ಸರಣಿ ಕೊಲೆ | ವ್ಯಕ್ತಿ, ಸಂಘಟನೆ, ಸಿದ್ಧಾಂತ ಪರಿಗಣಿಸದೆ ಆರೋಪಿಗಳ ವಿರುದ್ಧ ಕ್ರಮ: ಡಿಜಿಪಿ ಪ್ರವೀಣ್ ಸೂದ್

Update: 2022-08-01 07:29 GMT

ಮಂಗಳೂರು, ಆ.1: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಮೂರು ಸರಣಿ ಹತ್ಯೆ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಅದು ಯಾವುದೇ ವ್ಯಕ್ತಿ, ಸಂಘಟನೆ, ಸಿದ್ಧಾಂತವೇ ಇರಲಿ ಅವರನ್ನು ಬಿಡುವುದಿಲ್ಲ ಎಂದು ಡಿಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ.

ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆಗಳ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಲು ಇಂದು ಮಂಗಳೂರಿಗೆ ಆಗಮಿಸಿದ್ದ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.

ಮಸೂದ್ ಕೊಲೆ ಪ್ರಕರಣದಲ್ಲಿ ಈಗಾಗಲೇ 8 ಮಂದಿಯನ್ನು ಬಂಧಿಸಲಾಗಿದ್ದರೆ, ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಇಬ್ಬರು ಹಾಗೂ ಫಾಝಿಲ್ ಹತ್ಯೆಗೆ ಸಂಬಂಧಿಸಿ ಒಬ್ಬರನ್ನು ಬಂಧಿಸಲಾಗಿದೆ, ಕಾರೊಂದನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರ ಮೂಲಕ ಇತರ ಅಪರಾಧಿಗಳನ್ನೂ ಬಂಧಿಸಲಾಗುವುದು. ಪ್ರಕರಣದ ತನಿಖೆಯ ಪ್ರಗತಿ ಬಗ್ಗೆ ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಲಿದ್ದಾರೆ ಎಂದರು.

ಕೊಲೆ ಪ್ರಕರಣಗಳ ತನಿಖೆಗೆ ಸಂಬಂಧಿಸಿ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ. ಜಿಲ್ಲೆಯ ಗಡಿ ಪ್ರದೇಶದಲ್ಲಿ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ. ದ.ಕ. ಜಿಲ್ಲೆಯಲ್ಲಿ ಪೊಲೀಸರ ಬಲವರ್ಧನೆ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.

ಸಮಾಜದಲ್ಲಿ ಯಾವುದೇ ಅಪರಾಧ ಕೃತ್ಯಗಳನ್ನು ನೋಡಿದವರು, ಗೊತ್ತಿದ್ದವರು, ಮಾಹಿತಿ ಇದ್ದವರು ಇರುತ್ತಾರೆ. ಅಂತಹ ಮಾಹಿತಿಯನ್ನು ನಾಗರಿಕರು ಪೊಲೀಸರಿಗೆ ನೀಡಿ ಸಹಕರಿಸಿದರೆ ಆರೋಪಿಗಳ ಶೀಘ್ರ ಬಂಧನ ಸಾಧ್ಯವಾಗಲಿದೆ. ಮಾಹಿತಿಯಿದ್ದು, ನೀಡದಿದ್ದಲ್ಲಿ ಅವರು ಕೂಡಾ ಕೃತ್ಯದಲ್ಲಿ ಭಾಗಿ ಎಂದು ಪರಿಗಣಿಸಬೇಕಾಗುತ್ತದೆ ಡಿಜಿಪಿ ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News