ಸಂಸತ್ ಸ್ಪೀಕರ್ ತೈವಾನ್‌ ಗೆ ಭೇಟಿ ನೀಡಿದರೆ ಅಮೆರಿಕ ಭಾರೀ ಬೆಲೆ ತೆರಬೇಕು: ಚೀನಾ ಎಚ್ಚರಿಕೆ

Update: 2022-08-02 16:27 GMT

ಬೀಜಿಂಗ್, ಆ.2: ತಮ್ಮ ಏಶ್ಯಾ ಪ್ರವಾಸದ ಸಂದರ್ಭ ಅಮೆರಿಕದ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ಗೆ ಭೇಟಿ ನೀಡಿದರೆ ಅಮೆರಿಕ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಚೀನಾ ಮಂಗಳವಾರ ಎಚ್ಚರಿಕೆ ನೀಡಿದೆ. ಸೋಮವಾರ ಸಿಂಗಾಪುರಕ್ಕೆ ಆಗಮಿಸಿದ್ದ ಪೆಲೋಸಿ ಮಂಗಳವಾರ ಮಲೇಶ್ಯಾಕ್ಕೆ ತೆರಳಿದ್ದಾರೆ. 4 ಏಶ್ಯಾ ದೇಶಗಳ ಪ್ರವಾಸದ ನಡುವೆ ಅವರು ತೈವಾನ್ಗೆ ಭೇಟಿ ನೀಡಲಿದ್ದಾರೆ ಎಂಬ ವರದಿ ಈಗ ಚೀನಾದ ಕಣ್ಣುಕೆಂಪಗಾಗಿಸಿದೆ. ‌

ತೈವಾನ್ ತನ್ನ ಭೂವ್ಯಾಪ್ತಿಗೆ ಸೇರುತ್ತದೆ ಎಂದು ಪ್ರತಿಪಾದಿಸುತ್ತಿರುವ ಚೀನಾ, ಇಲ್ಲಿಗೆ ಪೆಲೋಸಿ ನೀಡುವ ಭೇಟಿ ಪ್ರಚೋದನಾ ಕೃತ್ಯ ಎಂದು ತಾನು ಭಾವಿಸುವುದಾಗಿ ಹೇಳಿದೆ. ಚೀನಾದ ಸಾರ್ವಭೌಮ ಭದ್ರತಾ ಹಿತಾಸಕ್ತಿಗಳನ್ನು ದುರ್ಬಲಗೊಳಿಸುವುದರ ಹೊಣೆಯನ್ನು ಅಮೆರಿಕ ಹೊರಬೇಕು ಮತ್ತು ಇದಕ್ಕೆ ಸೂಕ್ತ ಬೆಲೆ ಪಾವತಿಸಬೇಕಾಗುತ್ತದೆ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರೆ ಹುವಾ ಚುನ್ಯಿಂಗ್ ಬೀಜಿಂಗ್ನಲ್ಲಿ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. ತೈವಾನ್ಗೆ ಬೆಂಬಲ ಸೂಚಿಸಲು ಅಮೆರಿಕದ ಅಧಿಕಾರಿಗಳು ಹಲವು ಬಾರಿ ತೈವಾನ್ಗೆ ಭೇಟಿ ನೀಡಿದ್ದಾರೆ.

ಆದರೆ ಅಮೆರಿಕ ಆಡಳಿತದ 3ನೇ ಉನ್ನತ ಅಧಿಕಾರಿ ಪೆಲೋಸಿ ಭೇಟಿಯ ಕುರಿತ ವರದಿ ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ತೈವಾನ್ ವಿಷಯದಲ್ಲಿ ಬೆಂಕಿಯೊಂದಿಗೆ ಸರಸವಾಡಬೇಡಿ ಎಂದು ಕಳೆದ ವಾರ ಬೈಡನ್ಗೆ ಕರೆ ಮಾಡಿದ್ದ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಎಚ್ಚರಿಕೆ ನೀಡಿದ್ದರು. ಪೆಲೋಸಿಯ ಭೇಟಿ ತುಂಬಾ ಪ್ರಚೋದನಕಾರಿ, ತುಂಬಾ ಅಪಾಯಕಾರಿ ಎಂದು ಅಮೆರಿಕಕ್ಕೆ ಚೀನಾದ ರಾಯಭಾರಿ ಝಾಂಗ್ ಹುನ್ ಪ್ರತಿಕ್ರಿಯಿಸಿದ್ದಾರೆ.

ತೈವಾನ್ಗೆ ಭೇಟಿ ನೀಡುವ ಹಕ್ಕು ಸ್ಪೀಕರ್ ಗೆ ಇದೆ

ತೈವಾನ್ಗೆ ಪೆಲೋಸಿ ಭೇಟಿಗೆ ಬೈಡನ್ ಆಡಳಿತ ವಿರುದ್ಧವಾಗಿದೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಮಿತಿಯ ವಕ್ತಾರ ಜಾನ್ ಕಿರ್ಬಿ ‘ತನಗೆ ಇಷ್ಟವಾದ ಸ್ಥಳಕ್ಕೆ ಹೋಗಲು ಪೆಲೋಸಿ ಅರ್ಹರಾಗಿದ್ದಾರೆ’ ಎಂದಿದ್ದಾರೆ.

ತೈವಾನ್ಗೆ ಭೇಟಿ ನೀಡಲು ಸ್ಪೀಕರ್ಗೆ ಹಕ್ಕು ಇದೆ. ಸಂಭಾವ್ಯ ಭೇಟಿಯನ್ನು ಅನವಶ್ಯಕ ವಿವಾದವನ್ನಾಗಿಸಲು ಚೀನಾಕ್ಕೆ ಯಾವುದೇ ಕಾರಣಗಳಿಲ್ಲ ಎಂದ ಅವರು, ಚೀನಾವು ಸಂಭಾವ್ಯ ಮಿಲಿಟರಿ ಪ್ರಚೋದನೆಗೆ ಸಿದ್ಧವಾಗುತ್ತಿದೆ ಎಂಬ ಗುಪ್ತಚರ ವರದಿಯನ್ನು ಉಲ್ಲೇಖಿಸಿದರು. ಪೆಲೋಸಿ ಸೇನಾ ವಿಮಾನದಲ್ಲಿ ಪ್ರಯಾಣಿಸುತ್ತಿರುವುದರಿಂದ ನೇರ ದಾಳಿಯ ಬಗ್ಗೆ ಅಮೆರಿಕಕ್ಕೆ ಹೆದರಿಕೆಯಿಲ್ಲ. ಆದರೆ ಇದರಿಂದ ತಪ್ಪು ಲೆಕ್ಕಾಚಾರದ ಸಾಧ್ಯತೆ ಹೆಚ್ಚಬಹುದು. ಅದೇನಿದ್ದರೂ, ತೈವಾನ್ ಕುರಿತ ನಮ್ಮ ನೀತಿಯಲ್ಲಿ ಬದಲಾವಣೆಯಿಲ್ಲ ಎಂದರು. ಇದರರ್ಥ ‘ತೈವಾನ್ನ ಸ್ವ-ಆಡಳಿತ ಸರಕಾರಕ್ಕೆ ಬೆಂಬಲ. ತೈವಾನ್ ಮೇಲೆ ಚೀನಾವನ್ನು ರಾಜತಾಂತ್ರಿಕವಾಗಿ ಗುರುತಿಸುವುದು ಮತ್ತು ತೈವಾನ್ನ ಸ್ವಾತಂತ್ರ್ಯ ಘೋಷಣೆ ಅಥವಾ ಚೀನಾದಿಂದ ಬಲವಂತದ ಸ್ವಾಧೀನವನ್ನು ವಿರೋಧಿಸುವುದು’ ಎಂದು ಮೂಲಗಳು ಹೇಳಿವೆ.

ತೈವಾನ್ ಬಳಿ 4 ಯುದ್ಧನೌಕೆ ನಿಯೋಜಿಸಿದ ಅಮೆರಿಕ

ಅಮೆರಿಕದ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೋಸಿಯ ಸಂಭಾವ್ಯ ತೈವಾನ್ ಭೇಟಿ ಕಾರ್ಯಕ್ರಮಕ್ಕೆ ಚೀನಾ ತೀವ್ರ ವಿರೋಧ ಸೂಚಿಸಿರುವ ಬೆನ್ನಲ್ಲೇ, ತೈವಾನ್ನ ಪೂರ್ವ ಕರಾವಳಿಯಲ್ಲಿ ಅಮೆರಿಕ ಯುದ್ಧವಿಮಾನ ಸಹಿತ ಹಡಗು ಸೇರಿದಂತೆ 4 ಯುದ್ಧನೌಕೆಗಳನ್ನು ನಿಯೋಜಿಸಿದೆ ಎಂದು ವರದಿಯಾಗಿದೆ. ಇದೊಂದು ಮಾಮೂಲಿ ನಿಯೋಜನೆಯಾಗಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ದಕ್ಷಿಣ ಚೀನಾ ಸಮುದ್ರದಲ್ಲಿದ್ದ ಯುಎಸ್ಎಸ್ ರೊನಾಲ್ಡ್ ರೇಗನ್ ಯುದ್ಧನೌಕೆಯನ್ನು ತೈವಾನ್ ಪೂರ್ವ ಪ್ರಾಂತಕ್ಕೆ ರವಾನಿಸಲಾಗಿದೆ. ಈ ನೌಕೆ ನಿರ್ದೇಶಿತ ಕ್ರೂಸರ್ ಕ್ಷಿಪಣಿ ಹಾಗೂ ವಿಧ್ವಂಸಕ ಕ್ಷಿಪಣಿಯಿಂದ ಸಜ್ಜುಗೊಂಡಿದೆ. ಮತ್ತೊಂದು ಸಮರನೌಕೆ ಯುಎಸ್ಎಸ್ ಟ್ರಿಪೋಲಿಯನ್ನೂ ಇಲ್ಲಿ ನಿಯೋಜಿಸಲಾಗಿದೆ ಎಂದು ಅಮೆರಿಕದ ನೌಕಾ ಪಡೆ ಅಧಿಕಾರಿಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.

ಈ ಮಧ್ಯೆ, ತೈವಾನ್ ಜಲಸಂಧಿಯಲ್ಲಿ ಉಭಯ ದೇಶಗಳ ಮಿಲಿಟರಿ ಚಟುವಟಿಕೆ ತೀವ್ರಗತಿಯಲ್ಲಿ ಹೆಚ್ಚಿದೆ. ಸೂಕ್ಷ್ಮ ಸಾಗರ ಪ್ರದೇಶವನ್ನು ವಿಭಜಿಸುವ ಮಧ್ಯಂತರ ರೇಖೆಯ ಬಳಿ ಚೀನಾದ ಯುದ್ಧವಿಮಾನಗಳು ಮಂಗಳವಾರ ಹಾರಾಟ ನಡೆಸಿವೆ. ಅಲ್ಲದೆ ತನ್ನ ಹಲವು ಯುದ್ಧನೌಕೆಗಳನ್ನೂ ಈ ಅನಧಿಕೃತ ಸಾಗರ ಗಡಿ ಪ್ರದೇಶದ ಬಳಿ ಚೀನಾ ನಿಯೋಜಿಸಿದೆ.ಮಂಗಳವಾರ ಬೆಳಿಗ್ಗೆ ಚೀನಾದ ಯುದ್ಧನೌಕೆ ಮತ್ತು ಯುದ್ಧವಿಮಾನಗಳು ಮಧ್ಯಂತರ ರೇಖೆಯನ್ನು ಉಲ್ಲಂಘಿಸಿದ್ದು ಇದು ಅತ್ಯಂತ ಪ್ರಚೋದನಕಾರಿ ಕೃತ್ಯ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News