×
Ad

ಕರ್ನಾಟಕ-ಕೇರಳ ಗಡಿಯ 32 ಕಡೆಗಳಲ್ಲಿ ಸಿಸಿಟಿವಿ ಅಳವಡಿಕೆ: ಸಚಿವ ಎಸ್. ಅಂಗಾರ

Update: 2022-08-01 19:30 IST

ಉಡುಪಿ: ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆ ಆಗದಂತೆ ಕರ್ನಾಟಕ ಹಾಗೂ ಕೇರಳದ ಗಡಿ ಪ್ರದೇಶದ 32 ಕಡೆಗಳಲ್ಲಿ ಸಿಸಿ ಟಿವಿ ಅಳವಡಿಸಲು ಮುಖ್ಯಮಂತ್ರಿ ಅನುದಾನ ಮಂಜೂರು ಮಾಡಿದ್ದಾರೆ ಎಂದು ಮೀನುಗಾರಿಕಾ ಸಚಿವ ಎಸ್. ಅಂಗಾರ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂತಹ ಪ್ರಕರಣಗಳಲ್ಲಿ ಎಚ್ಚರಿಕೆ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆ ಪ್ರಕಾರ ಎಲ್ಲವೂ ಯಶಸ್ವಿ ಯಾಗಿ ನಡೆಯುತ್ತಿದೆ ಎಂದು ಹೇಳಿದರು.

ಕಾರ್ಯಕರ್ತರ ಆಕ್ರೋಶ ಸಹಜ. ಈಗ ಎಲ್ಲವೂ ಉಪಶಮನವಾಗಿದೆ. ಕಾರ್ಯಕರ್ತರಿಗೆ ಏನೂ ಸಮಸ್ಯೆಯಿಲ್ಲ. ಕೆಲವರು ಪಕ್ಷದ ಹುದ್ದೆಗಳಿಗೆ ರಾಜೀ ನಾಮೆ ನೀಡಿದ್ದಾರೆ. ಆದರೆ ರಾಜೀನಾಮೆಯೇ ಪರಿಹಾರವಲ್ಲ. ಕೊಲೆಗಡುಕರಿಗೆ ಶಿಕ್ಷೆ ವಿಧಿಸುವುದೇ ನಿಜವಾದ ಪರಿಹಾರ ಎಂದು ಅವರು ತಿಳಿಸಿದರು.

ಆರೊಪಿಗಳ ಎನ್‌ಕೌಂಟರ್ ಮಾಡುವ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದೆಲ್ಲವೂ ಆವೇಶದಲ್ಲಿ ಆ ಸಮಯಕ್ಕೆ ಹೇಳಿರಬಹುದು. ಕಾರ್ಯಕರ್ತರ ಆಕ್ರೋಶದ ಹಿನ್ನೆಲೆಯಲ್ಲಿ ದೆಹಲಿಯಲ್ಲಿದ್ದ ನಾನು ತಕ್ಷಣ ಬೆಂಗಳೂರು ಮೂಲಕ ಮಂಗಳೂರಿಗೆ ಆಗಮಿಸಿ ಎಲ್ಲ ರೀತಿಯ ಕ್ರಮ ತೆಗೆದುಕೊಂಡಿದ್ದೇನೆ. ಅದೇ ರೀತಿ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಕೂಡ ಮಾಡಿದ್ದಾರೆ  ಎಂದರು.

ಮಸೂದ್ ಮನೆಗೆ ಭೇಟಿ ನೀಡದೆ ತಾರತಮ್ಯ ಎಸಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇದರಲ್ಲಿ ತಾರತಮ್ಯ ಮಾಡಿಲ್ಲ. ಮಸೂದ್ ಸಾವು ಗಾಂಜಾ ಪ್ರಕರಣಕ್ಕೆ ಸಂಬಂಧಿಸಿ ವೈಯಕ್ತಿಕವಾಗಿ ಮಾಡಿರುವುದಾಗಿದೆ. ಇದು ಕೊಲೆಯೇ ಅಲ್ಲ. ನಾವು ಹಿಂದೂ ಮುಸ್ಲಿಮ್ ಕ್ರಿಶ್ಚಿಯನ್ ಎಂಬ ಯಾವುದೇ ತಾರತಮ್ಯ ಮಾಡುವುದಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News