ಕಲ್ಲುಗುಂಡಿ : ನೆರೆಹಾನಿ ಪ್ರದೇಶಕ್ಕೆ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಭೇಟಿ
ಸುಳ್ಯ: ನೆರೆ ನೀರು ನುಗ್ಗಿ ಕಲ್ಲುಗುಂಡಿ ಪ್ರದೇಶಕ್ಕೆ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಭೇಡಿ ನೀಡಿದರು. ಅವರೊಂದಿಗೆ ಪುತ್ತೂರು ಎ.ಸಿ. ಗಿರೀಶ್ ನಂದನ್, ತಹಶಿಲ್ದಾರ್ ಕು.ಅನಿತಾಲಕ್ಷ್ಮಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ ಹಾಗೂ ವಿವಿಧ ದಂಡಾಧಿಕಾರಿಗಳು ಇದ್ದರು.
ಸುಳ್ಯ , ಕಡಬ ಭಾಗದಲ್ಲಿ ಕಳೆದ 24 ಗಂಟೆಯಲ್ಲಿ 28 ಸೆ.ಮೀ.ಗಿಂತಲೂ ಜಾಸ್ತಿ ಮಳೆಯಾಗಿದ್ದು, ಹಲವು ಭಾಗಗಳಲ್ಲಿ ಹಾನಿ ಸಂಭವಿಸಿದೆ. ಬಹಳಷ್ಟು ಮನೆ, ಅಂಗಡಿಗಳು, ಸೇತುವೆ ಮತ್ತು ರಸ್ತೆಗಳಿಗೆ ಹಾನಿ ಸಂಭವಿಸಿದೆ. ಮನೆ ಹಾನಿಯಾದ ಮತ್ತು ಪಾತ್ರೆ , ಬಟ್ಟೆ ಬರೆ ಹಾನಿಯಾದವರಿಗೆ ತಕ್ಷಣ ರೂ.10,000 ಚೆಕ್ ನೀಡಲು ಜಿಲ್ಲಾಧಿಕಾರಿ ಅವರು ತಹಶೀಲ್ದಾರ್ ಅವರಿಗೆ ಸೂಚಿಸಿದ್ದಾರೆ.
ಮನೆ ದುರಸ್ತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ನಿರ್ದೇಶನದಂತೆ ಪರಿಹಾರ ವಿತರಣೆ ಮಾಡಲು ತಿಳಿಸಿದ್ದೇನೆ. ತೊಂದರೆಗೊಳಗಾದವರನ್ನು ಸಾಂತ್ವನ ಕೇಂದ್ರಕ್ಕೆ ಸ್ಥಳಾಂತರಿಸಲು ಸೂಚಿಸಲಾಗಿದೆ ಎಂದು ಹೇಳಿದರು. ಅಂಗಡಿಗಳಿಗೂ ಬಹಳಷ್ಟು ಹಾನಿಯಾಗಿ ನಷ್ಟ ಸಂಭವಿಸಿದ್ದು, ಅವರ ನಷ್ಟ ನೋಡಿಕೊಂಡು ಪರಿಹಾರಕ್ಕಾಗಿ ಸರಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದರು.
ಸಂಪಾಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಜಿ.ಕೆ. ಹಮೀದ್, ಸುಳ್ಯ ನ.ಪಂ. ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ನ.ಪಂ. ಸದಸ್ಯ ರಾಧಾಕೃಷ್ಣ ರೈ ಬೂಡು, ಅರಂತೋಡು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ತಾ.ಪಂ. ಮಾಜಿ ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾ ಮೇದಪ್ಪ, ಭಾರತಿ ಪುರುಷೋತ್ತಮ, ಬಿಜೆಪಿ ಮಂಡಲ ಸಮಿತಿ ಪ್ರ.ಕಾರ್ಯದರ್ಶಿ ಸುಬೋಧ್ ಶೆಟ್ಟಿ ಮೇನಾಲ, ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಗೀತಾಶೇಖರ್ ಉಳುವಾರು, ಸುನಿಲ್ ಕೇರ್ಪಳ, ಸಂಪಾಜೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜ ಹಾಗು ಇತರರು ಇದ್ದರು.