ದ.ಕ. ಜಿಲ್ಲೆ; ದ್ವಿಚಕ್ರದಲ್ಲಿ ಹಿಂಬದಿ ಪುರುಷ ಸವಾರರಿಗೆ ನಿರ್ಬಂಧಕ್ಕೆ ಸೂಚನೆ: ಎಡಿಜಿಪಿ ಅಲೋಕ್ ಕುಮಾರ್

Update: 2022-08-04 10:44 GMT
ಎಡಿಜಿಪಿ ಅಲೋಕ್ ಕುಮಾರ್

ಮಂಗಳೂರು, ಆ. 4: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಆ ಕಾರಣದಿಂದ ಈಗಿರುವ ರಾತ್ರಿ ಸಂಚಾರ ನಿರ್ಬಂಧವನ್ನು ಹಂತ ಹಂತವಾಗಿ ಸಡಿಲಿಸಲು ಚರ್ಚಿಸಲಾಗಿದೆ. ಇದೇ ವೇಳೆ ಹಿರಿಯ ನಾಗರಿಕರು, ಮಕ್ಕಳು ಮತ್ತು ಮಹಿಳೆಯರನ್ನು ಹೊರತು ಪಡಿಸಿ ದ್ವಿಚಕ್ರದಲ್ಲಿ ಹಿಂಬದಿ ಸವಾರರಿಗೆ ನಿರ್ಬಂಧ ಹೇರುವ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

ದ.ಕ. ಜಿಲ್ಲೆಯಲ್ಲಿನ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ನಡೆಯುತ್ತಿರುವ ತನಿಖೆ, ಬಂದೋಬಸ್ತ್ ಹಾಗೂ ಶಾಂತಿ ಸುವ್ಯವಸ್ಥೆ ಕುರಿತಂತೆ ಮಂಗಳೂರು ಕಮಿಷನರೇಟ್, ದ.ಕ. ಮತ್ತು ಉಡುಪಿ ಜಿಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.  

ದ.ಕ. ಜಿಲ್ಲೆಯಲ್ಲಿ ನಿಷೇಧಾಜ್ಞೆಯನ್ನು ಮುಂದುವರಿಸಲಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸ್ವಲ್ಪ ಸಮಯ ಇದು ಇರಲಿದೆ. ರಾತ್ರಿ ನಿರ್ಬಂಧದ ಅವಧಿಯನ್ನು ಒಂದು ಎರಡು ಅಥವಾ ಮೂರು ಗಂಟೆಗಳಿಗೆ ಹಂತ ಹಂತವಾಗಿ ಕಡಿಮೆಗೊಳಿಸಲಾಗುವ ಬಗ್ಗೆ ಚರ್ಚಿಸಲಾಗಿದೆ ಎಂದು ಎಡಿಜಿಪಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸದ್ಯ ಪರಿಸ್ಥಿತಿ ಶಾಂತವಾಗಿದೆ. ಕಳೆದ ಒಂದು ವಾರದಿಂದ ಜನರು ಶಾಂತಿಯುತವಾಗಿ ಓಡಾಡುತ್ತಿದ್ದಾರೆ. ದ.ಕ. ಜಿಲ್ಲೆಯ ಪೊಲೀಸ್ ಇಲಾಖೆ ಮತ್ತು ಕಿಡಿಗೇಡಿಗಳ ಮೇಲೆಯೂ ನಾವು ಕಣ್ಗಾವಲು ಇರಿಸಿದ್ದೇವೆ. ಅದಕ್ಕಾಗಿಯೇ ನಾನು ದ.ಕ. ಜಿಲ್ಲೆಗೆ ಭೇಟಿ ನೀಡುತ್ತಿದ್ದೇನೆ. ಈ ಮೂಲಕ ಸಮಾಜಕ್ಕೂ ಧೈರ್ಯವನ್ನು ತುಂಬಲಾಗುತ್ತಿದೆ. ಜಿಲ್ಲೆಯ ಮೂಲೆ ಮೂಲೆಗೂ ಭೇಟಿ ನೀಡುತ್ತಿದ್ದೇನೆ. ಕ್ರಿಮಿನಲ್‌ಗಳನ್ನು ಕ್ರಿಮಿನಲ್‌ಗಳನ್ನಾಗಿಯೇ ಉಪಚರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಎಡಿಜಿಪಿ ಹೇಳಿದರು.

ಇತ್ತೀಚೆಗೆ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ತನಿಖೆ ಪ್ರಗತಿಯಲ್ಲಿದ್ದು, ಅದರ ಪರಿಶೀಲನೆ ನಡೆಸಲು ಬಂದಿದ್ದೇನೆ. ತನಿಖೆ ಎಂದರೆ ಕೇವಲ ದಸ್ತಗಿರಿ ಮಾತ್ರ ಅಲ್ಲ. ಈ ಹಿಂದಿನ ಬಹಳಷ್ಟು ಘಟನೆಗಳು ಬಂಧನದ ಬಳಿಕ ಸಮರ್ಪಕವಾಗಿ ತನಿಖೆ ಆಗದ ಕಾರಣ ಜಾಮೀನು ಸಿಗುವುದು, ಪ್ರಕರಣ ಖುಲಾಸೆಗೊಳ್ಳುವುದು ನಡೆಯುತ್ತದೆ. ಹಾಗಾಗಿ 2015ರ ನಂತರದ ಮತೀಯ ಗಲಭೆ ಪ್ರಕರಣಗಳಿಗೆ ಸಂಬಂಧಿಸಿ ಆರೋಪಿಗಳು ಎಲ್ಲಿದ್ದಾರೆ, ಅವರ ಮೇಲೆ ಯಾವ ರೀತಿಯ ನಿರ್ಬಂಧಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ. 2018ರ ದೀಪಕ್ ರಾವ್ ಪ್ರಕರಣ, ಶರತ್ ಮಡಿವಾಳ, ಪಿಂಕಿ ನವಾಝ್ ಪ್ರಕರಣ, ವಿಟ್ಲದ ಕೊಲೆ ಪ್ರಕರಣಗಳು ಯಾವ ಹಂತದಲ್ಲಿದೆ? ಯಾರಿಂದಲಾದರೂ ಒತ್ತಡ ಇದೆಯೇ? ಸಾಕ್ಷಿಗಳು ಏನು ಹೇಳುತ್ತಾರೆ ಎಂಬ ಬಗ್ಗೆ, ಇಂತಹ ಯಾವುದೇ ಪ್ರಕರಣದಲ್ಲಿ ಆರೋಪಿಗಳು ಖುಲಾಸೆಗೊಂಡ ಬಳಿಕ ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡಿದ್ದಾರೆಯೇ ಈ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಮಂಗಳೂರು ಜೈಲಿಗೂ ಭೇಟಿ ನೀಡಿದ್ದೇನೆ. ಸ್ಥಳೀಯ ಜೈಲುಗಳ ಮೇಲೆಯೂ ನಾವು ನಿಗಾ ವಹಿಸಬೇಕಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ವಹಿಸಬೇಕಾಗಿದೆ. ಶಿರೂರಿನಿಂದ ತಲಪಾಡಿವರೆಗೆ ಪೊಲೀಸ್ ತೀವ್ರ ಕಣ್ಗಾವಲು ಇರಿಸಿರುವ ಜತೆಗೆ ಮುಖ್ಯಮಂತ್ರಿಯವರ ನಿರ್ದೇಶನದಂತೆ ಗಡಿ ಭಾಗಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ಕೆಲವೊಂದು ಸಂಘಟನೆಗಳ ಮೇಲೆ ನಿಗಾ ವಹಿಸಲು ಸೂಚನೆ ನೀಡಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.

ಪ್ರವೀಣ್ ನೆಟ್ಟಾರು ಪ್ರಕರಣವನ್ನು ಎನ್‌ಐಎಗೆ ಯಾವಾಗ ವಹಿಸಲಾಗುವುದು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೆಳ್ಳಾರೆಗೆ ಇಂದು ತೆರಳುತ್ತಿದ್ದು, ಅಲ್ಲಿ ಮಸೂದ್ ಹಾಗೂ ಪ್ರವೀಣ್ ನೆಟ್ಟಾರು ಪ್ರಕರಣದ ತನಿಖೆಯ ಬಗ್ಗೆ ಮಾಹಿತಿ ಪಡೆಯಲಿದ್ದೇನೆ. ಎನ್‌ಐಎ ಅಧಿಕಾರಿಗಳಿದ್ದರೆ ಅವರ ಜತೆ ಚರ್ಚಿಸಿ ಪ್ರಕರಣದ ಹಸ್ತಾಂತರ ಬಗ್ಗೆ ಚರ್ಚಿಸಲಾಗುವುದು. ಪ್ರಮುಖ ಆರೋಪಿಗಳನ್ನು ಹಿಡಿಯುವ ಕೆಲಸವನ್ನು ಕರ್ನಾಟಕ ಪೊಲೀಸರು ಮಾಡಲಿದ್ದಾರೆ ಎಂದು ಅಲೋಕ್ ಕುಮಾರ್ ಹೇಳಿದರು.

ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯ ಗಡಿ ಪ್ರದೇಶಗಳಲ್ಲಿ 12 ಚೆಕ್‌ಪೋಸ್ಟ್ ಮಂಗಳೂರು ನಗರ ವ್ಯಾಪ್ತಿಯಲ್ಲಿ 6 ಚೆಕ್ ಪೋಸ್ಟ್‌ಗಳನ್ನು ಹಾಕಲಾಗಿದೆ. ಈ ಚೆಕ್‌ಪೋಸ್ಟ್‌ಗಳು ಕನಿಷ್ಠ ಒಂದು ವರ್ಷ ಮುಂದುವರಿಯಲಿದೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದ ಬಳಿಕ ಮುಂದುವರಿಸುವ ಅಥವಾ ಹಿಂಪಡೆಯುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎಡಿಜಿಪಿ ಹೇಳಿದರು.

"ಫಾಝಿಲ್ ಪ್ರಕರಣದಲ್ಲಿ ಬಂಧಿತ ಆರೋಪಿಗಳನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಯಾಕಾಗಿ ಈ ಕೊಲೆ ಮಾಡಲಾಗಿದೆ, ಯಾರು ಪ್ರಚೋಜನೆ ನೀಡಿದ್ದಾರೆ ಎಂಬ ಬಗ್ಗೆ ಕೂಲಂಕುಷ ತನಿಖೆ ತನಿಖಾಧಿಕಾರಿ ಮಹೇಶ್ ಕುಮಾರ್ ನೇತೃತ್ವದಲ್ಲಿ ನಡೆಯಲಿದೆ. ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಈಗಾಗಲೇ ನಾಲ್ಕು ಜನರನ್ನು ಬಂಧಿಸಲಾಗಿದೆ. ಮತ್ತೆ ಕೆಲವರ ವಿಚಾರಣೆ ನಡೆಯುತ್ತಿದೆ. ಯಾವುದೇ ಅಮಾಯಕರನ್ನು ಬಂಧಿಸುವುದಿಲ್ಲ ಎಂದು ಹೇಳಿದ ಅವರು, ಯಾರು ಪಿತೂರಿ ಮಾಡಿದ್ದು, ಎಲ್ಲಿ ಮಾಡಿದ್ದು, ಯಾರು ಕೊಲೆ ಮಾಡಿದ್ದು ಎಂಬುದೂ ಗೊತ್ತಾಗಿದೆ.  ತಲೆಮರೆಸಿಕೊಂಡಿದ್ದು, ಶೀಘ್ರವೇ ಅವರನ್ನು ಬಂಧಿಸಲಿದ್ದೇವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಸಭೆಯಲ್ಲಿ ಐಜಿಪಿ ದೇವಜ್ಯೋತಿ ರೇ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ದ.ಕ. ಜಿಲ್ಲಾ ಎಸ್ಪಿ ಋಷಿಕೇಶ್ ಸೊನಾವಣೆ, ಉಡುಪಿ ಎಸ್ಪಿ ವಿಷ್ಣುವರ್ದನ್ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News