×
Ad

ವಿಮಾ ಪಿಂಚಣಿದಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ

Update: 2022-08-05 17:01 IST

ಉಡುಪಿ, ಆ.5: ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪಿಂಚಣಿದಾರರ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಉಡುಪಿ ಎಲ್‌ಐಸಿ ವಿಭಾಗೀಯ ಕಛೇರಿಯ ಮುಂದೆ ಶುಕ್ರವಾರ ಧರಣಿ ನಡೆಸಲಾಯಿತು.

ಎಲ್ಲೈಸಿ ನಿರ್ದೇಶಕ ಮಂಡಳಿ ಒಪ್ಪಿಗೆ ಸೂಚಿಸುವಂತೆ ಕುಟುಂಬ ಪಿಂಚಣಿ ಯನ್ನು ಶೇ.15ರಿಂದ30ಕ್ಕೆ ಹೆಚ್ಚಿಸಬೇಕು. ಆರೋಗ್ಯ ವಿಮಾಯೋಜನೆ ವ್ಯಾಪ್ತಿಗೆ ಸೇರಲು ಮತ್ತೊಂದು ಅವಕಾಶ ನೀಡಬೇಕು. ಪ್ರತೀ ವೇತನ ಪರಿಷ್ಕರಣೆ ಸಂದರ್ಭದಲ್ಲಿ ಪಿಂಚಣಿ ಪರಿಷ್ಕರಣೆ ಮಾಡಬೇಕು. ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದು ಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನು ಪುನರ್ ಸ್ಥಾಪಿಸಬೇಕು. ಹಿರಿಯ ನಾಗರಿಕರಿಗೆ ರೈಲ್ವೇ ಪ್ರಯಾಣದರದಲ್ಲಿ ರಿಯಾಯಿತಿ ಯನ್ನು ನೀಡಬೇಕು ಎಂದು ಧರಣಿನಿರತರು ಒತ್ತಾಯಿಸಿದರು.

ಪಿಂಚಣಿದಾರರನ್ನು ಉದ್ದೇಶಿಸಿ ಸಂಘದ ಅಧ್ಯಕ್ಷ ಎ.ಮಧ್ವರಾಜ ಬಲ್ಲಾಳ್ ಬೇಡಿಕೆಗಳ ಬಗ್ಗೆ ವಿವರಣೆ ನೀಡಿದರು. ಪ್ರಧಾನ ಕಾರ್ಯದರ್ಶಿ ವಿಠ್ಠಲ ಮೂರ್ತಿ ಆಚಾರ್ಯ ಮನವಿಯನ್ನು ಉಡುಪಿಯ ಎಲ್ಲೈಸಿ ಹಿರಿಯ ವಿಭಾಗಾಧಿಕಾರಿ ರಾಜೇಶ್ ಮುಧೋಳ್ ಅವರಿಗೆ ಸಲ್ಲಿಸಿದರು. ಧರಣಿಯಲ್ಲಿ  ವಿಮಾ ನೌಕರರ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News