ಯಾವುದೇ ಹಾನಿಯಿಲ್ಲದೇ ಫಿಲಿಪ್ಪೀನ್ಸ್ ನ ಸಮುದ್ರಕ್ಕೆ ಬಿದ್ದ ಚೀನಾದ ರಾಕೆಟ್ ನ ಅವಶೇಷ

Update: 2022-08-01 16:30 GMT

ಮನಿಲಾ, ಆ.1: ಚೀನಾದ ಲಾಂಗ್ ಮಾರ್ಚ್-5ಬಿ ರಾಕೆಟ್ ನ ಅವಶೇಷ ಫಿಲಿಪ್ಪೀನ್ಸ್ ನ ಪಲವಾನ್ ಪ್ರಾಂತದ ಬಳಿ ಸಮುದ್ರಕ್ಕೆ ಬಿದ್ದು ಯಾವುದೇ ಹಾನಿ ವರದಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಮುದ್ರದ ನೀರಿನಲ್ಲಿ ಇರಬಹುದಾದ ರಾಕೆಟ್ ನ ಅವಶೇಷಗಳನ್ನು ಪತ್ತೆಹಚ್ಚುವಂತೆ ಸೂಚಿಸಲಾಗಿದೆ.

 ಪರಿಸ್ಥಿತಿಯ ಮೇಲೆ ನಿಗಾ ವಹಿಸಲಾಗಿದ್ದು ಜಾಗೃತೆ ವಹಿಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಲಾಗಿದೆ. ನೀರಿನ ಮೇಲೆ ತೇಲಿಬರುವ ಯಾವುದೇ ಸಂಶಯಾಸ್ಪದ ವಸ್ತುಗಳನ್ನು ಮುಟ್ಟದಂತೆ ತಿಳಿಸಲಾಗಿದೆ ಎಂದು ಫಿಲಿಪ್ಪೀನ್ಸ್ ಬಾಹ್ಯಾಕಾಶ ಸಂಸ್ಥೆಯ ಅಧಿಕಾರಿ ಮಾರ್ಕ್ ತಲಂಪಾಸ್ ಮಾಹಿತಿ ನೀಡಿದ್ದಾರೆ. ಚೀನಾವು ಬಾಹ್ಯಾಕಾಶದಲ್ಲಿ ನಿರ್ಮಿಸುತ್ತಿರುವ ಬಾಹ್ಯಾಕಾಶ ನಿಲ್ದಾಣದ ರಚನೆಗೆ ಪೂರಕ ಸಾಧನಗಳಿದ್ದ ಗಗನನೌಕೆಯನ್ನು ಹೊತ್ತೊಯ್ದ ಲಾಂಗ್ ಮಾರ್ಚ್ ರಾಕೆಟ್, ವಾಯುಮಂಡಲವನ್ನು ಪ್ರವೇಶಿಸಿದ ಬಳಿಕ ಉರಿದುಹೋಗಿತ್ತು.

ರಾಕೆಟ್ ನ ಬೂಸ್ಟರ್ ಸಹಿತ ಕೆಲವು ಅವಶೇಷಗಳು ಮಾರ್ಗದರ್ಶನವಿಲ್ಲದೆ ಭೂಮಿಗೆ ಬೀಳಲಿದೆ ಎಂದು ಚೀನಾ ಹೇಳಿಕೆ ನೀಡಿತ್ತು. ಈ ಅವಶೇಷ ಭೂಮಿಗೆ ಬೀಳಲಿದೆಯೇ ಅಥವಾ ಸಮುದ್ರಕ್ಕೆ ಬೀಳಲಿದೆಯೇ ಎಂಬ ಬಗ್ಗೆ ಚೀನಾದ ಬಾಹ್ಯಾಕಾಶ ಏಜೆನ್ಸಿ ಮಾಹಿತಿ ನೀಡಿರಲಿಲ್ಲ, ಆದರೆ ಇಳಿಯುವ ಪ್ರದೇಶವು 119 ಡಿಗ್ರಿ ಪೂರ್ವ ರೇಖಾಂಶ ಮತ್ತು 9.1 ಡಿಗ್ರಿ ಉತ್ತರ ಅಕ್ಷಾಂಶದಲ್ಲಿದೆ ಎಂದು ತಿಳಿಸಿತ್ತು. ಅಂದರೆ ಫಿಲಿಪ್ಪೀನ್ಸ್ನ ಪಲವಾನಾ ಪ್ರಾಂತದ ಸಮುದ್ರ ವ್ಯಾಪ್ತಿಯಲ್ಲಿ ಬೀಳಲಿದೆ ಎಂದಿತ್ತು. ಆದರೆ ಈ ಬಗ್ಗೆ ತಮಗೆ ಚೀನಾದಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಫಿಲಿಪ್ಪೀನ್ಸ್ ಅಧಿಕಾರಿಗಳು ಹೇಳಿದ್ದಾರೆ.

 ರಾಕೆಟ್ ನ ಅವಶೇಷಗಳನ್ನು ಈ ಹಿಂದೆಯೂ ಎರಡು ಬಾರಿ ಅನಿಯಂತ್ರಿತವಾಗಿ ಭೂಮಿಗೆ ಬೀಳಲು ಚೀನಾ ಅವಕಾಶ ಮಾಡಿಕೊಟ್ಟಿದೆ ಎಂದು ಅಮೆರಿಕ ಟೀಕಿಸಿದೆ. ಅಲ್ಲದೆ ನಿಷ್ಕ್ರಿಯಗೊಂಡಿದ್ದ ತನ್ನ ಉಪಗ್ರಹವನ್ನು ಕ್ಷಿಪಣಿ ಬಳಸಿ ಸ್ಫೋಟಿಸುವ ಮೂಲಕ ಅಂತರಿಕ್ಷದಲ್ಲಿ ತ್ಯಾಜ್ಯ ರಾಶಿಬೀಳಲೂ ಚೀನಾ ಕಾರಣವಾಗಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಟೀಕಿಸಿತ್ತು.

 ಬ್ರೆಝಿಲ್: ಸಯಾಮಿ ಅವಳಿಗಳ ಬೇರ್ಪಡಿಸುವಿಕೆ ಶಸ್ತ್ರಚಿಕಿತ್ಸೆ ಯಶಸ್ವಿ ಬ್ರಸೀಲಿಯಾ, ಆ.1: ಬೆಸೆದ ಮೆದುಳನ್ನು ಹಂಚಿಕೊಂಡಿದ್ದ ಬ್ರೆಝಿಲ್ ನ ಸಯಾಮಿ ಅವಳಿಗಳನ್ನು ಬೇರ್ಪಡಿಸುವ ಸಂಕೀರ್ಣ ಶಸ್ತ್ರಕ್ರಿಯೆ ಯಶಸ್ವಿಯಾಗಿದೆ ಎಂದು ‘ಇಂಡಿಪೆಂಡೆಂಟ್’ ಪತ್ರಿಕೆ ವರದಿ ಮಾಡಿದೆ.

  4 ವರ್ಷದ ಬರ್ನಾರ್ಡೋ ಮತ್ತು ಆರ್ಥರ್ ಲಿಮಾ ಎಂಬ ಸಯಾಮಿ ಅವಳಿಗಳನ್ನು ಬೇರ್ಪಡಿಸಲು ಕನಿಷ್ಟ 7 ಶಸ್ತ್ರಚಿಕಿತ್ಸೆಗಳನ್ನು ರಿಯೊಡಿಜನೈರೊದಲ್ಲಿ ನಡೆಸಲಾಗಿದ್ದು ಇವರಿಗೆ ಲಂಡನ್ ನ ಗ್ರೇಟ್ ಆರ್ಮಂಡ್ ಸ್ಟ್ರೀಟ್ ಆಸ್ಪತ್ರೆಯ ಸರ್ಜನ್ ಡಾ. ನೂರ್

ಒವಾಸೆ ಜಿಲಾನಿ ನಿರಂತರ ಮಾರ್ಗದರ್ಶನ ನೀಡಿದ್ದರು. ಅಂತಿಮ 2 ಶಸ್ತ್ರಚಿಕಿತ್ಸೆ 33 ಗಂಟೆ ನಡೆದಿದ್ದು 100ಕ್ಕೂ ಅಧಿಕ ವೈದ್ಯಕೀಯ ಸಿಬಂದಿ ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News