ದ.ಕ.ಜಿಲ್ಲೆಯಲ್ಲಿ ಆ.5ರವರೆಗೆ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಮಂಗಳೂರು, ಆ.2: ಸುಳ್ಯ, ಕಡಬ ತಾಲೂಕುಗಳನ್ನು ಹೊರತುಪಡಿಸಿ ಜಿಲ್ಲೆಯ ಇತರೆಡೆ ಮಂಗಳವಾರ ಸಾಮಾನ್ಯ ಮಳೆಯಾಗಿದೆ. ಈ ಮಧ್ಯೆ ಆ.5ರವರೆಗೆ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಹಾಗಾಗಿ ಮಳೆ ಮತ್ತಷ್ಟು ಬಿರುಸು ಪಡೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಆ.5ರವರೆಗೆ ರೆಡ್ ಅಲರ್ಟ್ ಮತ್ತು ಬಳಿಕ ಆರೆಂಜ್ ಅಲರ್ಟ್ ಇದೆ. ರೆಡ್ ಅಲರ್ಟ್ ದಿನಗಳಲ್ಲಿ ಭಾರೀ ಮಳೆಯಾಗಲಿದ್ದು, ಸಮುದ್ರದಲ್ಲಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಮಂಗಳೂರು ನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ಮಳೆಯ ವಾತಾವರಣವಿತ್ತು. ಮಧ್ಯಾಹ್ನದವರೆಗೆ ಸಾಮಾನ್ಯ ಮಳೆಯಾಗಿದೆ. ಸಂಜೆಯ ಬಳಿಕ ಮೋಡ ಕವಿದ ವಾತಾವರಣವಿತ್ತು.
ಸೋಮವಾರ ಬೆಳಗ್ಗಿನಿಂದ ಮಂಗಳವಾರ ಬೆಳಗ್ಗಿನವರೆಗೆ ಸುಬ್ರಹ್ಮಣ್ಯದಲ್ಲಿ ಅತ್ಯಧಿಕ ಅಂದರೆ 28.35 ಸೆಂ.ಮೀ. ಮಳೆಯಾಗಿದೆ. ಸಂಪಾಜೆಯಲ್ಲಿ 14 ಸೆಂ.ಮೀ. ಮಳೆಯಾಗಿದೆ ಎಂದು ಪ್ರಕಟನೆ ತಿಳಿಸಿದೆ.