ಭಾರತದ ಸಕಾಲಿಕ ನೆರವು ನಮಗೆ ಜೀವ ತುಂಬಿದೆ: ಶ್ರೀಲಂಕಾ
ಕೊಲಂಬೋ, ಆ.3: ದಶಕಗಳಲ್ಲೇ ಅತ್ಯಂತ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ತಮ್ಮ ದೇಶಕ್ಕೆ ಸಕಾಲದಲ್ಲಿ ಆರ್ಥಿಕ ನೆರವು ಒದಗಿಸುವ ಮೂಲಕ ಭಾರತ ಜೀವ ತುಂಬಿದೆ ಎಂದು ಶ್ರೀಲಂಕಾದ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಹೇಳಿದ್ದಾರೆ. ಬುಧವಾರ ಆರಂಭವಾದ ಸಂಸತ್ ಅಧಿವೇಶವನ್ನುದ್ದೇಶಿಸಿ ಮಾತನಾಡಿದ ವಿಕ್ರಮಸಿಂಘೆ, ಸಕಾಲದಲ್ಲಿ ನೆರವು ನೀಡಿದ್ದಕ್ಕಾಗಿ ಭಾರತ ದೇಶ ಮತ್ತು ಅದರ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಅರ್ಪಿಸುವುದಾಗಿ ಹೇಳಿದರು.
ಆರ್ಥಿಕ ಪುನಶ್ಚೇತನದ ನಮ್ಮ ಪ್ರಯತ್ನದಲ್ಲಿ ನಮ್ಮ ನಿಕಟ ನೆರೆದೇಶವಾದ ಭಾರತದ ನೆರವನ್ನು ವಿಶೇಷವಾಗಿ ಉಲ್ಲೇಖಿಸಲು ಬಯಸುತ್ತೇನೆ. ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತ ಸರಕಾರ ನಮಗೆ ಜೀವ ತುಂಬಿದೆ. ನನ್ನ ಜನರ ಪರವಾಗಿ ಮತ್ತು ವೈಯಕ್ತಿಕವಾಗಿ ನಾನು ಪ್ರಧಾನಿ ಮೋದಿ, ಭಾರತ ಸರಕಾರ ಮತ್ತು ಅಲ್ಲಿನ ಜನತೆಗೆ ನಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ವಿಕ್ರಮಸಿಂಘೆ ಹೇಳಿದರು.
ಹದಗೆಟ್ಟಿರುವ ಅರ್ಥವ್ಯವಸ್ಥೆಯನ್ನು ಸುಸ್ಥಿತಿಗೆ ತರಲು ಶ್ರೀಲಂಕಾ ದೀರ್ಘಾವಧಿಯ ಪರಿಹಾರದತ್ತ ಗಮನ ಕೇಂದ್ರೀಕರಿಸಬೇಕು. ಸಾಲ ಪುನರ್ರಚನಾ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು ಶೀಘ್ರ ಪೂರ್ಣಗೊಳ್ಳಲಿದೆ. ಆರ್ಥಿಕ ಪುನರ್ರಚನಾ ಯೋಜನೆಯನ್ನು ಶೀಘ್ರದಲ್ಲೇ ಮಂಡಿಸಲಾಗುವ ಮಧ್ಯಂತರ ಬಜೆಟ್‌ನಲ್ಲಿ ಪ್ರಸ್ತಾವಿಸಲಾಗುವುದು. ವಿದೇಶಿ ಹೂಡಿಕೆಯ ಯೋಜನೆಗಳನ್ನು ವಿರೋಧಿಸಿರುವುದು ದೇಶದ ಅರ್ಥವ್ಯವಸ್ಥೆಗೆ ಮಾರಕ ಪ್ರಹಾರ ನೀಡಿದೆ.
ಭಾರತದೊಂದಿಗಿನ ಜಂಟಿ ಯೋಜನೆಯಲ್ಲಿ ಟ್ರಿಂಕೋಮಲೀಯಲ್ಲಿ ತೈಲ ಟ್ಯಾಂಕ್ ಕಾಂಪ್ಲೆಕ್ಸ್ ಅಭಿವೃದ್ಧಿಪಡಿಸಲು ನಾವು ಪ್ರಯತ್ನಿಸಿದಾಗ, ಈ ಯೋಜನೆಯದಿಂದ ಭಾರತಕ್ಕೆ ಹೆಚ್ಚಿನ ಲಾಭವಿದೆ ಎಂದು ಆಕ್ಷೇಪ ಕೇಳಿಬಂದ ಕಾರಣ ಯೋಜನೆ ಸ್ಥಗಿತಗೊಂಡಿದೆ. ಆಗ ನಾವು ತೈಲ ಟ್ಯಾಂಕ್ ಯೋಜನೆ ಸಂಪೂರ್ಣಗೊಳಿಸಿದ್ದರೆ ಈಗ ನಮ್ಮ ದೇಶದ ಜನತೆ ತೈಲಕ್ಕಾಗಿ ಮಾರುದ್ದದ ಸರತಿ ಸಾಲಿನಲ್ಲಿ ನಿಲ್ಲುವ ಪ್ರಮೇಯ ಬರುತ್ತಿರಲಿಲ್ಲ ಎಂದು ವಿಕ್ರಮಸಿಂಘೆ ಹೇಳಿದರು.
ಸಾಲ ಪುನರ್ರಚನೆಯ ಯೋಜನೆ ಪೂರ್ಣಗೊಳಿಸಿ ಅದನ್ನು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್)ಗೆ ಸಲ್ಲಿಸಿ 4 ವರ್ಷದ ಅವಧಿಯ ನೆರವು ಪಡೆಯುವುದು ಶ್ರೀಲಂಕಾದ ಉದ್ದೇಶವಾಗಿದೆ. ಅರ್ಥವ್ಯವಸ್ಥೆಯ ಪತನ ಮತ್ತು ದೀರ್ಘಾವಧಿಯ ಪ್ರತಿಭಟನೆಯಿಂದ ಜರ್ಝರಿತಗೊಂಡಿರುವ ದೇಶಕ್ಕೆ ಸ್ಥಿರತೆ ತರುವುದು ಶ್ರೀಲಂಕಾದ ನೂತನ ಸರಕಾರಕ್ಕೆ ಎದುರಾಗಿರುವ ತಕ್ಷಣದ ಸವಾಲಾಗಿದೆ.
ಈ ಸವಾಲನ್ನು ಎದುರಿಸುವಲ್ಲಿ ಆ ದೇಶಕ್ಕೆ ಅಗತ್ಯದ ನೆರವು ಒದಗಿಸುವುದಾಗಿ ಭಾರತ ಪುನರುಚ್ಚರಿಸಿದೆ. ಈ ವರ್ಷದ ಜನವರಿಯಿಂದ ಶ್ರೀಲಂಕಾಕ್ಕೆ ಸುಮಾರು 4 ಬಿಲಿಯನ್ ಡಾಲರ್‌ನಷ್ಟು ನೆರವನ್ನು ಭಾರತ ಒದಗಿಸಿದೆ.