ಒಂದು ಆರ್‌ಟಿಐ ಅರ್ಜಿಯ ಸುತ್ತ...
ಕೇಂದ್ರ ಸರಕಾರದ ಸಚಿವೆ ಸ್ಮತಿ ಇರಾನಿಯವರು ನಟನೆಯ ಹಿನ್ನೆಲೆಯಿಂದ ಬಂದವರಾದ್ದರಿಂದ ಡೈಲಾಗ್ ಡೆಲಿವರಿಯಲ್ಲಿ ನುರಿತವರು. ಹಾಗಾಗಿಯೇ ಭಾಜಪ ಸರಕಾರದ ಮೇಲೆ ಆರೋಪ ಬಂದಾಗ ಅಲ್ಲಗಳೆಯಲು ಮತ್ತು ಸಮರ್ಥಿಸಿಕೊಳ್ಳಲು ಅನೇಕ ಬಾರಿ ಅವರನ್ನು ಮುಂದೆ ಬಿಡಲಾಗುತ್ತದೆ. ಆದರೆ ಈ ಬಾರಿ ಅವರು ಸಮರ್ಥಿಸಿಕೊಳ್ಳಬೇಕಾಗಿ ಬಂದಿದ್ದು ಸರಕಾರವನ್ನಲ್ಲ. ಬದಲು ಸ್ವಂತ ತಮ್ಮ ಮಗಳ ಮೇಲೆ ಬಂದ ಆಪಾದನೆಯನ್ನು ಅಲ್ಲಗಳೆದು ತಮ್ಮನ್ನು ಸಮರ್ಥನೆ ಮಾಡಿಕೊಳ್ಳಲು ಹಾಗೂ ಆ ಕೆಲಸವನ್ನು ಚೆನ್ನಾಗಿಯೇ ಅವರು ಮಾಡಿದರು.
ಆಪಾದನೆ ಮಾಡಿದ್ದು ಕಾಂಗ್ರೆಸ್, ಉತ್ತರ ನೀಡಿದ್ದು ಬಿಜೆಪಿಯ ಇರಾನಿ. ಈ ಆಡಳಿತ-ವಿರೋಧ ಪಕ್ಷಗಳ ಆಪಾದನೆ, ಪ್ರತ್ಯುತ್ತರ ಇದ್ದದ್ದೇ. ಆದರೆ ಕಾಂಗ್ರೆಸ್‌ನವರ ಕೈಗೆ ಆ ದಾಖಲೆಗಳು ಹೇಗೆ ಬಂತೆಂದು ನೋಡುವುದಾದರೆ ಆರಿಸ್ ರೋಡ್ರಿಕ್ಸ್ ಅವರ ಬಗ್ಗೆ ಹೇಳಲೇಬೇಕು. ರೋಡ್ರಿಕ್ಸ್ ಗೋವಾದ ಹೆಸರಾಂತ ಸಾಮಾಜಿಕ ಕಾರ್ಯಕರ್ತರು, ಹೈಕೋರ್ಟ್ ವಕೀಲರು ಮತ್ತು ಸಮಾಜ ಸೇವಕರು. ಈ ವ್ಯಕ್ತಿ ಅನೇಕ ವರ್ಷಗಳಿಂದ ಸರಕಾರಗಳ ಕಾರ್ಯಕ್ರಮ, ಯೋಜನೆಗಳಲ್ಲಿ ನಡೆಯುವ ಮತ್ತು ಪ್ರಭಾವಿಗಳ ವ್ಯವಹಾರಗಳಲ್ಲಿ ಆಗುವ ಅಂಕುಡೊಂಕುಗಳನ್ನು ಪತ್ತೆ ಮಾಡುತ್ತಾ ಮತ್ತು ಅವುಗಳ ವಿರುದ್ಧ ಧ್ವನಿ ಎತ್ತುತ್ತಲೇ ಬಂದಿದ್ದಾರೆ.
ರೋಡ್ರಿಕ್ಸ್ ಅವರು ಹಾಕಿದ ಒಂದು ಆರ್‌ಟಿಐ ಅರ್ಜಿಗೆ ಬಂದ ಉತ್ತರದಲ್ಲಿ ಒಂದು ರೋಚಕ ವಿಷಯ ಹೊರಬಂದಿದೆ. ಅದೇನೆಂದರೆ, ಗೋವಾದ ‘ಸಿಲಿ ಸೋಲ್ ಕೆಫೆ ಆ್ಯಂಡ್ ಬಾರ್ ರೆಸ್ಟೋರೆಂಟ್’ನ ಲೈಸೆನ್ಸ್ ನವೀಕರಣದ ವಿಷಯದಲ್ಲಿ ದೊಡ್ಡ ಗೋಲ್‌ಮಾಲ್ ನಡೆದಿದೆ. ಆ್ಯಂಟನಿ ಎಂಬುವವರ ಹೆಸರಿನಲ್ಲಿ ಲೈಸೆನ್ಸ್ ಇತ್ತು. ಅವರು 2021ರ ಮೇ ತಿಂಗಳಲ್ಲಿ ತೀರಿಕೊಂಡಿದ್ದಾರೆ. ಆದರೆ ಈ ವರ್ಷ ಅಂದರೆ 2022 ಜೂನ್‌ನಲ್ಲಿ ಅದೇ ಆ್ಯಂಟನಿ ಹೆಸರಿಗೆ ಲೈಸೆನ್ಸ್ ನವೀಕರಣ ಆಗಿದೆ. ಹಾಗಾದರೆ ನವೀಕರಣ ಪ್ರಕ್ರಿಯೆಯ ಕಾಗದಗಳಿಗೆ ಆ್ಯಂಟನಿಯವರ ಸಹಿ ಹಾಕಿದ್ದು ಯಾರು? ಇಲ್ಲಿ ಎರಡೇ ಸಾಧ್ಯತೆ ಇರುವುದು. ಒಂದೋ ಪವಾಡ ನಡೆದಿರಬೇಕು. ಇಲ್ಲ ಅಂದರೆ ಆ ವ್ಯಕ್ತಿಯ ಸಹಿಯನ್ನು ಫೋರ್ಜರಿ ಮಾಡಿರಬೇಕು. ನೀವು ಪವಾಡವನ್ನೇ ನಂಬುವುದಾದರೆ ನಮ್ಮ ಅಭ್ಯಂತರವಿಲ್ಲ. ಆದರೆ ಈ ಪವಾಡ ಬಯಲು ಮಾಡಲೆಂದು ರೋಡ್ರಿಕ್ಸ್ ಅವರು ಗೋವಾದ ಎಕ್ಸೈಸ್ ಕಮಿಷನರ್ ಬಳಿ ದೂರು ನೀಡಿದ್ದಾರೆ. ಅಲ್ಲಿ ಮತ್ತೊಂದಿಷ್ಟು ಭಾನಗಡಿ ಹೊರಬಂದಿವೆ. ಗೋವಾದ ಅಬಕಾರಿ ಆಯುಕ್ತ ನಾರಾಯಣ್ ಸಾಮಾನ್ಯ ಅಧಿಕಾರಿ ಅಲ್ಲ ಅನ್ನುವ ಮಾತಿದೆ. ಹಾಗಾಗಿಯೇ ರೆಸ್ಟೋರೆಂಟಿನ ಹಿಂದು ಮುಂದನ್ನು ಗಮನಿಸಿಲ್ಲ ಅಥವಾ ಗಮನಿಸಿದರೂ ನಿರ್ಲಕ್ಷಿಸಿದ್ದಾರೆ. ಕೂಡಲೇ ರೋಡ್ರಿಕ್ಸ್ ಅವರ ದೂರು, ಆರ್‌ಟಿಐ ದಾಖಲೆ ಮತ್ತು ತಮ್ಮ ತನಿಖೆಯಲ್ಲಿ ಸಿಕ್ಕ ಮಾಹಿತಿ ಮೇರೆಗೆ ನೋಟಿಸ್ ನೀಡಿದ್ದಾರೆ. ಅದನ್ನು ಆಧರಿಸಿಯೇ ಈಗ ಸಚಿವೆಯ ಮಗಳ ಮೇಲೆ ಆಪಾದನೆ ಕೇಳಿ ಬಂದಿರುವುದು. ಏಕೆಂದರೆ ಆ ಹೊಟೇಲ್ ನಡೆಸುತ್ತಿರುವುದು ಸಚಿವೆಯ ಮಗಳಾದ 18 ವರ್ಷದ ಜೋಯಿಸ್ ಇರಾನಿ ಎಂಬ ಮಾತು ಕೇಳಿ ಬರುತ್ತಿದೆ. ಆರ್‌ಟಿಐ ದಾಖಲೆಯಲ್ಲಿ ಜೋಯಿಶ್ ಇರಾನಿ ಹೆಸರು ಇಲ್ಲ. ಆದ್ದರಿಂದ ಬಾರ್ ರೆಸ್ಟೋರೆಂಟ್‌ಗೂ ತಮ್ಮ ಮಗಳಿಗೂ ಯಾವುದೇ ಸಂಬಂಧವಿಲ್ಲ ಅಂತ ಕೇಂದ್ರ ಸಚಿವೆ ದಿಟ್ಟವಾಗಿ ಹೇಳಿ ಬಿಟ್ಟರು. ಆದರೆ ನಾಲ್ಕು ತಿಂಗಳ ಹಿಂದಷ್ಟೆ ಮಕ್ಕಳ ಕಲ್ಯಾಣ ಸಚಿವೆ ತಮ್ಮ ಮಗಳ ಕಲ್ಯಾಣ ಕಾರ್ಯದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿರುವುದು ಬೆಳಕಿಗೆ ಬಂದಿದೆ.
ಗೋವಾದಲ್ಲಿ ರೆಸ್ಟೋರೆಂಟ್ ತೆರೆದು ಸ್ವಂತ ವ್ಯವಹಾರ ಮಾಡುವ ಜೋಯಿಶ್ ಬಗ್ಗೆ ಹೆಮ್ಮೆಯ ಅಮ್ಮನಾಗಿ ಸ್ಮತಿ ಇರಾನಿಯವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ. ಅದನ್ನು ಆಧರಿಸಿ ಕೆಲವು ವೆಬ್‌ಸೈಟ್ ಮತ್ತು ಪತ್ರಿಕೆಗಳು ‘‘ಪ್ರೀತಿ ಸ್ಫುರಿಸಿದ ಅಮ್ಮ’’ ಎಂದು ವರದಿ ಮಾಡಿವೆ. ವಿಶೇಷ ಅಂದರೆ, ಇವತ್ತು ಯಾವ ಬಾರ್‌ಗೂ ತಮ್ಮ ಮಗಳಿಗೂ ಸಂಬಂಧವಿಲ್ಲವೆಂದು ಸಚಿವೆ ಹೇಳುತ್ತಿದ್ದಾರೋ ಅದೇ ಸಿಲಿ ಸೋಲ್ ಕೆಫೆ ಆ್ಯಂಡ್ ಬಾರ್‌ನ ಹೆಸರನ್ನು ಖುದ್ದು ಸ್ಮತಿ ಇರಾನಿ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಇದಕ್ಕೆ ಕಳಸವಿಟ್ಟಂತೆ ಭಾರತದ ಪ್ರಖ್ಯಾತ ಯೂಟ್ಯೂಬ್ ವ್ಲಾಗರ್ ಕುನಾಲ್ ವಿಜಯಕರ್ ಅವರು ಗೋವಾದ ಸಿಲಿಸೋಲ್ ಬಾರನ್ನು ಪರಿಚಯಿಸುವಾಗ ಜೋಯಾ ಇರಾನಿಯವರನ್ನು ಮಾತಾಡಿಸಿದ್ದಾರೆ. ಆ ವೀಡಿಯೊದಲ್ಲಿ ಜೋಯಿಶ್ ಅವರನ್ನು ರೆಸ್ಟೋರೆಂಟಿನ ಮಾಲಕರು, ಕಡಿಮೆ ವಯಸ್ಸಿನ ವ್ಯವಹಾರಸ್ಥೆ (ಆಂತ್ರೊಪನರ್) ಎಂದು ಹೊಗಳುವ ಕುನಾಲ್ ಅವರ ಮಾತಿಗೆ ಜೋಯಿಶ್ ನಗುನಗುತ್ತಲೇ ಸಮ್ಮತಿಸುತ್ತಾರೆ. ಜೊತೆಗೆ ತಾನೇಕೆ ಗೋವಾದಲ್ಲಿ ಬಾರ್ ರೆಸ್ಟೋರೆಂಟ್ ತೆರೆದೆ ಎಂದು ವಿವರಿಸುತ್ತಾರೆ. ಆನಂತರ ಆ ರೆಸ್ಟೋರೆಂಟಿನ ವಿಶೇಷ ಖಾದ್ಯಗಳನ್ನು ಕುನಾಲ್‌ಗೆ ಪರಿಚಯಿಸುತ್ತಾರೆ. ಈಗಲೂ ಆ ವೀಡಿಯೊ ಯೂಟ್ಯೂಬ್‌ನಲ್ಲಿದೆ. ಹಾಗಾದರೆ ಸಚಿವೆ ಸ್ಮತಿ ಇರಾನಿ ತಮ್ಮ ಮಗಳ ಬಗ್ಗೆ ನಾಲ್ಕು ತಿಂಗಳ ಹಿಂದೆ ಹೇಳಿದ್ದು ನಿಜವಾ? ಅಥವಾ ಈಗ ಹೇಳುತ್ತಿರುವುದು ನಿಜವಾ?
ಕೇಂದ್ರದಲ್ಲಿರುವುದೂ, ಗೋವಾದಲ್ಲಿರುವುದೂ ಒಂದೇ ಪಕ್ಷದ ಸರಕಾರ. ಅದು ದೇಶದ ಪ್ರಬಲ ಪಕ್ಷ. ಆ ಪಕ್ಷದ ಪ್ರಬಲ ನಾಯಕಿ ಸ್ಮತಿ ಇರಾನಿ. ಹೀಗಿರುವಾಗ ಆರ್‌ಟಿಐ ಎಂದು ಓಡಾಡಿ ದಾಖಲೆ ಹೊರಗೆಳೆದ ರೋಡ್ರಿಕ್ಸ್ ಮತ್ತು ನೋಟಿಸ್ ನೀಡಿದ ಅಧಿಕಾರಿ ನಾರಾಯಣ್‌ಗೆ ಸ್ಮತಿ ಇರಲಿಲ್ಲವೇ? ಎಂದು ಜನ ಸಾಮಾನ್ಯರಿಗೆ ಅನ್ನಿಸಬಹುದು. ಅದರ ಪರಿಣಾಮ ಏನಾಗಬಹುದು ಎಂದು ಯಾರಿಗಾದರೂ ಗೊಂದಲ ಮೂಡದೆ ಇರದು. ಆದರೆ ಪರಿಣಾಮಗಳ ಬಗ್ಗೆ ಯೋಚಿಸದೆ ಕರ್ತವ್ಯ ನಿರ್ವಹಣೆ ಮಾಡುವವರ ಬಗ್ಗೆ ಒಂದು ಗೌರವ ಮೂಡುವುದು ಸಹಜ.