ಹೆಬ್ರಿ ತಾಲೂಕು ಸರ್ವೇಯರ್ ಹುಸೇನ್ ಡಿ. ಶಾಹಬಾದಿಗೆ ಬೀಳ್ಕೊಡುಗೆ

Update: 2022-08-01 15:36 GMT

ಹೆಬ್ರಿ : ಹೆಬ್ರಿ ತಾಲೂಕು ಕಚೇರಿಯಲ್ಲಿ ಭೂ ದಾಖಲೆಗಳ ಇಲಾಖೆಯಲ್ಲಿ ತಾಲೂಕು ಸರ್ವೇಯರ್ ಆಗಿ 26 ವರ್ಷಗಳ ಕಾಲ ದಕ್ಷತೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬಿಜಾಪುರ ಭೈರವಾಡಗಿಯ ಹುಸೇನ್ ಡಿ. ಶಾಹಬಾದಿ ಅವರನ್ನು  ಸನ್ಮಾನಿಸಿ ಬೀಳ್ಕೊಡುವ ಸಮಾರಂಭ ಶನಿವಾರ ನಡೆಯಿತು.

ಹೆಬ್ರಿ ನೂತನ ತಾಲೂಕು ಆದ ಬಳಿಕ ಆಡಳಿತ ಸೌಧ ಸಹಿತ ವಿವಿಧ ಸರ್ಕಾರಿ ಕಚೇರಿಗಳಿಗೆ ಜಮೀನು ಗುರುತಿಸುವಿಕೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ತಾಲೂಕು ಸರ್ವೇಯರ್ ಹುಸೇನ್ ಡಿ. ಶಾಹಬಾದಿ ಈ ಮೂಲಕ ಜನಮನ್ನಣೆ ಪಡೆದಿದ್ದಾರೆ. ಅವರು ತನ್ನ ಅಪಾರವಾದ ಅನುಭವ ದಿಂದ ಹೆಬ್ರಿಯ ಸಮಗ್ರ ಅಭಿವೃದ್ಧಿಯಲ್ಲಿ ಸಹಕಾರ ನೀಡಿದ್ದಾರೆ ಎಂದು ಹೆಬ್ರಿ ತಹಶೀಲ್ದಾರ್ ಪುರಂದರ್ ಕೆ. ಮೆಚ್ಚುಗೆ ವ್ಯಕ್ತಪಡಿಸಿದರು. 

ಅಧ್ಯಕ್ಷತೆ ವಹಿಸಿ ಮಾತನಾಡಿದ ಭೂ ದಾಖಲೆಗಳ ಇಲಾಖೆಯ ಜಿಲ್ಲಾ ನಿರ್ದೇಶಕ ರವೀಂದ್ರ ಪೂಜಾರಿ ಮಾತನಾಡಿ, ೧೯೯೭ರಲ್ಲಿ ಕಾರ್ಕಳ ತಾಲೂಕಿನಲ್ಲಿ ಸೇವೆಗೆ ಸೇರಿ ಈಗ ಅವಿಭಜಿತ ಕಾರ್ಕಳ ತಾಲೂಕಿನಲ್ಲೇ ಸೇವಾ ನಿವೃತ್ತಿ ಹೊಂದುತ್ತಿರುವುದು ಅಪರೂಪದ ಕ್ಷಣ. ಸರ್ವೆಯರ್ ಆಗಿ ಜನತೆಗೆ ಅತ್ಯುತ್ತಮ ರೀತಿಯಲ್ಲಿ ನ್ಯಾಯ ದೊರಕಿಸಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.

ಸೇವಾವದಿಯಲ್ಲಿ ಸಹಕರಿಸಿದ ಎಲ್ಲರಿಗೂ ಹುಸೇನ್ ಡಿ. ಶಾಹಬಾದಿ ಕೃತಜ್ಞತೆ ಸಲ್ಲಿಸಿದರು. ಹುಸೇನ್ ಮತ್ತು ಪತ್ನಿ ಲಿಹಾಜ್ ಬೇಗಂ ದಂಪತಿಯನ್ನು ತಾಲೂಕು ಕಚೇರಿ, ಭೂದಾಖಲೆಗಳ ಇಲಾಖೆ, ವಿವಿಧ ಸಂಘಸಂಸ್ಥೆಗಳ ಪ್ರಮುಖರು, ಹೆಬ್ರಿಯ ಗಣ್ಯರು, ಜನಪ್ರತಿನಿಧಿಗಳು ಗೌರವಿಸಿದರು.

ಹೆಬ್ರಿಯ ಸಾಮಾಜಿಕ ಮುಂದಾಳು ಭಾಸ್ಕರ ಜೋಯಿಸ್, ನಿವೃತ್ತ ದೈಹಿಕ ಶಿಕ್ಷಣ ಅಧೀಕ್ಷಕ ಸೀತಾನದಿ ವಿಠ್ಠಲ ಶೆಟ್ಟಿ, ಭೂ ದಾಖಲೆಗಳ ಇಲಾಖೆಯ ರಾಘವೇಂದ್ರ ವೈದ್ಯ ಅಭಿನಂದನಾ ಭಾಷಣ ಮಾಡಿದರು. 
ಭೂದಾಖಲೆಗಳ ಇಲಾಖೆಯ ಬಿ.ಜೆ. ಉದ್ಧಾರ್ ಸ್ವಾಗತಿಸಿ ಕಾರ್ಯಕ್ರಮ  ನಿರೂಪಿಸಿದರು. ಮಧು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News