ಸಿಖ್ ವಲಸಿಗರ ಟರ್ಬನ್ ತೆಗೆಸಿದ ಪ್ರಕರಣ: ತನಿಖೆಗೆ ಅಮೆರಿಕ ನಿರ್ಧಾರ

Update: 2022-08-04 16:43 GMT

ವಾಷಿಂಗ್ಟನ್, ಆ.4: ಅಮೆರಿಕ-ಮೆಕ್ಸಿಕೊ ಗಡಿಭಾಗದಲ್ಲಿ ಹಲವು ಸಿಖ್ ವಲಸಿಗರ ಟರ್ಬನ್ ತೆಗೆಸಿದ ವರದಿಯ ಬಗ್ಗೆ ತನಿಖೆ ನಡೆಸಲು ಅಮೆರಿಕದ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಬಿಬಿಸಿ ಗುರುವಾರ ವರದಿ ಮಾಡಿದೆ. ಜೂನ್‌ನಲ್ಲಿ ಈ ಆರೋಪ ವರದಿಯಾಗಿತ್ತು. ಅಮೆರಿಕ-ಮೆಕ್ಸಿಕೋ ಗಡಿಭಾಗದಲ್ಲಿ ಸುಮಾರು 50 ಸಿಖ್ ವಲಸಿಗರನ್ನು ತಡೆದ ಅಧಿಕಾರಿಗಳು ಅವರು ತಲೆಗೆ ಧರಿಸಿದ್ದ ಟರ್ಬನ್ ತೆಗೆಸಿದ್ದರು.

ಈ ಬಗ್ಗೆ ಮಾನವ ಹಕ್ಕು ಕಾರ್ಯಕರ್ತರು ದೂರು ನೀಡಿದ ಬಳಿಕ ವಿಚಾರಣೆ ಆರಂಭಿಸಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. ತಲೆಗೆ ಟರ್ಬನ್ ಧರಿಸುವುದು ಸಿಖ್ ಧರ್ಮದ ಅಗತ್ಯದ ಧಾರ್ಮಿಕ ಆಚರಣೆಯಾಗಿದೆ. ಟರ್ಬನ್ ತೆಗೆಸಿರುವುದು ಫೆಡರಲ್ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಅಲ್ಲದೆ ಕಸ್ಟಮ್ಸ್ ಮತ್ತು ಗಡಿಭದ್ರತಾ ಸಂಸ್ಥೆ(ಸಿಬಿಪಿ)ಯ ತಾರತಮ್ಯ ರಹಿತ ನಿಯಮದ ಉಲ್ಲಂಘನೆಯೂ ಆಗಿದೆ. ಸಂತ್ರಸ್ತರಿಂದ ತೆಗೆಸಲಾದ ಟರ್ಬನ್‌ಗಳನ್ನು ಅಧಿಕಾರಿಗಳು 2 ತಿಂಗಳ ಬಳಿಕ ಹಿಂದಿರುಗಿಸಿದ್ದಾರೆ ಎಂದು ಅಮೆರಿಕದ ಕಸ್ಟಮ್ಸ್ ಮತ್ತು ಗಡಿ ಭದ್ರತಾ ಆಯುಕ್ತರಿಗೆ ಆಗಸ್ಟ್ 1ರಂದು ಬರೆದಿರುವ ಪತ್ರದಲ್ಲಿ ಅಮೆರಿಕನ್ ಸಿವಿಲ್ ಲಿಬರ್ಟೀಸ್ ಯೂನಿಯನ್ ಉಲ್ಲೇಖಿಸಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಸಿಬಿಪಿಯ ಸಿಬಂದಿ ಎಲ್ಲಾ ವಲಸಿಗರ ಜತೆಯೂ ಗೌರವದಿಂದ ವರ್ತಿಸಬೇಕು ಎಂಬುದು ನಮ್ಮ ನಿರೀಕ್ಷೆಯಾಗಿದೆ ಎಂದು ಸಿಬಿಪಿ ಆಯುಕ್ತ ಕ್ರಿಸ್ ಮ್ಯಾಗ್ನಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News