×
Ad

"ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹೇಳಿಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ"

Update: 2022-08-04 20:40 IST
ಎನ್. ವಿಷ್ಣುವರ್ಧನ್ 

ಉಡುಪಿ, ಆ.4: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಮಂದಿ ಪ್ರಚೋದನಕಾರಿ ಹೇಳಿಕೆಗಳನ್ನು ಹಾಕುತ್ತಿರುವ ಕುರಿತು ಉಡುಪಿ ಜಿಲ್ಲಾ ಪೊಲೀಸ್ ಗಂಭೀರವಾಗಿ ಪರಿಗಣಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಪ್ರಚೋದನಾಕಾರಿ ಸಂದೇಶ  ಅಥವಾ ಹೇಳಿಕೆಗಳನ್ನು ಹಾಕಿದಲ್ಲಿ ಅಂತವರ ವಿರುದ್ಧ ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಫೇಸ್‌ಬುಕ್, ವಾಟ್ಸಾಪ್, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಕಾನೂನು ಸುವ್ಯವಸ್ಥೆ, ಶಾಂತಿ ಸುವ್ಯವಸ್ಥೆ, ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಹಾಗೂ ಪರಸ್ಪರ ಗುಂಪಿನ ನಡುವೆ ದ್ವೇಷ ಭಾವನೆ ಬರುವಂತಹ ಪ್ರಚೋದನಕಾರಿ ಹೇಳಿಕೆ (ಪೋಸ್ಟ್)ಗಳನ್ನು ಹಾಕುವವರ/ಫಾರ್ವರ್ಡ್ ಮಾಡುವವರ ವಿರುದ್ದವೂ ಕಾನೂನು ರೀತಿಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ವಾಟ್ಸಪ್‌ನ ಗ್ರೂಪ್ ಅಡ್ಮಿನ್‌ಗಳು, ಬಳಕೆದಾರರು ಹಾಗೂ ಸಂದೇಶಗಳನ್ನು ಫಾರ್ವರ್ಡ್ ಮಾಡುವವರು ಸೂಕ್ತ ಎಚ್ಚರಿಕೆಯನ್ನು ವಹಿಸಬೇಕು ಹಾಗೂ ವಾಟ್ಸಾಪ್ ಗ್ರೂಪ್ ಅಡ್ಮಿನ್‌ಗಳು ತಮ್ಮ ಗುಂಪಿನ ಸದಸ್ಯರಿಗೆ ಸೂಕ್ತ ತಿಳುವಳಿಕೆ ನೀಡಬೇಕು ಎಂದವರು ಹೇಳಿದ್ದಾರೆ.

ಸಂಘಟನೆ, ವ್ಯಕ್ತಿಗಳು ಸೇರಿದಂತೆ ಸಾಮಾಜಿಕ ಜಾಲ ತಾಣದಲ್ಲಿ ಸಕ್ರಿಯ ವಾಗಿರುವ  ನಾನಾ ವ್ಯಕ್ತಿಗಳು, ಗುಂಪುಗಳ ಮೇಲೆ ಕಠಿಣ ನಿಗಾ ಇರಿಸಲಾಗಿದೆ. ಆನ್‌ಲೈನ್ ಮಾಧ್ಯಮ, ವೆಬ್‌ಪೇಜ್, ಮುದ್ರಣ ಮಾಧ್ಯಮಗಳ ಮೇಲೂ ನಿಗಾ ವಹಿಸಲಾಗಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ಕೋಮುಭಾವನೆ ಸೃಷ್ಟಿಸಿ, ಜಾತಿ ಧರ್ಮಗಳ ನಡುವೆ ಸಂಘರ್ಷಕ್ಕೆ ಎಡೆ ಮಾಡಿಕೊಡುವ ಫೋಸ್ಟ್‌ಗಳ ಮೇಲೂ ನಿಗಾ ವಹಿಸಲಾಗುತ್ತಿದ್ದು, ಇಂತಹ ಪೋಸ್ಟ್‌ಗಳನ್ನು ಲೈಕ್, ಶೇರ್, ಫಾರ್ವಡ್ ಹಾಗೂ ಆಕ್ಷೇಪಾರ್ಹವಾಗಿ ಕಮೆಂಟ್ ಮಾಡುವವರ ವಿರುದ್ಧವೂ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಎಚ್ಚರಿಸಿದ್ದಾರೆ.

ಯಾರೇ ಆದರೂ ವಿವಾದಾತ್ಮಕ ಪೋಸ್ಟರ್, ಪ್ರಚೋದನಾಕಾರಿ ಹೇಳಿಕೆ ಮೂಲಕ, ಗುಂಪುಗಾರಿಕೆ, ಗಲಾಟೆ ಮಾಡಿ ಸಮಾಜದ ಶಾಂತಿ, ನೆಮ್ಮದಿಗೆ ಭಂಗ ತರುವುದು ಕಂಡು ಬಂದಲ್ಲಿ ಸಂಬಂಧಪಟ್ಟ ಪೋಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರನ್ನು ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News