ಕಾಪು ಬಜರಂಗದಳ ಮುಖಂಡನಿಗೆ ಜೀವಬೆದರಿಕೆ ಪ್ರಕರಣ; ಆರೋಪಿಗಳಿಗೆ ಜಾಮೀನು

Update: 2022-08-02 12:50 GMT

ಕಾಪು: ಕಾಪು ಪ್ರಖಂಡ ಬಜರಂಗದಳ ಸಂಚಾಲಕ ಸುಧೀರ್ ಸೋನು ಅಲಿಯಾಸ್ ನಾಮ ಸುಧೀರ್ ಎಂಬವರಿಗೆ ಜೀವ ಬೆದರಿಕೆಯೊಡ್ಡಿದ ಪ್ರಕರಣದ ಆರೋಪಿಗಳಿಗೆ ಉಡುಪಿ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಕಾಪು ಚಂದ್ರನಗರದ ನಿವಾಸಿಯಾದ ಅಶ್ರಫ್ ಯಾನೆ ಆಸಿ ಮತ್ತು ಶೋಯೆಬ್ ಮತ್ತವರ ತಂಡ ತನ್ನ ಮನೆಗೆ ನುಗ್ಗಿ ಜೀವ ಬೆದರಿಕೆ ಒಡ್ಡಿದ್ದರು ಎಂದು ಸುಧೀರ್ ಸೋನು ಶಿರ್ವ ಠಾಣೆಗೆ ದೂರು ನೀಡಿದ್ದರು. ಅಲ್ಲದೆ ಅಶ್ರಫ್ ಈ ಹಿಂದೆ ಹಲವಾರು ಪ್ರಕಣಗಳಲ್ಲಿ ಭಾಗಿಯಾಗಿರುವುದರಿಂದ ಆತನನ್ನು ಕೂಡಲೆ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ತಿಳಿಸಲಾಗಿತ್ತು.

ಆರೋಪಿಗಳಾದ  ಅಶ್ರಫ್ ಮತ್ತು ಶೋಯೆಬ್‌ರನ್ನು ಬಂಧಿಸಿದ ಶಿರ್ವ ಪೊಲೀಸರು ಸೋಮವಾರ ಸಂಜೆ ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ದೂರುದಾರರ ವಿರುದ್ಧವೂ ಹಲವು ಪ್ರಕರಣಗಳು ಬಾಕಿ ಇದ್ದು,  ಬಡ್ಡಿ ವ್ಯವಹಾರ ನಡೆಸುತ್ತಿದ್ದಾರೆ. ಆರೋಪಿಗಳು ಮತ್ತು ದೂರುದಾರರ ನಡುವೆ ಹಲವು ವರ್ಷಗಳಿಂದ ಹಣದ ಲೇವಾದೇವಿ ನಡೆಯುತ್ತಿದೆ ಎಂದು ಆರೋಪಿ ಪರ ವಕೀಲರು ವಾದ ಮಂಡಿಸಿದ್ದರು.

ಇದನ್ನು ಮಾನ್ಯ ಮಾಡಿದ ನ್ಯಾಯಾಲಯ ಆರೊಪಿಗಳಿಗೆ ಶರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರ ವಕೀಲ ಅಸದುಲ್ಲಾ ಕಟಪಾಡಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News