ಚೀನಾದ ಸಮರಾಭ್ಯಾಸ ಬೇಜವಾಬ್ದಾರಿ ಕೃತ್ಯ : ಅಮೆರಿಕ ಎಚ್ಚರಿಕೆ

Update: 2022-08-04 17:29 GMT

ವಾಷಿಂಗ್ಟನ್, ಆ.4: ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿದ್ದಕ್ಕೆ ಪ್ರತಿಯಾಗಿ ತೈವಾನ್ ಸುತ್ತಮುತ್ತ ಚೀನಾ ನಡೆಸುತ್ತಿರುವ ಸಮರಾಭ್ಯಾಸ ಬೇಜವಾಬ್ದಾರಿ ನಡೆಯಾಗಿದ್ದು ಇದರಿಂದ ಪರಿಸ್ಥಿತಿ ನಿಯಂತ್ರಣ ತಪ್ಪುವ ಅಪಾಯವಿದೆ ಎಂದು ಅಮೆರಿಕಾ ಗುರುವಾರ ಎಚ್ಚರಿಸಿದೆ.

ಇಲ್ಲಿ ಚೀನಾ ನಡೆಸುತ್ತಿರುವುದು ಜವಾಬ್ದಾರಿಯ ನಡೆಯಲ್ಲ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾಕ್ ಸುಲಿವಾನ್ ನ್ಯಾಷನಲ್ ಪಬ್ಲಿಕ್ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಕ್ಷಿಪಣಿ ಪರೀಕ್ಷೆ, ಜೀವಂತ ಮದ್ದುಗುಂಡು, ರಾಕೆಟ್ ಪ್ರಯೋಗಿಸುವ ವ್ಯಾಯಾಮ, ಆಕಾಶದಲ್ಲಿ ಯುದ್ಧವಿಮಾನಗಳ ಭೋರ್ಗರೆತ, ಸಮುದ್ರದಲ್ಲಿ ಯುದ್ಧನೌಕೆಗಳ ಸಂಚಾರ ಇವೆಲ್ಲವನ್ನು ಒಳಗೊಂಡ ಸರಣಿ ಸಮರಾಭ್ಯಾಸ ನಡೆಯುತ್ತಿದೆ ಎಂದರೆ ಕೆಲವು ರೀತಿಯ ಘಟನೆಗಳ ಸಾಧ್ಯತೆ ನಿಚ್ಚಳವಾಗಿದೆ ಎಂದು ಸುಲಿವಾನ್ ಅಭಿಪ್ರಾಯಪಟ್ಟರು.

ತೈವಾನ್ ಜಲಸಂಧಿಯಲ್ಲಿ ಉದ್ವಿಗ್ನತೆ ಶಮನಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ ಅವರು, ಸಮುದ್ರ ಅಥವಾ ಆಗಸದಲ್ಲಿ ಪ್ರಮಾದವಶಾತ್ ಆಗಬಹುದಾದ ತಪ್ಪುಗಳನ್ನು ನಿವಾರಿಸಲು ಚೀನಾ ಸೇನೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ವಿಶ್ವಾಸವಿದೆ ಎಂದರು. ಈ ಮಧ್ಯೆ, ಪೆಲೋಸಿ ಭೇಟಿ ನೀಡಿ ತೆರಳಿದ ಬಳಿಕ ಚೀನಾದ 27 ಯುದ್ಧವಿಮಾನಗಳು ತೈವಾನ್‌ನ ವಾಯುಪ್ರದೇಶವನ್ನು ಉಲ್ಲಂಘಿಸಿ ಒಳಪ್ರವೇಶಿಸಿವೆ ಎಂದು ತೈವಾನ್‌ನ ರಕ್ಷಣಾ ಇಲಾಖೆ ಹೇಳಿದೆ.

ತೀವ್ರ ಆಕ್ಷೇಪದ ಮಧ್ಯೆಯೂ ಪೆಲೋಸಿ ತೈವಾನ್‌ಗೆ ಭೇಟಿ ನೀಡಿರುವುದರಿಂದ ಆಕ್ರೋಶಗೊಂಡಿರುವ ಚೀನಾ ಬಲಪ್ರದರ್ಶನಕ್ಕೆ ಮುಂದಾಗಿದ್ದು ತೈವಾನ್ ಸುತ್ತಮುತ್ತಲಿನ ತನ್ನ ಅತೀ ದೊಡ್ಡ ಸೇನಾ ಸಮರಾಭ್ಯಾಸವನ್ನು ಆರಂಭಿಸಿದೆ. ತೈವಾನ್ ಸುತ್ತಮುತ್ತಲಿನ ಸಮುದ್ರ ಮತ್ತು ಆಗಸ ಪ್ರದೇಶದಲ್ಲಿ ಸಜೀವ ಕ್ಷಿಪಣಿ ಮತ್ತು ಮದ್ದುಗುಂಡು ಹಾರಾಟ ತರಬೇತಿ ಸೇರಿದಂತೆ ನಡೆಯುವ ಸಮರಾಭ್ಯಾಸ ರವಿವಾರ ಬೆಳಿಗ್ಗೆ ಮುಕ್ತಾಯಗೊಳ್ಳಲಿದೆ ಎಂದು ಚೀನಾ ಸರಕಾರಿ ಸ್ವಾಮ್ಯದ ಸಿಸಿಟಿವಿ ಸುದ್ದಿಸಂಸ್ಥೆ ವ ರದಿ ಮಾಡಿದೆ.

 ಚೀನಾದ ಸಮರಾಭ್ಯಾಸ ವಿಶ್ವಸಂಸ್ಥೆ ಕಾನೂನಿನ ಉಲ್ಲಂಘನೆಯಾಗಿದ್ದು ತೈವಾನ್‌ನ ಪ್ರಾದೇಶಿಕ ಪ್ರದೇಶದ ಮೇಲಿನ ಅತಿಕ್ರಮಣವಾಗಿದೆ. ಅಲ್ಲದೆ ಮುಕ್ತ ವಾಯು ಮತ್ತು ಜಲ ಪ್ರಯಾಣಕ್ಕೆ ನೇರ ಸವಾಲಾಗಿದೆ ಎಂದು ತೈವಾನ್ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಚೀನಾ ಅತ್ಯಂತ ಜನನಿಬಿಡ ಅಂತರಾಷ್ಟ್ರೀಯ ಜಲಮಾರ್ಗ ಮತ್ತು ವಾಯುಮಾರ್ಗಗಳಲ್ಲಿ ನಡೆಸುತ್ತಿರುವ ಸಮರಾಭ್ಯಾಸವು ಬೇಜವಾಬ್ದಾರಿಯ ಮತ್ತು ನ್ಯಾಯಸಮ್ಮತವಲ್ಲದ ಕೃತ್ಯವಾಗಿದೆ ಎಂದು ತೈವಾನ್‌ನ ಆಡಳಿತಾರೂಢ ಡೆಮೊಕ್ರಾಟಿಕ್ ಪ್ರೋಗ್ರೆಸಿವ್ ಪಾರ್ಟಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News