ಮಂಗಳೂರು | ನಾಲ್ವರ ಕೊಲೆ ಆರೋಪಿ ಪ್ರವೀಣ್‌ ಬಿಡುಗಡೆಗೆ ಸರಕಾರ ಸಿದ್ಧತೆ: ಸಂತ್ರಸ್ತ ಸಂಬಂಧಿಕರಿಂದ ತೀವ್ರ ವಿರೋಧ

Update: 2022-08-05 05:14 GMT
ಪ್ರವೀಣ್‌ ಕುಮಾರ್

ಮಂಗಳೂರು, ಆ.5: ಇಪ್ಪತ್ತೆಂಟು ವರ್ಷಗಳ ಹಿಂದೆ ವಾಮಂಜೂರಿನಲ್ಲಿ ಕುಟುಂಬದ ನಾಲ್ವರನ್ನು ಕೊಲೆ(Murder)ಗೈದ ಆರೋಪದಲ್ಲಿ ಅಪರಾಧಿ ಎಂದು ಪರಿಗಣಿಸಲ್ಪಟ್ಟು ನ್ಯಾಯಾಲಯದಿಂದ ಜೀವಾವಧಿ ಮತ್ತು ಮರಣದಂಡನೆ ಶಿಕ್ಷೆಯ ತೀರ್ಪಿಗೊಳಗಾಗಿದ್ದ ಪ್ರವೀಣ್‌ ಕುಮಾರ್ ಎಂಬಾತನನ್ನು ಸ್ವಾತಂತ್ರ್ಯೋತ್ಸವ ಅಮೃತೋತ್ಸವದ ಸಂದರ್ಭ ಸನ್ನಡೆಯ ಆಧಾರದಲ್ಲಿ ಬಿಡುಗಡೆಗೆ ಸರಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ‌. ಈ ಪ್ರಸ್ತಾವಕ್ಕೆ ಸಂತ್ರಸ್ತ ಕುಟುಂಬವು ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ದ.ಕ. ಜಿಲ್ಲಾ ಎಸ್ಪಿ ಹೃಷಿಕೇಶ್ ಸೋನಾವಣೆ ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರವೀಣ್ ಕುಮಾರ್ 1994ರಲ್ಲಿ ವಾಮಂಜೂರಿನಲ್ಲಿ ತನ್ನ ಸೋದರತ್ತೆ ಸಹಿತ ಕುಟುಂಬದ ನಾಲ್ವರನ್ನು ಕೊಲೆಗೈದ ಆರೋಪದಲ್ಲಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.

ಪ್ರವೀಣ್ ಕುಮಾರ್ ಬಿಡುಗಡೆ ಮಾಡುವ ಬಗ್ಗೆ ಕುರಿತು ಸಂತ್ರಸ್ತ ಕುಟುಂಬದ ಸದಸ್ಯರ ಅಭಿಪ್ರಾಯ ಪಡೆಯಲು ಜಿಲ್ಲಾ ಎಸ್ಪಿಗೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ. ಈ ನಡುವೆ ಪ್ರವೀಣ್‌ನನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದೆಂದು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲು ಸಂತ್ರಸ್ತರ ಕುಟುಂಬಸ್ಥರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

*ಘಟನೆಯ ವಿವರ:

ಉಪ್ಪಿನಂಗಡಿ ಸಮೀಪದ ಪೆರಿಯಡ್ಕ ನಿವಾಸಿಯಾಗಿರುವ ಪ್ರವೀಣ್‌ ಕುಮಾರ್‌ 1994ರ ಫೆ.23ರ ಮಧ್ಯರಾತ್ರಿ ವಾಮಂಜೂರಿನಲ್ಲಿದ್ದ ತನ್ನ ಅತ್ತೆ (ತಂದೆಯ ತಂಗಿ) ಅಪ್ಪಿ ಶೇರಿಗಾರ್ತಿ, ಅವರ ಪುತ್ರ  ಗೋವಿಂದ, ಪುತ್ರಿ ಶಕುಂತಳಾ ಹಾಗೂ ಶಕುಂತಾಳರ ಪುತ್ರಿ ದೀಪಿಕಾಳನ್ನು ಕೊಲೆ ಮಾಡಿದ್ದ ಆರೋಪ ಎದುರಿಸುತ್ತಿದ್ದ. ಕೆಳ ಹಂತದ ನ್ಯಾಯಾಲಯದಿಂದ ಹಿಡಿದು ಸುಪ್ರೀಂಕೋರ್ಟ್‌ನಲ್ಲೂ ಪ್ರವೀಣ್‌ ಕುಮಾರ್ ಮೇಲಿನ ಆರೋಪ ಸಾಬೀತಾಗಿತ್ತು. 2003ರಲ್ಲಿ ಸುಪ್ರೀಂ ಕೋರ್ಟ್‌ ಈತನಿಗೆ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪೂ ನೀಡಿತ್ತು. ಇದನ್ನು ಪ್ರಶಿಸಿದ್ದ ಪ್ರವೀಣ್‌ ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಮನವಿ ಮಾಡಿದ್ದ. 10 ವರ್ಷಗಳ ಕಾಲ  ಅದು ವಿಲೇವಾರಿಯಾಗದೆ ಬಾಕಿ ಉಳಿದಿತ್ತು.

ಈ ಮಧ್ಯೆ ಮಾಜಿ ಪ್ರಧಾನಿ ದಿ. ರಾಜೀವ್‌ ಗಾಂಧಿ ಕೊಲೆ ಪ್ರಕರಣದ ಮೂವರು ಆರೋಪಿಗಳಿಗೆ ವಿಧಿಸಿದ್ದ ಗಲ್ಲು ಶಿಕ್ಷೆ ರದ್ದು ಆದೇಶವನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿತ್ತು. ಇದನ್ನೇ ಆಧಾರವಾಗಿಟ್ಟು ಪ್ರವೀಣ್‌  ಕುಮಾರ್ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದ. ಅದರಂತೆ ಸುಪ್ರೀಂಕೋರ್ಟ್‌ ಮರಣದಂಡನೆ ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಿತ್ತು.

ಪ್ರಸಕ್ತ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಪ್ರವೀಣ್‌ನನ್ನು ಸನ್ನಡತೆ ಆಧಾರದಲ್ಲಿ  ಬಿಡುಗಡೆ ಮಾಡುವ ಬಗ್ಗೆ ಅಭಿಪ್ರಾಯ ವರದಿ ಸಂಗ್ರಹಿಸಲು ಜಿಲ್ಲಾ ಎಸ್ಪಿ ಕಚೇರಿಗೆ ಜು.23ರಂದು ರಾಜ್ಯ ಕಾರಾಗೃಹ ಮತ್ತು ಸುಧಾರಣೆ ಇಲಾಖೆಯಿಂದ ಆದೇಶ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದಕ್ಕೆ ಸಂತ್ರಸ್ತ ಕುಟುಂಬದವರ ಪರವಾಗಿ ಗುರುಪುರದ ಸೀತಾರಾಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

''ಹಣದ ಆಸೆಗಾಗಿ ಬಾಲಕಿ ಸಹಿತ ನಾಲ್ವರನ್ನು ಅಮಾನುಷವಾಗಿ ಕೊಲೆಗೈದಿರುವ ಆತ ಜೈಲಿನಿಂದ ಹೊರ ಬಂದರೆ ಸಮಾಜಕ್ಕೆ ಅಪಾಯವಿದೆ. ಅವನು ಬಂಧಮುಕ್ತನಾಗುವುದರ ಬಗ್ಗೆ ನಮಗೆ ಆತಂಕವಿದೆ. ಆತನನ್ನು ಬಿಡುಗಡೆ ಮಾಡಬಾರದು. ಇಂತಹ ವ್ಯಕ್ತಿಯನ್ನು ಬಿಡುಗಡೆ ಮಾಡುವುದು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಅವಮಾನ'' ಎಂದು ಸೀತಾರಾಮ ಹೇಳಿದ್ದಾರೆ.

ಇದನ್ನೂ ಓದಿ: ಕಾಸರಗೋಡಿಗೆ ಆರೋಗ್ಯ ಸೌಕರ್ಯ ಆಗ್ರಹಿಸಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ 82ರ ಹರೆಯದ ಹೋರಾಟಗಾರ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News