ತೆಂಕನಿಡಿಯೂರು: ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಉದ್ಘಾಟನೆ
ಉಡುಪಿ, ಆ.2: ಭಾರತದ 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕಾಲೇಜು ಮಟ್ಟದ ಕಾರ್ಯಕ್ರಮ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಸಪ್ತಾಹ ಸೋಮವಾರ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಭಾರತೀಯ ಸೇನೆಯ ನಿವೃತ್ತ ಜೂನಿಯರ್ ಕಮಿಷನರ್ ಆಫೀಸರ್ ಬ್ರಗ್ರಾನ್ಸ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಅಗ್ನಿಪಥ್ ಯೋಜನೆಯ ಬಗ್ಗೆ ಮಾಹಿತಿ ನೀಡುತ್ತಾ, ನಮ್ಮ ದೇಶದ ಯುವಕರಿಗೆ ದೇಶ ಸೇವೆ ಮಾಡಲು ಇದೊಂದು ಅಪೂರ್ವ ಅವಕಾಶ.೪ ವರ್ಷಗಳ ಸೈನ್ಯ ಸೇವೆಯ ನಂತರ ಇಷ್ಟಪಟ್ಟರೆ ಅಗ್ನಿವೀರರು ನಿಗದಿತ ಪರೀಕ್ಷೆ ಉತ್ತೀರ್ಣರಾಗಿ ಖಾಯಂ ಸೈನಿಕರಾಗಿ ಸೇನೆಯಲ್ಲಿ ಸೇವೆಸಲ್ಲಿಸಬಹುದು. ಒಂದು ವೇಳೆ ಸೇವೆಯನ್ನು ಬಿಟ್ಟರೆ ಬೇರೆ ಯಾವುದೇ ಸರಕಾರಿ ಅಥವಾ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಅವರಿಗೆ ಉದ್ಯೋಗ ನೀಡುವ ವೇಳೆ ಶೇ.೧೦ರಷ್ಟು ಮೀಸಲಾತಿ ಇರುತ್ತದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಸುರೇಶ್ ರೈ ಕೆ. ಮಾತನಾಡಿ, ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಸಕ್ರೀಯರಾಗಿ ಭಾಗವಹಿಸಿ ದೇಶ ಪ್ರೇಮ ಉದ್ದೀಪನಗೊಳಿಸುವ ಕೆಲಸದಲ್ಲಿ ನಿರತರಾಗ ಬೇಕು ಎಂದು ನುಡಿದರು.
ಕಾಲೇಜು ಮಟ್ಟದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯ ಸಂಚಾಲಕ ರಾಧಾಕೃಷ್ಣ ಸ್ವಾಗತಿಸಿ, ಪ್ರಸ್ತಾವನೆಗೈದರು. ವಿದ್ಯಾರ್ಥಿಗಳಾದ ಅನುಷಾ ಪ್ರಾರ್ಥಿಸಿ, ಮನಿಷಾ ಕಾರ್ಯಕ್ರಮ ನಿರೂಪಿಸಿದರು. ಧೀರಜ್ ವಂದಿಸಿದರು.