ಸುಳ್ಯ: ಕೊಲೆಯಾದ ಮಸೂದ್‌, ಪ್ರವೀಣ್ ನೆಟ್ಟಾರು ತನಿಖೆಯ ಮಾಹಿತಿ ಪಡೆದ ಅಲೋಕ್ ಕುಮಾರ್

Update: 2022-08-04 13:03 GMT

ಸುಳ್ಯ: ಕೊಲೆಯಾದ ಮಸೂದ್‌ ಹಾಗು ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ವಿಚಾರಣೆಯ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಬೆಳ್ಳಾರೆ ಪೊಲೀಸ್ ಠಾಣೆಗೆ ಭೇಟಿ ನೀಡಿ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ,‌ ಡಿವೈಎಸ್ಪಿ ಗಾನ.ಪಿ ಕುಮಾರ್, ಬೆಳ್ಳಾರೆ ಠಾಣೆ ಎಸ್.ಐ ಸುಹಾಸ್ ಅವರೊಂದಿಗೆ ತನಿಖೆಯ ಬಗ್ಗೆ ಮಾಹಿತಿ ಪಡೆದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್ “ಕೊಲೆಯಾದ ಮಸೂದ್ ಹಾಗೂ ಪ್ರವೀಣ್ ನೆಟ್ಟಾರು ಕುರಿತ ಪ್ರಕರಣದ ಪ್ರಗತಿ ಯಾವ ಹಂತದಲ್ಲಿದೆ ಎಂಬುವುದನ್ನು ಅವಲೋಕಿಸಲು ಆಗಮಿಸಿದ್ದೇನೆ. ಯಾವೆಲ್ಲಾ ಸಾಕ್ಷಿಗಳು ಸಿಕ್ಕಿವೆ, ಸಂಶಯಾಸ್ಪದ ವ್ಯಕ್ತಿಗಳ ವಿಚಾರಣೆ ಹೇಗೆ ನಡೆದಿದೆ ಒಟ್ಟು ತನಿಖೆಯ ಕುರಿತಾದ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ಮುಂದೆ ಯಾವ ರೀತಿ ತನಿಖೆ ನಡೆಸಬೇಕು ಎಂಬ ಬಗ್ಗೆಯೂ ನಿರ್ದೇಶನ ನೀಡಲಾಗಿದೆ.

ಮುಂದೆ ಇಂತಹ ಘಟನೆಗಳು ಮರುಕಳಿಸದಂತಾಗಲೂ ಸಿ.ಸಿ ಟಿವಿ ಅಳವಡಿಸುವಿಕೆ ಮುಂತಾದ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ನಿರ್ದೇಶನ ನೀಡಿದ್ದೇನೆ. ಪ್ರಕರಣವನ್ನು ಎನ್.ಐ.ಎಗೆ ನೀಡಿದ್ದರೂ ಕೂಡ ಕರ್ನಾಟಕ ಪೊಲೀಸರಾಗಿ ನಾವು ಅವರಿಗೆ ಎಲ್ಲಾ ರೀತಿಯ ಸಹಕಾರ ಕೊಡುತ್ತೇವೆ. ಎನ್.ಐ.ಎ ನಮ್ಮ ಜೊತೆಗೆ ಸಂಪರ್ಕದಲ್ಲಿದ್ದಾರೆ. ಪ್ರಕರಣದ ಕುರಿತಾದ ಮಾಹಿತಿಯನ್ನು ಅವರೊಂದಿಗೆ ಹಂಚಿಕೊಂಡಿದ್ದೇವೆ. ಬೇರೆ ಸೆಂಟ್ರಲ್ ಎಜೆನ್ಸಿಗಳ ಜೊತೆಗೂ ನಾವು ಸಂಪರ್ಕವಿಟ್ಟುಕೊಂಡಿದ್ದು ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News