×
Ad

ತೈವಾನ್‌ಗೆ ನಮ್ಮ ಬದ್ಧತೆಯನ್ನು ತ್ಯಜಿಸುವುದಿಲ್ಲ: ನ್ಯಾನ್ಸಿ ಪೆಲೋಸಿ

Update: 2022-08-03 21:46 IST

ತೈಪೆ, ಆ.3: ತನ್ನ ನೇತೃತ್ವದ ನಿಯೋಗದ ತೈವಾನ್ ಭೇಟಿಯು ದ್ಬೀಪರಾಷ್ಟ್ರಕ್ಕೆ ನಮ್ಮ ನೆರವಿನ ಭರವಸೆಯಾಗಿದೆ ಎಂದು ಅಮೆರಿಕ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಹೇಳಿದ್ದಾರೆ. ಚೀನಾದ ತೀವ್ರ ಆಕ್ರೋಶ ಮತ್ತು ಆಕ್ಷೇಪಣೆಯ ಮಧ್ಯೆ ತೈವಾನ್‌ಗೆ ಅವರ ಒಂದು ದಿನದ ಭೇಟಿ ಕಾರ್ಯಕ್ರಮ ಅಂತ್ಯಗೊಂಡಿದ್ದು ಪೆಲೋಸಿ ತೈವಾನ್‌ನಿಂದ ತೆರಳಿದ್ದಾರೆ.

ಇಂದು ನಮ್ಮ ನಿಯೋಗವು ನಿಸ್ಸಂದಿಗ್ಧವಾಗಿ ಒಂದು ವಿಷಯವನ್ನು ಸ್ಪಷ್ಟಪಡಿಸಲು ತೈವಾನ್‌ಗೆ ಬಂದಿದೆ. ನಾವು ತೈವಾನ್‌ಗೆ ನಮ್ಮ ಬದ್ಧತೆಯನ್ನು ತ್ಯಜಿಸುವುದಿಲ್ಲ ಮತ್ತು ನಮ್ಮ ನಿರಂತರ ಸ್ನೇಹಕ್ಕಾಗಿ ಹೆಮ್ಮೆಪಡುತ್ತೇವೆ ಎಂದು ಪೆಲೋಸಿ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ಇದೇ ಸಂದರ್ಭ ಮಾತನಾಡಿದ ತೈವಾನ್‌ನ ಅಧ್ಯಕ್ಷೆ ತ್ಸಾಯ್ ಇಂಗ್-ವೆನ್ , ಒತ್ತಡಕ್ಕೆ ತೈವಾನ್ ಬಗ್ಗದು ಎಂದರು.

ಪೆಲೋಸಿ ತೈವಾನ್ ಭೇಟಿಗೆ ಸಂಬಂಧಿಸಿದ ಕೆಲವು ಪ್ರಮುಖ ಬೆಳವಣಿಗೆಗಳು ಹೀಗಿವೆ. ತೈವಾನ್ ಸುತ್ತಮುತ್ತ ಮದ್ದುಗುಂಡುಗಳ ಸಹಿತ ಸೇನಾ ಕವಾಯತು ಆರಂಭಿಸಿದ್ದು ಮುಂದಿನ ಹಂತದಲ್ಲಿ ದೀರ್ಘ ಶ್ರೇಣಿಯ ಗುಂಡು ಹಾರಾಟದ ತರಬೇತಿ ನಡೆಯಲಿದೆ ಎಂದು ಚೀನಾ ಘೋಷಿಸಿದೆ. ಕೆಲವು ಪ್ರದೇಶಗಳಲ್ಲಿ ಚೀನಾದ ಸೇನಾ ಕವಾಯತು ತೈವಾನ್ ಕಡಲ ತೀರದ ಕೇವಲ 20 ಕಿ.ಮೀನಷ್ಟು ಹತ್ತಿರದಲ್ಲಿ ನಡೆಯಲಿದೆ ಎಂದು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‌ಎ) ಹೇಳಿವೆ.

ಚೀನಾದೊಂದಿಗೆ ಘರ್ಷಣೆ ಅಥವಾ ತಪ್ಪು ಗ್ರಹಿಕೆಯ ಅಪಾಯ ಇರುವುದರಿಂದ ಸಾರ್ವಜನಿಕ ಶಾಂತತೆಯನ್ನು ಕಾಪಾಡಲು ದೃಢಸಂಕಲ್ಪ ಮಾಡಿರುವುದಾಗಿ ತೈವಾನ್ ಅಧಿಕಾರಿಗಳ ಹೇಳಿಕೆ. ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸಲಾಗುತ್ತಿದೆ ಮತ್ತು ಎಲ್ಲಾ ಸಿದ್ಧತೆಗಳನ್ನೂ ಬಲಪಡಿಸಲಾಗಿದೆ. ರಕ್ಷಣಾ ಇಲಾಖೆ ಸರಿಯಾದ ಸಮಯದಲ್ಲಿ ಸೂಕ್ತವಾಗಿ ಪ್ರತಿಕ್ರಿಯಿಸಲಿದೆ ಎಂದು ತೈವಾನ್ ರಕ್ಷಣಾ ಇಲಾಖೆ ಹೇಳಿದೆ ನೀಡಿದ್ದಾರೆ.

ಚೀನಾದ ಮಿಲಿಟರಿ ಕವಾಯತು ದ್ವೀಪರಾಷ್ಟ್ರದ ಪ್ರಾದೇಶಿಕ ಜಲವ್ಯಾಪ್ತಿಯನ್ನು ಉಲ್ಲಂಘಿಸಿದೆ. ಇದು ಅಂತರಾಷ್ಟ್ರೀಯ ವ್ಯವಸ್ಥೆಗೆ ಸವಾಲು ಹಾಕುವ ವಿಚಾರಹೀನ ಕ್ರಮವಾಗಿದೆ ಎಂದು ತೈವಾನ್ ರಕ್ಷಣಾ ಇಲಾಖೆಯ ವಕ್ತಾರ ಸುನ್ ಲಿಫಾಂಗ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. ಆರ್ಥಿಕ ಕ್ಷೇತ್ರದಲ್ಲಿ ತೈವಾನ್‌ಗೆ ಆಘಾತ ನೀಡಲು ಚೀನಾದ ಯೋಜನೆ. ತೈವಾನ್‌ನಿಂದ ಹಣ್ಣು ಮತ್ತು ಮೀನು ಆಮದಿಗೆ ನಿರ್ಬಂಧ ಜಾರಿ. ತೈವಾನ್‌ಗೆ ಚೀನಾದಿಂದ ಮರಳು ರಫ್ತಿಗೂ ನಿಷೇಧ ಹೇರಳಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News