ಭಾರತೀಯ ಸಶಸ್ತ್ರ ಪಡೆಗಳ ಸುಧಾರಣೆಗೆ ಅಗ್ನಿಪಥ್ ಅನಿವಾರ್ಯವೇ?

Update: 2022-08-02 05:49 GMT

ಸರಕಾರವು ಬಳಸುವ ಯಾವುದೇ ರಾಜಕೀಯ ವಾಕ್ಚಾತುರ್ಯ, ಯೋಜನೆಯನ್ನು ಸಮರ್ಥಿಸಲು ಅದು ಆಯ್ಕೆ ಮಾಡಿಕೊಂಡಿರುವ ಹಾಲಿ ಮತ್ತು ಮಾಜಿ ಸೇನಾಧಿಕಾರಿಗಳು ಅಥವಾ ಬಲಪಂಥೀಯ ವ್ಯಾಖ್ಯಾನಕಾರರಿಗೆ ಕೇವಲ ವಿತ್ತೀಯ ಉದ್ದೇಶದಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂಬ ಅಹಿತಕರ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ.

ಅಲ್ಪಾವಧಿಯ ಸೇನಾ ನೇಮಕಾತಿ ಯೋಜನೆ ‘ಅಗ್ನಿಪಥ್’ ವಿರುದ್ಧ ಪ್ರತಿಭಟನೆಯ ಬೆಂಕಿ ದೇಶದ ಬೀದಿಗಳಲ್ಲಿ ಶಮನಗೊಂಡಿರಬಹುದು, ಆದರೆ ಅದಿನ್ನೂ ಯುವಜನಾಂಗದ ಹೃದಯಗಳು ಮತ್ತು ಮನಸ್ಸುಗಳಲ್ಲಿ ಕುದಿಯುತ್ತಲೇ ಇದೆ.

ಅಗ್ನಿಪಥ್ ಇನ್ನು ಮುಂದೆ ಭಾರತೀಯ ಸಶಸ್ತ್ರಪಡೆಗಳಿಗೆ ಯೋಧರ ನೇಮಕಾತಿಗಾಗಿ ಏಕೈಕ ಮಾರ್ಗವಾಗಿರಲಿದೆ. ಈ ಯೋಜನೆಯಡಿ ಸಶಸ್ತ್ರ ಪಡೆಗಳಿಗೆ ಸೇರ್ಪಡೆಗೊಳ್ಳುವವರನ್ನು ಅಗ್ನಿವೀರರು ಎಂದು ಕರೆಯಲಾಗುತ್ತದೆ ಮತ್ತು ಅವರು ವಿಶಿಷ್ಟ ಚಿಹ್ನೆ ಮತ್ತು ವಿಭಿನ್ನ ಸೇವಾ ನಿಯಮಗಳೊಂದಿಗೆ ನಾಲ್ಕು ವರ್ಷ ಸೇವೆ ಸಲ್ಲಿಸುತ್ತಾರೆ.

ಪ್ರಮುಖ ಬದಲಾವಣೆಗಳು

ಯೋಜನೆಯನ್ನು ಪುನರಾವಲೋಕನ ಮಾಡುವುದಾದರೆ ಅಗ್ನಿವೀರರು ನಾಲ್ಕು ವರ್ಷಗಳ ಸೇವೆಯ ಬಳಿಕ ನಿವೃತ್ತರಾಗುತ್ತಾರೆ ಮತ್ತು ಅವರಲ್ಲಿ ಕಾಲುಭಾಗದಷ್ಟು ಅಗ್ನಿವೀರರು ಸಶಸ್ತ್ರ ಪಡೆಗಳಲ್ಲಿ ಯೋಧರಾಗಿ ಸೇವೆಯಲ್ಲಿ ಮುಂದುವರಿಯುತ್ತಾರೆ. ನಿವೃತ್ತ ಅಗ್ನಿವೀರರಿಗೆ ಗ್ರಾಚ್ಯುಟಿ, ಪಿಂಚಣಿ, ವೈದ್ಯಕೀಯ ರಕ್ಷಣೆ, ಕ್ಯಾಂಟೀನ್ ಸೌಲಭ್ಯ ಅಥವಾ ಮಾಜಿ ಯೋಧ ಎಂಬ ಸ್ಥಾನಮಾನವೂ ದೊರೆಯುವುದಿಲ್ಲ.

ನಿವೃತ್ತ ಅಗ್ನಿವೀರರಿಗೆ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ನೇಮಕಗಳಲ್ಲಿ ಮೀಸಲಾತಿ ಅಥವಾ ರಾಜ್ಯ ಪೊಲೀಸ್ ಇಲಾಖೆಗಳು ಅಥವಾ ಕಾರ್ಪೊರೇಟ್ ಉದ್ಯೋಗಗಳಲ್ಲಿ ಆದ್ಯತೆಯನ್ನು ನೀಡುವುದಾಗಿ ಭರವಸೆಯನ್ನೇನೋ ನೀಡಲಾಗಿದೆ. ಆದರೆ ಮಾಜಿ ಯೋಧರನ್ನು ನೇಮಿಸಿಕೊಳ್ಳುವಲ್ಲಿ ಈ ಸಂಸ್ಥೆಗಳ ದಾಖಲೆಗಳನ್ನು ಪರಿಗಣಿಸಿದರೆ ಈ ಭರವಸೆಯು ಅರ್ಥಹೀನವಾಗಿದೆ.

ಅಗ್ನಿವೀರರಿಗೆ ಸವಲತ್ತುಗಳು, ಹಕ್ಕುಗಳು ಮತ್ತು ಸಾಮಾಜಿಕ ಸ್ಥಾನಮಾನ ಆಕರ್ಷಕವಾಗಿಲ್ಲ, ಇದಕ್ಕಿಂತ ಹೆಚ್ಚಾಗಿ ಅಗ್ನಿಪಥ್ ಯೋಜನೆಯು ಶೋಷಣೆಯಾಗಿದೆ. ಅದು ದೇಶದಲ್ಲಿ ಹೆಚ್ಚಿರುವ ನಿರುದ್ಯೋಗ ಸಮಸ್ಯೆಯಿಂದ ಲಾಭವನ್ನು ಮಾಡಿಕೊಳ್ಳುತ್ತದೆ. ಆದಾಗ್ಯೂ ಅದು ಗ್ರಾಮೀಣ ಯುವಜನರ ಆದ್ಯತಾಪಟ್ಟಿಯಲ್ಲಿ ಮಿಲಿಟರಿ ವೃತ್ತಿಜೀವನವನ್ನು ಖಂಡಿತವಾಗಿ ಕೆಳಮಟ್ಟಕ್ಕೆ ತಳ್ಳಲಿದೆ.

ಯೋಜನೆಯಲ್ಲಿ ಇತರ ಎರಡು ಬದಲಾವಣೆಗಳನ್ನೂ ತರಲಾಗಿದ್ದು, ಇವು ಸಾರ್ವಜನಿಕರ ಗಮನಕ್ಕೆ ಹೆಚ್ಚಾಗಿ ಬಂದಿಲ್ಲ. ಅದು ಭಾರತೀಯ ಸೇನೆಯ ಹಳೆಯ ಘಟಕಗಳಲ್ಲಿ ಮತ್ತು ಉಪಘಟಕಗಳಲ್ಲಿಯ ವರ್ಗ ಆಧಾರಿತ ನೇಮಕಾತಿ ಪ್ರಕ್ರಿಯೆಯನ್ನು ತೆಗೆದುಹಾಕುತ್ತದೆ.

ತಥಾಕಥಿತ ರಾಷ್ಟ್ರೀಯ ಸೈನ್ಯದ ಪರವಾಗಿ 250 ವರ್ಷಗಳಿಗೂ ಹಳೆಯದಾದ ನೇಮಕಾತಿ ವಿಧಾನವನ್ನು ಬದಲಿಸುವುದು ಈಸ್ಟ್ ಇಂಡಿಯಾ ಕಂಪೆನಿಯಿಂದ ಬ್ರಿಟಿಷ್ ಅರಸೊತ್ತಿಗೆಗೆ ಮತ್ತು ನಂತರ ಸ್ವತಂತ್ರ ಭಾರತಕ್ಕೆ ಸುಗಮವಾಗಿ ಹಸ್ತಾಂತರಗೊಂಡ ಸಂಸ್ಥೆಯ ಗುಣಲಕ್ಷಣ, ಸ್ವರೂಪ ಮತ್ತು ನೀತಿಗಳನ್ನು ಬದಲಿಸುತ್ತದೆ.

ಮೇಲ್ನೋಟಕ್ಕೆ, ರಾಷ್ಟ್ರೀಯ ಸೇನೆಯನ್ನು ಸೃಷ್ಟಿಸುವುದು ಸ್ವಾಗತಾರ್ಹ ಕ್ರಮವಾಗಬೇಕು. ಆದರೆ ಪ್ರಸ್ತುತ ಭಾರತವನ್ನು ಆಳುತ್ತಿರುವ ಹಿಂದುತ್ವ ಸಿದ್ಧಾಂತವು ಪ್ರತಿಪಾದಿಸುತ್ತಿರುವ ರಾಷ್ಟ್ರವಾದದ ಮಾದರಿಯು ಈ ಬದಲಾವಣೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತುತ್ತದೆ. ಈ ಉತ್ಕ್ರಾಂತಿಯನ್ನು ಎದುರಿಸಲು ಸಂಸ್ಥೆಯು ಮಾಡಿಕೊಂಡಿರುವ ಸಿದ್ಧತೆಗಳು ಕನಿಷ್ಠವಾಗಿರುವಂತೆ ಕಂಡು ಬರುತ್ತಿದ್ದು, ಇದು ಹೊಸ ಯೋಜನೆಗೆ ಬದಲಾವಣೆಯ ಕುರಿತು ಆತಂಕಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಸೇನೆಯಲ್ಲಿ ನೇಮಕಾತಿಗೆ ರಾಜ್ಯವಾರು ಗುರಿಗಳನ್ನು ತೆಗೆದು ಹಾಕುವುದು ಇನ್ನೊಂದು ಮಹತ್ವದ ಬದಲಾವಣೆಯಾಗಿದೆ. ಪ್ರತೀ ರಾಜ್ಯದಲ್ಲಿಯ ‘ನೇಮಕಾತಿಗೆ ಅರ್ಹ ಪುರುಷ ಜನಸಂಖ್ಯೆ’ಯ ಆಧಾರದಲ್ಲಿ ರೂಪಿಸಲಾಗಿದ್ದ ಈ ನೀತಿಯನ್ನು ಬಹುಧರ್ಮೀಯ ಮತ್ತು ಬಹುಭಾಷಾ ದೇಶದ ಸೈನ್ಯದಲ್ಲಿ ಯಾವುದೇ ಭಾಷಾ, ಪ್ರಾದೇಶಿಕ ಅಥವಾ ಜನಾಂಗೀಯ ಅಸಮತೋಲನವನ್ನು ತಡೆಗಟ್ಟಲು 1960ರ ದಶಕದಲ್ಲಿ ಜಾರಿಗೊಳಿಸಲಾಗಿತ್ತು.

ಈ ನೀತಿಯನ್ನು ಕೈಬಿಡುವುದು ಒಂದು ಪ್ರದೇಶ, ಧರ್ಮ ಅಥವಾ ಭಾಷಾ ಪ್ರಾಬಲ್ಯದ ಸೇನೆಯನ್ನು ಸೃಷ್ಟಿಸುವ ಅಪಾಯವನ್ನು ತರುತ್ತದೆ ಮತ್ತು ಪಾಕಿಸ್ತಾನವು ಸಾಕ್ಷಿಯಾಗಿರುವ ಮಿಲಿಟರಿ ದಂಗೆಗಳು ಮತ್ತು ನಿಷ್ಕ್ರಿಯ ನಾಗರಿಕ-ಮಿಲಿಟರಿ ಸಂಬಂಧಗಳನ್ನು ತಡೆಯಲು ಸ್ವತಂತ್ರ ಭಾರತವು ಕೈಗೊಂಡಿದ್ದ ಕ್ರಮಗಳಲ್ಲೊಂದಕ್ಕೆ ತಿಲಾಂಜಲಿ ನೀಡುತ್ತದೆ. ಅಸಮತೋಲಿತ ಸೈನ್ಯವು ನಾಗರಿಕ-ಮಿಲಿಟರಿ ಸಂಬಂಧಗಳ ಮೇಲೆ ಅನಗತ್ಯ ಒತ್ತಡವನ್ನು ಹೇರುತ್ತದೆ. ಶೈಕ್ಷಣಿಕ ಸಂಶೋಧನೆಯೂ ಬಹು ಜನಾಂಗೀಯ ಸಮಾಜದಲ್ಲಿ ಅಂತರ್ಯುದ್ಧದ ಹೆಚ್ಚಿನ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದೆ.

ವಿತ್ತೀಯ ಉದ್ದೇಶಗಳು

ಅಪಾಯಗಳು ಸಶಸ್ತ್ರ ಪಡೆಗಳ ದಕ್ಷತೆ ಮತ್ತು ಪರಿಣಾಮಕಾರಿತ್ವಕ್ಕೆ ಹೆಚ್ಚು ನೇರವಾಗಿವೆ. ತರಬೇತಿ ಅವಧಿಯೂ ಸೇರಿದಂತೆ ನಾಲ್ಕು ವರ್ಷಗಳ ಸೇವಾವಧಿಯು ಯುವಕನೋರ್ವನನ್ನು ಸಮರ್ಥ ಯೋಧನನ್ನಾಗಿ ಬಳಸಿಕೊಳ್ಳಲು ತುಂಬ ಚಿಕ್ಕದಾಗುತ್ತದೆ ಎಂದು ಪರಿಗಣಿಸಲಾಗಿದೆ. ಯುವ ಯೋಧರನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು ಕನಿಷ್ಠ ಏಳು ವರ್ಷಗಳ ಸೇವಾವಧಿಯ ಅಗತ್ಯವಿದೆ ಎನ್ನುವುದನ್ನು ಹಲವಾರು ಅನುಭವಿಗಳು ಒಪ್ಪುತ್ತಾರೆ. 1960ರ ದಶಕದವರೆಗೂ ಈ ಅವಧಿ ಸೇನೆಯಲ್ಲಿ ಜಾರಿಯಲ್ಲಿತ್ತು.

ಐದು ವರ್ಷಕ್ಕಿಂತ ಹೆಚ್ಚಿನ ಅವಧಿಯ ಸೇವೆಯು ಗ್ರಾಚ್ಯುಟಿ ಮತ್ತು ಮಾಜಿ ಯೋಧ ಸ್ಥಾನಮಾನ ನೀಡಲು ಕಾರಣವಾಗುವುದರಿಂದ ಸರಕಾರವು ಅಗ್ನಿವೀರರ ಸೇವಾವಧಿಯನ್ನು ನಾಲ್ಕು ವರ್ಷಗಳಿಗೆ ಸೀಮಿತಗೊಳಿಸುವ ಮೂಲಕ ಈ ಸೌಲಭ್ಯಗಳನ್ನು ತಳ್ಳಿಹಾಕಿದೆ. ಸಶಸ್ತ್ರಪಡೆಗಳು ಅಂತಿಮವಾಗಿ ಶೇ.50ರಷ್ಟು ಅಗ್ನಿವೀರರು ಮತ್ತು ಶೇ.50ರಷ್ಟು ಸಾಮಾನ್ಯ ಯೋಧರನ್ನು ಒಳಗೊಂಡಿರಲಿದೆ.

ಅಗ್ನಿಪಥ್ ಯೋಜನೆಯು ಸರಕಾರದ ಹಣವನ್ನು ಉಳಿಸುವ ಕ್ರಮವಾಗಿದೆ, ಆದರೆ ನಿವೃತ್ತಿಯ ಬಳಿಕ ನಿಯಮಿತ ಮಿಲಿಟರಿ ಸೇವೆಗೆ ಸೇರ್ಪಡೆಗೊಳ್ಳುವ ಶೇ.25ರಷ್ಟು ಅಗ್ನಿವೀರರು ಅದಕ್ಕಾಗಿ ದಂಡವನ್ನು ತೆರಬೇಕಾಗುತ್ತದೆ. ಅಗ್ನಿವೀರರಾಗಿ ಅವರ ನಾಲ್ಕು ವರ್ಷಗಳ ಅವಧಿಯು ಯೋಧರಾಗಿ ಅವರ ಸೇವಾವಧಿ, ಮೂಲ ಸೇವಾ ವೇತನ ಅಥವಾ ಪಿಂಚಣಿಗಳಿಗೆ ಪರಿಗಣಿಸಲ್ಪಡುವುದಿಲ್ಲ.

ಸರಕಾರವು ಬಳಸುವ ಯಾವುದೇ ರಾಜಕೀಯ ವಾಕ್ಚಾತುರ್ಯ, ಯೋಜನೆಯನ್ನು ಸಮರ್ಥಿಸಲು ಅದು ಆಯ್ಕೆ ಮಾಡಿಕೊಂಡಿರುವ ಹಾಲಿ ಮತ್ತು ಮಾಜಿ ಸೇನಾಧಿಕಾರಿಗಳು ಅಥವಾ ಬಲಪಂಥೀಯ ವ್ಯಾಖ್ಯಾನಕಾರರಿಗೆ ಕೇವಲ ವಿತ್ತೀಯ ಉದ್ದೇಶದಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂಬ ಅಹಿತಕರ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ.

2022-23ರಲ್ಲಿ ರಕ್ಷಣಾ ಸಚಿವಾಲಯಕ್ಕೆ 5.25 ಲ.ಕೋ.ರೂ.ಗಳ ಒಟ್ಟು ಹಂಚಿಕೆಯಲ್ಲಿ 1.19 ಲ.ಕೋ.ರೂ.ಗಳು ಪಿಂಚಣಿಗೇ ಹೋಗುತ್ತವೆ. 2013ರಿಂದ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರದ ಭರವಸೆ ಮತ್ತು ಏಳನೇ ವೇತನ ಆಯೋಗದ ಶಿಫಾರಸುಗಳಂತೆ 2015ರಲ್ಲಿ ‘ಒಂದು ಶ್ರೇಣಿ ಒಂದು ಪಿಂಚಣಿ’ ಯೋಜನೆಯನ್ನು ಜಾರಿಗೊಳಿಸಿದ ಬಳಿಕ ಈ ಮೊತ್ತದಲ್ಲಿ ಗಣನೀಯ ಏರಿಕೆಯಾಗಿದೆ.

ಭಾರೀ ಪಿಂಚಣಿ ಹೊರೆ

ಕೆಲವು ವರ್ಷಗಳ ಹಿಂದೆಯೇ ಸರಕಾರದಲ್ಲಿ ಎಚ್ಚರಿಕೆಯ ಗಂಟೆಗಳು ಮೊಳಗಲು ಆರಂಭವಾಗಿದ್ದು, ಇದು ರಕ್ಷಣಾ ಮತ್ತು ಆಂತರಿಕ ಭದ್ರತಾ ವೆಚ್ಚಗಳಿಗೆ ಹಣಕಾಸನ್ನು ಒದಗಿಸುವ ಮಾರ್ಗವನ್ನು ಕಂಡುಕೊಳ್ಳಲು ಸರಕಾರವು 15ನೇ ಹಣಕಾಸು ಆಯೋಗದ ಉಲ್ಲೇಖಾ ನಿಯಮಗಳನ್ನು ತಿದ್ದುಪಡಿ ಮಾಡಲು ಕಾರಣವಾಗಿತ್ತು.

ರಕ್ಷಣಾ ಸಿಬ್ಬಂದಿಗಾಗಿ ಪಿಂಚಣಿ ಮತ್ತು ವೇತನಗಳ ಹಾಲಿ ಮಾದರಿಯು ಸಮರ್ಥನೀಯವಲ್ಲ ಮತ್ತು ವೆಚ್ಚಗಳನ್ನು ಕಡಿಮೆ ಮಾಡಲು ನಿರ್ದಿಷ್ಟ ಯೋಜನೆಯೊಂದು ಅಗತ್ಯವಿದೆ ಎಂದು ಆಯೋಗವು ತನ್ನ ಅಂತಿಮ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಿತ್ತು. ಸಶಸ್ತ್ರಪಡೆಗಳ ಆಧುನೀಕರಣಕ್ಕಾಗಿ ಹೆಚ್ಚಿನ ಸಂಪನ್ಮೂಲಗಳನ್ನು ಒದಗಿಸಲು ಅದು ಶಿಫಾರಸು ಮಾಡಿತ್ತು. ಆದರೂ ಯೋಧರ ಅಲ್ಪಾವಧಿ ಗುತ್ತಿಗೆ ನೇಮಕಾತಿಯ ಯೋಜನೆಯಂತಹ ಅಪಾಯಕಾರಿ ಪರಿಕಲ್ಪನೆಯನ್ನು ಮುಂದಿಡುವ ಸಾಹಸವನ್ನು ಅದು ಮಾಡಿರಲಿಲ್ಲ. ಸರಕಾರವು ಆಯೋಗದ ಶಿಫಾರಸುಗಳನ್ನು ಒಪ್ಪಿಕೊಂಡಿರಲಿಲ್ಲ.

ಸಶಸ್ತ್ರ ಪಡೆಗಳನ್ನು ದುರ್ಬಲಗೊಳಿಸುವಿಕೆ

ಸರಕಾರದ ಈ ಕ್ರಮವು ಭಾರತದ ವಿರೋಧಿಗಳಿಗೆ ರವಾನಿಸುವ ಸಂದೇಶವು ಇನ್ನಷ್ಟು ನೋವಿನದಾಗಿದೆ. ಹಾಲಿ ಆಡಳಿತದಡಿ ದೇಶದ ವ್ಯೆಹಾತ್ಮಕ ಉದ್ದೇಶಗಳನ್ನು ಪೂರೈಸಲು ದೇಶಕ್ಕೆ ಅಗತ್ಯವಾಗಿರುವುದನ್ನು ಸಶಸ್ತ್ರ ಪಡೆಗಳಿಗೆ ಒದಗಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಅವರಿಗೆ ಗೊತ್ತಾಗಿದೆ. ಅಗ್ನಿಪಥ್ ಯೋಜನೆಯನ್ನು ತರುವ ಮೊದಲೇ ಸಶಸ್ತ್ರ ಪಡೆಗಳು ಹಣಕಾಸಿನ ಕೊರತೆಯಿಂದ ಬಳಲುತ್ತಿದ್ದವು.

ಈಗಾಗಲೇ ಭಾರತೀಯ ವಾಯುಪಡೆಯಲ್ಲಿ ಯುದ್ಧವಿಮಾನಗಳು ಮತ್ತು ನೌಕಾಪಡೆಯಲ್ಲಿ ಯುದ್ಧನೌಕೆಗಳ ಸಂಖ್ಯೆ ಕುಸಿದಿದೆ. ಕಳೆದೆರಡು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದ್ದರಿಂದ ಭಾರತೀಯ ಸೇನೆಯಲ್ಲಿ ಪ್ರಸ್ತುತ ಒಂದು ಲಕ್ಷಕ್ಕೂ ಅಧಿಕ ಯೋಧರ ಕೊರತೆಯಿದೆ.

ಚೀನಾ ಮತ್ತು ಪಾಕಿಸ್ತಾನದ ಗಡಿಗಳಲ್ಲಿ ಬೆದರಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೇನೆಯು ಲಡಾಖ್ ಮತ್ತು ಕಾಶ್ಮೀರಗಳಲ್ಲಿ ಹೆಚ್ಚುವರಿ ಯೋಧರನ್ನು ನಿಯೋಜಿಸಿದೆ. ವಾಸ್ತವಿಕ ನಿಯಂತ್ರಣ ರೇಖೆಯ ಇತರ ಕಡೆಗಳಲ್ಲಿಯೂ ಕಟ್ಟೆಚ್ಚರವನ್ನು ಕಾಯ್ದುಕೊಳ್ಳಬೇಕಾದ ಸ್ಥಿತಿಯಿದೆ. ಇಂತಹ ಸನ್ನಿವೇಶದಲ್ಲಿ ಮಾನವ ಶಕ್ತಿಯನ್ನು ಕಡಿತಗೊಳಿಸುವುದರಿಂದ ಈಗಾಗಲೇ ಒತ್ತಡದಲ್ಲಿರುವ ಸೇನೆಯು ಇನ್ನಷ್ಟು ಒತ್ತಡಕ್ಕೊಳಗಾಗುತ್ತದೆ.

ಕ್ಷೇತ್ರಗಳಲ್ಲಿ ಸೇವೆಗೆ ನಿಯೋಜನೆಯ ಆವರ್ತನಗಳು ಹೆಚ್ಚುತ್ತವೆ ಮತ್ತು ನಿಯೋಜನೆಯ ಅವಧಿ ದೀರ್ಘವಾಗಿರುತ್ತದೆ. ತರಬೇತಿ ಮತ್ತು ವಿಶ್ರಾಂತಿ ಅವಧಿ ಕಡಿಮೆಯಾಗುತ್ತದೆ. ಸರಕಾರವು ಉಳಿಸಬಹುದಾದ ಯಾವುದೇ ಹಣವು ಯೋಧರ ಹಿತಚಿಂತನೆಯನ್ನು ಬಲಿಗೊಡುತ್ತದೆ ಮತ್ತು ಇದು ಅಗ್ನಿಪಥ್ ಯೋಜನೆಯೊಂದಿಗೆ ಇನ್ನಷ್ಟು ಅಧೋಗತಿಗೆ ತಲುಪುತ್ತದೆ.

ದುರ್ಬಲ ದೇಶ

ಭಾರತೀಯ ಸಶಸ್ತ್ರ ಪಡೆಗಳಿಗೆ ಸುಧಾರಣೆಯ ಅಗತ್ಯವಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಅಗ್ನಿಪಥ್ ಆ ಸುಧಾರಣೆಯಲ್ಲ. ಈ ಪ್ರಸ್ತಾವವನ್ನು ಎಂದಿಗೂ ಸಾರ್ವಜನಿಕವಾಗಿ ಅಥವಾ ಸಂಸತ್ತಿನಲ್ಲಿ ಚರ್ಚಿಸಲಾಗಿರಲಿಲ್ಲ. ಅದು ಸ್ವತಂತ್ರ ಪರಿಶೀಲನೆಗೆ ಒಳಗಾಗಿಲ್ಲ ಅಥವಾ ಪ್ರಾಯೋಗಿಕ ಯೋಜನೆಯಾಗಿಯೂ ಪ್ರಯತ್ನಿಸಲ್ಪಟ್ಟಿಲ್ಲ. ಯೋಜನೆಯನ್ನು ಪ್ರಕಟಿಸಿರುವ ಸಮಯ ಮತ್ತು ವಿಧಾನ ಬಹಳಷ್ಟು ಗೊಂದಲದ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಈ ಪ್ರಶ್ನೆಗಳಿಗೆ ಕಾಲಾನಂತರದಲ್ಲಿ ಉತ್ತರಗಳು ದೊರೆಯಬಹುದು, ಆದರೆ ಆಗ ಅವುಗಳನ್ನು ತಿದ್ದುಪಡಿ ಮಾಡಲು ತೀರ ವಿಳಂಬವಾಗಿರುತ್ತದೆ. ಮಿಲಿಟರಿಗೆ ಬೇಕಾದ್ದನ್ನು ಒದಗಿಸಲು ಕೇಂದ್ರ ಸರಕಾರಕ್ಕೆ ಸಾಧ್ಯವಿಲ್ಲ ಎನ್ನುವ ಸಂದೇಶ ಈಗಾಗಲೇ ಭಾರತದ ವಿರೋಧಿಗಳಿಗೆ ರವಾನೆಯಾಗಿದೆ. ಅಗ್ನಿಪಥ್ ಯೋಜನೆಯ ಕೃಪೆಯಿಂದಾಗಿ ದುರ್ಬಲಗೊಂಡ ಮಿಲಿಟರಿಯು ಭಾರತವನ್ನು ಆಕ್ರಮಣಗಳಿಗೆ ಸುಲಭಭೇದ್ಯವಾಗಿಸುತ್ತದೆ ಎನ್ನುವುದನ್ನು ಸರಕಾರದ ಯಾವುದೇ ಬಡಾಯಿಯು ಮುಚ್ಚಿಡಲು ಸಾಧ್ಯವಿಲ್ಲ.

ಕೃಪೆ: The India Forum

Writer - ಸುಷಾಂತ್ ಸಿಂಗ್

contributor

Editor - ಸುಷಾಂತ್ ಸಿಂಗ್

contributor

Similar News