಮತ್ತು ರಬ್ಬರ್ ಕೂಡಾ ತುಟ್ಟಿಯಾಗಿದೆ. ಮ್ಯಾಗಿ ಬೆಲೆಯೂ ಹೆಚ್ಚಿದೆ. ಈ ಕಾರಣದಿಂದ ಪೆನ್ಸಿಲ್ ಕೇಳಿದರೆ ತಾಯಿ ಹೊಡೆಯುತ್ತಾರೆ. ನಾನೇನು ಮಾಡಬೇಕು? ಇತರ ಮಕ್ಕಳು ಪೆನ್ಸಿಲ್ ಕದಿಯುತ್ತಿದ್ದಾರೆ" ಎಂದು ಬರೆದಿದ್ದಾಳೆ.

ವೃತ್ತಿಯಲ್ಲಿ ವಕೀಲರಾಗಿರುವ ವಿಶಾಲ್ ದುಬೆ, ತಮ್ಮ ಮಗಳು ಬರೆದ ಪತ್ರವನ್ನು ಪ್ರಧಾನಿಗೆ ಅಂಚೆ ಮೂಲಕ ಕಳುಹಿಸಲಾಗಿದೆ ಎಂದು ದೃಢಪಡಿಸಿದ್ದಾರೆ. ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. "ಇದು ನನ್ನ ಮಗಳ ಮನ್ ಕೀ ಬಾತ್. ಶಾಲೆಯಲ್ಲಿ ಇತ್ತೀಚೆಗೆ ಪೆನ್ಸಿಲ್ ಕಳೆದುಕೊಂಡದ್ದಕ್ಕೆ ತಾಯಿ ಬೈದ ಕಾರಣ ಆಕೆಗೂ ಸಿಟ್ಟು ಬಂದಿತ್ತು" ಎಂದು ವಿವರಿಸಿದ್ದಾರೆ.

ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವುದರಿಂದ ತಮ್ಮ ಗಮನಕ್ಕೆ ಬಂದಿದೆ ಎಂದು ಛಿಬ್ರಾಮಾವು ಎಸ್‍ಡಿಎಂ ಅಶೋಕ್ ಕುಮಾರ್ ಹೇಳಿದ್ದಾರೆ. "ವೈಯಕ್ತಿಯ ಸಾಮರ್ಥ್ಯದಲ್ಲಿ ನಾನು ಸದ್ಯಕ್ಕೆ ಯಾವುದೇ ರೀತಿಯಲ್ಲಿ ಬಾಲಕಿಗೆ ನೆರವು ನೀಡಲು ನಾನು ಸಿದ್ಧ. ಆಕೆಯ ಪತ್ರ ಜವಾಬ್ದಾರಿಯುತ ಅಧಿಕಾರಿಗಳಿಗೆ ತಲುಪುವಂತೆ ಖಾತರಿ ನೀಡುತ್ತಿದ್ದೇನೆ" ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News