ಯುದ್ಧಗಳು ಮೇಲ್ನೋಟಕ್ಕೆ ಕಾಣಿಸುವಷ್ಟು ಸರಳವೇ?

Update: 2022-08-05 19:30 GMT

ಯುದ್ಧಗಳಿಂದ ಯಾವುದೇ ದೇಶ ಯಾವುದೇ ಕಾಲದಲ್ಲೂ ಪಾಠ ಕಲಿತುಕೊಳ್ಳಲಿಲ್ಲ. ಈಗ ರಶ್ಯ, ಉಕ್ರೇನ್ ಮೇಲೆ ನಡೆಸುತ್ತಿರುವ ಯುದ್ಧ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದಂತಿದೆ. ಇದೂ ಕೂಡ ತೈಲ ಇನ್ನಿತರ ಸಂಪನ್ಮೂಲಗಳಿಗಾಗಿ ಒಳಗೊಳಗೆ ನಡೆಯುತ್ತಿರುವ ಶೀತಲ ಸಮರವಾಗಿದೆ. ಯುದ್ಧಗಳು ಸಾರ್ವಜನಿಕರಿಗೆ ಮೇಲ್ನೋಟಕ್ಕೆ ಕಾಣಿಸುವಷ್ಟು ಸರಳವಲ್ಲ. ಯುದ್ಧಗಳ ಹಿಂದೆ ಸಾಮಾಜಿಕ, ಕಪ್ಪು-ಬಿಳುಪು, ಶ್ರೇಷ್ಠತೆ-ಕನಿಷ್ಠತೆ, ಸಂಪನ್ಮೂಲಗಳ ಕೊಳ್ಳೆ ಹೀಗೆ ಅನೇಕ ಲೆಕ್ಕಾಚಾರಗಳಿವೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಯುದ್ಧಗಳು ನಡೆದರೂ ಅದರಲ್ಲಿ ಪ್ರಾಣ ಕಳೆದುಕೊಳ್ಳುವುದು ಬಡವರ ಮಕ್ಕಳೇ.



ಇಡೀ ಭೂಮಂಡಲ ಅದೆಷ್ಟು ಸಲ ರಕ್ತಸಿಕ್ತ ಯುದ್ಧಗಳಿಂದ ತೊಯ್ದು ತೊಪ್ಪೆಯಾಗಿದೆಯೋ? ಅದೆಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೋ? ಲೆಕ್ಕ ಕೊಡುವವರು ಯಾರೂ ಇಲ್ಲ. ಪ್ರಾಣ ಕಳೆದುಕೊಂಡವರಲ್ಲಿ ಹೆಚ್ಚು ಬಡವರು ಮತ್ತು ಮಧ್ಯಮ ವರ್ಗ ಕುಟುಂಬಗಳ ಯೋಧರು. ಯುದ್ಧಗಳು ನಡೆದಿದ್ದು ನಡೆಯುತ್ತಿರುವುದು ರಾಜರು ಮತ್ತು ರಾಜಕಾರಣಿಗಳಿಗಾಗಿ. ಆಧುನಿಕ ಕಾಲದಲ್ಲಿ ನಡೆದ ಯುದ್ಧಗಳಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಒಂದಷ್ಟು ದೊರಕುತ್ತದೆ. ಇನ್ನು 20ನೇ ಶತಮಾನದಲ್ಲಿ ನಡೆದ ಎರಡು ವಿಶ್ವ ಮಹಾಯುದ್ಧಗಳ ಭೀಕರತೆಯ ಇತಿಹಾಸ ನಮ್ಮ ಕಣ್ಣುಗಳ ಮುಂದೆಯೇ ಇದೆ. ಎರಡನೇ ಮಹಾಯುದ್ಧದ ಅಂತಿಮ ದಿನಗಳಲ್ಲಿ ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಮೆರಿಕ ಒಂದು ಭೀಕರ ದಾಳಿ ನಡೆಸಿತು. ಈ ಯುದ್ಧ ನಡೆದು ಇದೇ ತಿಂಗಳಿಗೆ 77 ವರ್ಷಗಳಾಗುತ್ತವೆ. 1945ರ ಆಗಸ್ಟ್ 6 ಮತ್ತು 9ರಂದು ಜಪಾನಿನ ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಮೆರಿಕ ಎರಡು ಪರಮಾಣು ಬಾಂಬ್‌ಗಳನ್ನು ಸ್ಫೋಟಿಸಿತು. ಈ ಎರಡು ಸ್ಫೋಟಗಳಿಂದ 1,40,000 ಮತ್ತು 74,000 ಜನರು ಸಾವನ್ನಪ್ಪಿದರು ಎನ್ನಲಾಗಿದೆ. ಇವರಲ್ಲಿ ಹೆಚ್ಚಿನವರು ನಾಗರಿಕರು. ಎರಡನೇ ವಿಶ್ವ ಮಹಾಯುದ್ಧದ ಅಂತಿಮ ವರ್ಷದಲ್ಲಿ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು (ಬ್ರಿಟನ್, ರಶ್ಯ, ಚೀನಾ ಮತ್ತು ಫ್ರಾನ್ಸ್) ಜಪಾನ್ ಮೇಲೆ ದಾಳಿ ಮಾಡಲು ಸಿದ್ಧ ಮಾಡಿಕೊಂಡಿದ್ದವು. ಇದಕ್ಕೆ ಮುಂಚೆ ಜಪಾನ್‌ನ 64 ನಗರಗಳ ಮೇಲೆ ಸಾಂಪ್ರದಾಯಿಕ ಮತ್ತು ಫೈರ್ ಬಾಂಬ್ ದಾಳಿಯನ್ನು ನಡೆಸಿ ಧ್ವಂಸ ಮಾಡಲಾಗಿತ್ತು.

ಜರ್ಮನಿ 1945ರ ಮೇ 8ರಂದು ಮಿತ್ರ ರಾಷ್ಟ್ರಗಳಿಗೆ ಶರಣಾದಾಗ ಯುದ್ಧವು ಕೊನೆಗೊಂಡಿತು. ನಂತರ ಮಿತ್ರರಾಷ್ಟ್ರಗಳ ಪಡೆಗಳು ತಮ್ಮ ಸಂಪೂರ್ಣ ಗಮನವನ್ನು ಪೆಸಿಫಿಕ್ ಯುದ್ಧದ ಕಡೆಗೆ ತಿರುಗಿಸಿದವು. ಏಶ್ಯ-ಪೆಸಿಫಿಕ್ ಮಹಾಸಾಗರ, ಹಿಂದೂ ಮಹಾಸಾಗರ ಮತ್ತು ಓಷಿಯಾನಾ ವಲಯ ಎರಡನೇ ಮಹಾಯುದ್ಧದ ರಣರಂಗವಾಗಿತ್ತು. ಜುಲೈ 1945ರ ಹೊತ್ತಿಗೆ ಮಿತ್ರರಾಷ್ಟ್ರಗಳು ಮ್ಯಾನ್ಹ್ಯಾಟನ್ ಯೋಜನೆಯಲ್ಲಿ ಎರಡು ರೀತಿಯ ಪರಮಾಣು ಬಾಂಬ್‌ಗಳನ್ನು ತಯಾರಿಸಿದ್ದವು. ಒಂದು, ‘ಫ್ಯಾಟ್ ಮ್ಯಾನ್’, ಪ್ಲುಟೋನಿಯಂ ಇಂಪ್ಲೋಷನ್ ಮಾದರಿಯ ಪರಮಾಣು ಶಸ್ತ್ರಾಸ್ತ್ರ; ಎರಡು, ‘ಲಿಟಲ್ ಬಾಯ್’ ಇದು ಸಮೃದ್ಧ ಯುರೇನಿಯಂ ಗನ್-ರೀತಿಯ ವಿದಳನ ಆಯುಧ. ಯು.ಎಸ್. ಆರ್ಮಿ ಏರ್‌ಫೋರ್ಸ್‌ನ 509ನೇ ಕಾಂಪೋಸಿಟ್ ಗ್ರೂಪ್‌ಗೆ ಬೋಯಿಂಗ್ ಬಿ-29 ಸೂಪರ್ ಫೋರ್ಟ್ರೆಸನ್‌ನ ವಿಶೇಷ ಸಿಲ್ವರ್ ಪ್ಲೇಟ್ ಆವೃತ್ತಿಯೊಂದಿಗೆ ತರಬೇತಿ ನೀಡಿ ಮರಿಯಾನಾ ದ್ವೀಪಗಳಲ್ಲಿನ ಟಿನಿಯನ್‌ನಲ್ಲಿ ಸಜ್ಜುಗೊಳಿಸಲಾಯಿತು. 1945ರ ಜುಲೈ 26ರಂದು ಮಿತ್ರರಾಷ್ಟ್ರಗಳು ಸಾಮ್ರಾಜ್ಯಶಾಹಿ ಜಪಾನಿನ ಪಡೆಗಳು ಬೇಷರತ್ತಾಗಿ ಶರಣಾಗಬೇಕು, ಇಲ್ಲದಿದ್ದಲ್ಲಿ ವಿನಾಶಗೊಳ್ಳಲಿವೆ ಎಂದು ಎಚ್ಚರಿಸಿದವು. ಕ್ವಿಬೆಕ್ ಒಪ್ಪಂದದ ಪ್ರಕಾರ, ಬಾಂಬ್ ಸ್ಫೋಟಕ್ಕೆ ಯುನೈಟೆಡ್ ಕಿಂಗ್‌ಡಮ್‌ನ ಒಪ್ಪಿಗೆಯನ್ನು ಪಡೆಯಲಾಯಿತು ಮತ್ತು ಹಿರೋಶಿಮಾ, ಕೊಕುರಾ, ನಿಗಾಟಾ ಮತ್ತು ನಾಗಸಾಕಿ ನಗರಗಳ ಮೇಲೆ ಬಾಂಬ್‌ಗಳನ್ನು ಬಳಸಲು ಯು.ಎಸ್. ಆರ್ಮಿಯ ಹಂಗಾಮಿ ಮುಖ್ಯಸ್ಥ ಜನರಲ್ ಥಾಮಸ್ ಹ್ಯಾಂಡಿ ಜುಲೈ 25ರಂದು ಆದೇಶವನ್ನು ಹೊರಡಿಸಿದರು. ಮುಂದಿನ ನಾಲ್ಕು ತಿಂಗಳುಗಳಲ್ಲಿ ಪರಮಾಣು ಬಾಂಬ್ ದಾಳಿ ಮಾಡಲು ಯೋಜನೆಗಳನ್ನು ಮಾಡಿಕೊಳ್ಳಲಾಯಿತು. ಎರಡು ನಗರಗಳ ಮೇಲೆ ದಾಳಿ ಮಾಡಿದಾಗ ಸುಮಾರು ಅರ್ಧದಷ್ಟು ಜನರು ಮೊದಲ ದಿನವೇ ಪ್ರಾಣ ಕಳೆದುಕೊಂಡರು.

ಮುಂದಿನ ದಿನಗಳಲ್ಲಿ ಸಾವಿರಾರು ಜನರು ಸುಟ್ಟಗಾಯಗಳಿಂದ, ಪರಮಾಣು ವಿಕಿರಣ ಅಸ್ವಸ್ಥತೆ ಮತ್ತು ಗಾಯಗಳಿಂದ ನರಳಿ ನರಳಿ ಸಾಯುತ್ತಲೇ ಇದ್ದರು. ಇದರ ಜೊತೆಗೆ ಅಂದಿನ ಜಪಾನ್ ಬಡರಾಷ್ಟ್ರವಾಗಿದ್ದು ಜನರು ಅನಾರೋಗ್ಯ ಮತ್ತು ಅಪೌಷ್ಟಿಕತೆಯಿಂದ ನರಳುತ್ತಿದ್ದರು. ಮಿತ್ರ ರಾಷ್ಟ್ರಗಳು ನಾಗಸಾಕಿಯ ಮೇಲೆ ದಾಳಿ ನಡೆಸಿದ ಆರು ದಿನಗಳ ನಂತರ ಆಗಸ್ಟ್ 15ರಂದು ಜಪಾನ್ ಶರಣಾಯಿತು. ಜಪಾನ್ ಸೆಪ್ಟಂಬರ್ 2ರಂದು ಶರಣಾಗತಿ ಪತ್ರಕ್ಕೆ ಸಹಿ ಹಾಕಿದ ಮೇಲೆ ಯುದ್ಧ ಕೊನೆಗೊಂಡಿತು. ವಿಶ್ವ ಇತಿಹಾಸ ಮತ್ತು ಜನಪ್ರಿಯ ಸಂಸ್ಕೃತಿಯ ಸಾಮಾಜಿಕ ಮತ್ತು ರಾಜಕೀಯ ಗುಣಲಕ್ಷಣಗಳ ಮೇಲೆ ಬಾಂಬ್ ದಾಳಿಗಳ ಪರಿಣಾಮಗಳನ್ನು ತಜ್ಞರು ಮತ್ತು ಇತಿಹಾಸಕಾರರು ವ್ಯಾಪಕವಾಗಿ ಅಧ್ಯಯನ ಮಾಡತೊಡಗಿದರು. ಬಾಂಬ್ ದಾಳಿಗಳಿಗೆ ನೈತಿಕತೆ ಮತ್ತು ಕಾನೂನು ಸಮರ್ಥನೆಯ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಲೇ ಇವೆ. ಕನಿಷ್ಠ ಸಾವು-ನೋವುಗಳೊಂದಿಗೆ ಯುದ್ಧಗಳನ್ನು ತ್ವರಿತವಾಗಿ ಕೊನೆಗೊಳಿಸಲು ಪರಮಾಣು ಬಾಂಬ್ ದಾಳಿಗಳು ಅಗತ್ಯವೆಂದು ಕೆಲವರು ವಾದಿಸುತ್ತಾರೆ. ಇಷ್ಟಕ್ಕೂ ಮಿತ್ರ ರಾಷ್ಟ್ರಗಳಾದ ಅಮೆರಿಕ, ಜರ್ಮನಿ, ರಶ್ಯ ಮತ್ತು ಚೀನಾ ದೇಶಗಳು ಜಪಾನ್ ಮೇಲೆ ಬಾಂಬುಗಳನ್ನು ಸ್ಫೋಟಿಸಲು ಕಾರಣ ಏನು ಎಂಬುದಕ್ಕೆ ಉತ್ತರವನ್ನು ಕಂಡುಕೊಳ್ಳಲು ಸ್ವಲ್ಪಹಿಂದಕ್ಕೆ ಹೋಗಬೇಕಾಗುತ್ತದೆ.

ಇಂಪೀರಿಯಲ್ ಜಪಾನ್‌ನ ನೌಕಾಪಡೆ 1941ರ ಡಿಸೆಂಬರ್ 7ರಂದು ಬೆಳಗ್ಗೆ ಅಮೆರಿಕದ ಹವಾಯಿಯ ಹೊನೊಲುಲು ‘ಪರ್ಲ್‌ ಹಾರ್ಬರ್’ ನೌಕಾನೆಲೆಯ ಮೇಲೆ ಹಠಾತ್ತಾಗಿ ಮಿಲಿಟರಿ ದಾಳಿ ನಡೆಸಿತು. ಆಗ ಅಮೆರಿಕ ಯಾವುದೇ ದೇಶಗಳ ಪರವಾಗಿರದೆ ತಟಸ್ಥವಾಗಿದ್ದು ಮರುದಿನದಿಂದಲೇ ಅಮೆರಿಕ ಎರಡನೇ ಮಹಾಯುದ್ಧಕ್ಕೆ ಪ್ರವೇಶಿಸುವಂತಾಯಿತು. ಜಪಾನ್ ಈ ದಾಳಿಯನ್ನು ಹವಾಯಿ ಕಾರ್ಯಾಚರಣೆ ‘ಎ-1’ ಮತ್ತು ‘ಆಪರೇಶನ್ ಝಡ್’ ಎಂದು ಕರೆದು ಇದು ಮುಂಜಾಗ್ರತಾ ಕ್ರಮ ಎಂದಿತು. ಯು.ಎಸ್. ಪೆಸಿಫಿಕ್ ಫ್ಲೀಟ್ ಯು.ಕೆ., ನೆದರ್‌ಲ್ಯಾಂಡ್ ಮತ್ತು ಯು.ಎಸ್. ಸಾಗರೋತ್ತರ ಪ್ರದೇಶಗಳ ವಿರುದ್ಧ ಆಗ್ನೇಯ ಏಶ್ಯದಲ್ಲಿ ತನ್ನ ಯೋಜಿತ ಮಿಲಿಟರಿ ಕ್ರಮಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ತಡೆಯುವುದು ತನ್ನ ಉದ್ದೇಶ ಎಂಬುದಾಗಿ ಜಪಾನ್ ಹೇಳಿಕೆ ನೀಡಿತು. ಏಳು ತಾಸುಗಳ ಅವಧಿಯಲ್ಲಿ ಅಮೆರಿಕ ವಶದಲ್ಲಿದ್ದ ಪಿಲಿಫೀನ್ಸ್, ಗುವಾಮ್ ಮತ್ತು ವೇಕ್ ಐಲ್ಯಾಂಡ್-ವಲಯ, ಸಿಂಗಾಪುರ ಮತ್ತು ಹಾಂಗ್‌ಕಾಂಗ್‌ಗಳಲ್ಲಿನ ಬ್ರಿಟಿಷ್ ಸಾಮ್ರಾಜ್ಯದ ಮೇಲೆ ಜಪಾನಿಯರು ಸಂಘಟಿತ ದಾಳಿಗಳನ್ನು ನಡೆಸಿದರು. ಹವಾಯಿಯನ್ ಪರ್ಲ್‌ ಹಾರ್ಬರ್ ಮೇಲೆ (ಬೆಳಗ್ಗೆ 7.48ಕ್ಕೆ) 353 ಇಂಪೀರಿಯಲ್ ಜಪಾನ್‌ನ ವಿಮಾನಗಳು (ಫೈಟರ್‌ಗಳು, ಲೆವೆಲ್ ಮತ್ತು ಡೈವ್ ಬಾಂಬರುಗಳು) ಎರಡು ಅಲೆಗಳಲ್ಲಿ ದಾಳಿ ನಡೆಸಿದವು.

ಇವುಗಳನ್ನು ಆರು ವಿಮಾನವಾಹಕ ನೌಕೆಗಳಿಂದ ಉಡಾವಣೆ ಮಾಡಲಾಯಿತು. ಯು.ಎಸ್. ನೌಕಾಪಡೆಯ ಎಂಟು ಯುದ್ಧನೌಕೆಗಳಲ್ಲಿ ನಾಲ್ಕು ನೌಕೆಗಳು ನೀರಿನಲ್ಲಿ ಮುಳುಗಿಹೋಗಿ, ಉಳಿದವು ಹಾನಿಗೀಡಾದವು. ಇದರ ಜೊತೆಗೆ ಮೂರು ಕ್ರೂಸರ್‌ಗಳು, ಮೂರು ವಿಧ್ವಂಸಕ ನೌಕೆಗಳು ಮತ್ತು ಒಂದು ವಿಮಾನ-ವಿರೋಧಿ ತರಬೇತಿ ಹಡಗು ಮತ್ತು ಒಂದು ಮ್ಯೆನ್‌ಲೇಯರ್ ಮುಳುಗಿಹೋಗಿದ್ದವು. 180ಕ್ಕೂ ಹೆಚ್ಚು ಯು.ಎಸ್. ವಿಮಾನಗಳು ನಾಶವಾದವು. ಒಟ್ಟು 2,403 ಅಮೆರಿಕನ್ನರು ಪ್ರಾಣ ಕಳೆದುಕೊಂಡು 1,178 ಜನರು ಗಾಯಗೊಂಡರು. ಪವರ್ ಸ್ಟೇಷನ್, ಡ್ರೈಡಾಕ್ ಶಿಪ್‌ಯಾರ್ಡ್, ನಿರ್ವಹಣೆ, ಇಂಧನ ಮತ್ತು ಟಾರ್ಪಿಡೋ ಶೇಖರಣಾ ಸೌಲಭ್ಯಗಳು ಹಾಗೂ ಜಲಾಂತರ್ಗಾಮಿ ಪಿಯರ್‌ಗಳು ಮತ್ತು ಪ್ರಧಾನ ಕಚೇರಿ ಕಟ್ಟಡ(ಗುಪ್ತಚರ ವಿಭಾಗದ ಕಚೇರಿ)ದಂತಹ ಪ್ರಮುಖ ಮೂಲ ಸ್ಥಾಪನೆಗಳ ಮೇಲೆ ದಾಳಿ ನಡೆಸಲಾಗಲಿಲ್ಲ. ಜಪಾನ್ ಕಡೆ 29 ವಿಮಾನಗಳು ಮತ್ತು ಐದು ಮಿಡ್ಜೆಟ್ ಜಲಾಂತರ್ಗಾಮಿ ನೌಕೆಗಳು ಕಳೆದುಹೋಗಿ 64 ಸೈನಿಕರು ಕೊಲ್ಲಲ್ಪಟ್ಟರು. ಜಲಾಂತರ್ಗಾಮಿ ನೌಕೆಯೊಂದರ ಕಮಾಂಡರ್ ಆಫೀಸರ್ ಕಜುವೊ ಸಕಮಿಕಿಯನ್ನು ಸೆರೆಹಿಡಿಯಲಾಯಿತು. ಆ ದಿನದ ಕೊನೆಯಲ್ಲಿ (ಡಿಸೆಂಬರ್ 8, 1941) ಟೋಕಿಯೊದಲ್ಲಿ ಜಪಾನ್, ಯು.ಎಸ್. ಮತ್ತು ಬ್ರಿಟಿಷ್ ಸಾಮ್ರಾಜ್ಯದ ಮೇಲೆ ಯುದ್ಧವನ್ನು ಘೋಷಿಸಿತು. ತಮ್ಮ ಭೂಪ್ರದೇಶದ ಮೇಲೆ ದಾಳಿ ನಡೆದಿದೆ ಎಂದು ತಿಳಿದ ಕೂಡಲೇ ಬ್ರಿಟಿಷ್ ಸರಕಾರವು ಜಪಾನಿನ ಮೇಲೆ ಯುದ್ಧವನ್ನು ಘೋಷಿಸಿತು.

ಯು.ಎಸ್. ಕೂಡ ಜಪಾನ್ ಮೇಲೆ ಯುದ್ಧವನ್ನು ಘೋಷಿಸಿತು. ಡಿಸೆಂಬರ್ 11 ರಂದು ಜಪಾನ್, ಜರ್ಮನಿ ಮತ್ತು ಇಟಲಿಗಳೊಂದಿಗೆ ತ್ರಿಪಕ್ಷೀಯ ಒಪ್ಪಂದದ ಅಡಿಯಲ್ಲಿ ಹಾಗೆ ಮಾಡಲು ಅವರಿಗೆ ಯಾವುದೇ ಔಪಚಾರಿಕ ಬಾಧ್ಯತೆ ಇಲ್ಲದಿದ್ದರೂ ಜರ್ಮನಿ ಮತ್ತು ಇಟಲಿಗಳು ಯು.ಎಸ್. ಮೇಲೆ ಯುದ್ಧವನ್ನು ಘೋಷಿಸಿದವು. ಯು.ಎಸ್., ಜರ್ಮನಿ ಮತ್ತು ಇಟಲಿಯ ವಿರುದ್ಧದ ಯುದ್ಧದ ಘೋಷಣೆಯೊಂದಿಗೆ ಪ್ರತಿಕ್ರಿಯಿಸಿತು. ಜಪಾನಿನ ಅಘೋಷಿತ ಮಿಲಿಟರಿ ಕ್ರಮಕ್ಕೆ ಹಲವಾರು ಚಾರಿತ್ರಿಕ ಪೂರ್ವನಿದರ್ಶನಗಳಿದ್ದವು. ಆದರೆ ಯಾವುದೇ ಔಪಚಾರಿಕ ಎಚ್ಚರಿಕೆಯ ಕೊರತೆ (1907ರ ಹೇಗ್ ಒಪ್ಪಂದದ ಭಾಗ 3ರ ಪ್ರಕಾರ ಅಗತ್ಯವಾಗಿತ್ತು) ವಿಶೇಷವಾಗಿ ಶಾಂತಿ ಮಾತುಕತೆಗಳು ಇನ್ನೂ ನಡೆಯುತ್ತಿರುವಾಗ ಅಮೆರಿಕ ಅಧ್ಯಕ್ಷ ಡಿ.ರೂಸ್ವೆಲ್ಟ್ ಡಿಸೆಂಬರ್ 7, 1941ರಂದು ‘ಅಪಖ್ಯಾತಿಯಲ್ಲಿ ಬದುಕುವ ದಿನಾಂಕ’ ಎಂದು ಘೋಷಿಸಿದ್ದರು. ಇಷ್ಟಕ್ಕೂ ಜಪಾನ್ ದೇಶ ಅಮೆರಿಕ ಮೇಲೆ ಹಠಾತ್ ದಾಳಿ ಮಾಡಲು ಕಾರಣ ಏನು? ಎಂಬುದನ್ನು ಕೆದಕುತ್ತಾಹೋದರೆ, ಜಪಾನ್ 20ನೇ ಶತಮಾನದುದ್ದಕ್ಕೂ ತನ್ನ ಆರ್ಥಿಕತೆಯನ್ನು ಆಧುನೀಕರಣಗೊಳಿಸಲು ಪ್ರಯತ್ನಿಸುತ್ತಿತ್ತು ಮತ್ತು ಇಂದಿನ ಚೀನಾದಂತೆ ತನ್ನದೇ ಆದ ಸಾಮ್ರಾಜ್ಯವನ್ನು ನಿರ್ಮಿಸಿಕೊಳ್ಳಲು ಬಯಸಿತ್ತು. ಆದಾಗ್ಯೂ, ಜಪಾನ್‌ಗೆ ಅದನ್ನು ಸಾಕಾರಗೊಳಿಸಲು ನೈಸರ್ಗಿಕ ಸಂಪನ್ಮೂಲಗಳ ಕೊರತೆಯಿತ್ತು. ಜಪಾನ್‌ನಲ್ಲಿ ಉತ್ಪಾದನೆಯಾಗುತ್ತಿದ್ದ ಕೇವಲ ಶೇ. 6 ತೈಲವನ್ನು ಬಿಟ್ಟರೆ ಉಳಿದೆಲ್ಲವನ್ನೂ ಆಮದು ಮಾಡಿಕೊಳ್ಳುತ್ತಿತ್ತು. ಮಂಚೂರಿಯ ಪ್ರದೇಶವನ್ನು (ಈಶಾನ್ಯ ಚೀನಾ) ವಶಪಡಿಸಿಕೊಂಡ ನಂತರ ಜಪಾನ್ 1937ರಲ್ಲಿ ಚೀನಾದೊಂದಿಗೆ ಪೂರ್ಣ ಪ್ರಮಾಣದ ಯುದ್ಧದೊಂದಿಗೆ ತೊಡಗಿಕೊಳ್ಳಬೇಕಾಯಿತು. ಫಲಿತಾಂಶ ಅದಕ್ಕೆ ಬೇಕಾದ ಸಂಪನ್ಮೂಲಗಳನ್ನು ಬೇರೆ ಕಡೆ ಹುಡುಕಬೇಕಾಯಿತು.

ಅದೇ ಕಾಲಕ್ಕೆ ಏತನ್ಮಧ್ಯೆ ಯು.ಎಸ್.ಎ. ತನ್ನ ಪ್ರತ್ಯೇಕತಾವಾದದಿಂದ ನಿಧಾನವಾಗಿ ಎಚ್ಚರಗೊಳ್ಳುತ್ತಿತ್ತು. 1941ರಲ್ಲಿ ಜಪಾನ್, ಫ್ರೆಂಚ್ ಇಂಡೋಚೀನಾವನ್ನು ವಶಪಡಿಸಿಕೊಂಡಾಗ ಅಮೆರಿಕ ತನ್ನ ರಾಜ್ಯಗಳಲ್ಲಿನ ಜಪಾನಿನ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಪ್ರತೀಕಾರ ತೀರಿಸಿಕೊಂಡಿತು. ಜಪಾನ್ ತೈಲ ಖರೀದಿಸುವುದನ್ನು ಅಮೆರಿಕ ತಡೆಹಿಡಿಯಿತು. ಜಪಾನ್ ತನ್ನ ತೈಲ ಸರಬರಾಜಿನಲ್ಲಿ ಶೇ. 94ರಷ್ಟು ಭಾಗವನ್ನು ಕಳೆದುಕೊಂಡು ಯು.ಎಸ್. ಬೇಡಿಕೆಗಳಿಗೆ ಮಣಿಯಲು ಇಷ್ಟವಿಲ್ಲದಿದ್ದ ಕಾರಣ ಬಲವಂತದಿಂದ ಅಗತ್ಯವಿದ್ದ ತೈಲವನ್ನು ಪಡೆದುಕೊಳ್ಳಲು ಯೋಜಿಸಿತು. ಆ ಕಾಲಕ್ಕೆ ಮಧ್ಯ ಏಶ್ಯ ದೇಶಗಳಲ್ಲಿ ತೈಲ ನಿಕ್ಷೇಪಗಳನ್ನು ಇನ್ನೂ ಕಂಡಿಹಿಡಿದಿರಲಿಲ್ಲ. ದಕ್ಷಿಣಕ್ಕೆ ಬ್ರಿಟಿಷ್ ಮಲಯ ಮತ್ತು ಡಚ್ ಈಸ್ಟ್ ಇಂಡೀಸ್ ಮೇಲೆ ದಾಳಿ ಮಾಡುವುದು ಖಂಡಿತವಾಗಿಯೂ ಅಮೆರಿಕದ ಸಶಸ್ತ್ರ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ ಎಂಬುದಾಗಿ ಜಪಾನ್ ತಿಳಿದುಕೊಂಡಿತ್ತು. ಈ ಪ್ರತಿಕ್ರಿಯೆಯನ್ನು ಮೊಟಕುಗೊಳಿಸಲು ಪರ್ಲ್‌ ಹಾರ್ಬರ್ ಮೇಲೆ ಜಪಾನ್ ದಾಳಿ ಮಾಡಲು ನಿರ್ಧರಿಸಿತು. ಆದರೆ ಅಮೆರಿಕ ತನ್ನ ಜೊತೆಗೆ ಶಾಂತಿ ಮಾತುಕತೆ ನಡೆಸುತ್ತದೆ ಎಂದು ಆಶಿಸಿತ್ತು. ಒಟ್ಟಿನಲ್ಲಿ ಜಪಾನ್, ಪರ್ಲ್‌ ಹಾರ್ಬರ್ ಮೇಲೆ ನಡೆಸಿದ ದಾಳಿ ತೈಲದ ಒಂದು ದೊಡ್ಡ ಜೂಜಾಟವಾಗಿತ್ತು. ಆದರೆ ಅದು ಯಾವುದೇ ಫಲ ನೀಡಲಿಲ್ಲ.

ಪೆಸಿಫಿಕ್ ಮತ್ತು ಆಗ್ನೇಯ ಏಶ್ಯದಲ್ಲಿ ಜಪಾನ್ ತನ್ನ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ದಾಳಿ ಮಾಡಿದರೂ ಯು.ಎಸ್. ದಿಢೀರನೆ ಪ್ರತಿಕ್ರಿಯಿಸಲಿಲ್ಲ. ಪ್ರತ್ಯೇಕತಾವಾದದಲ್ಲಿ ಮರಳುವ ಬದಲು ಯು.ಎಸ್. ಸಂಪೂರ್ಣವಾಗಿ ಒಳಗೊಳಗೆ ಯುದ್ಧಕ್ಕೆ ಸಜ್ಜಾಗಿತ್ತು. ಕೊನೆಗೆ ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ಮೇಲೆ 1945ರ ಆಗಸ್ಟ್ 6 ಮತ್ತು 9ರಂದು ಪರಮಾಣು ಬಾಂಬುಗಳನ್ನು ಸ್ಫೋಟಿಸಿ ಮಾನವ ಕುಲದ ಮೇಲೆ ದೊಡ್ಡ ಅನಾಹುತವನ್ನು ಸೃಷ್ಟಿ ಮಾಡಿತ್ತು. ಆದರೂ ಯುದ್ಧಗಳಿಂದ ಯಾವುದೇ ದೇಶ ಯಾವುದೇ ಕಾಲದಲ್ಲೂ ಪಾಠ ಕಲಿತುಕೊಳ್ಳಲಿಲ್ಲ. ಈಗ ರಶ್ಯ, ಉಕ್ರೇನ್ ಮೇಲೆ ನಡೆಸುತ್ತಿರುವ ಯುದ್ಧ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದಂತಿದೆ. ಇದೂ ಕೂಡ ತೈಲ ಇನ್ನಿತರ ಸಂಪನ್ಮೂಲಗಳಿಗಾಗಿ ಒಳಗೊಳಗೆ ನಡೆಯುತ್ತಿರುವ ಶೀತಲ ಸಮರವಾಗಿದೆ. ಯುದ್ಧಗಳು ಸಾರ್ವಜನಿಕರಿಗೆ ಮೇಲ್ನೋಟಕ್ಕೆ ಕಾಣಿಸುವಷ್ಟು ಸರಳವಲ್ಲ. ಯುದ್ಧಗಳ ಹಿಂದೆ ಸಾಮಾಜಿಕ, ಕಪ್ಪು ಬಿಳುಪು, ಶ್ರೇಷ್ಠತೆ ಕನಿಷ್ಠತೆ, ಸಂಪನ್ಮೂಲಗಳ ಕೊಳ್ಳೆ ಹೀಗೆ ಅನೇಕ ಲೆಕ್ಕಾಚಾರಗಳಿವೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಯುದ್ಧಗಳು ನಡೆದರೂ ಅದರಲ್ಲಿ ಪ್ರಾಣ ಕಳೆದುಕೊಳ್ಳುವುದು ಬಡವರ ಮಕ್ಕಳೇ.

Writer - ಡಾ. ಎಂ. ವೆಂಕಟಸ್ವಾಮಿ

contributor

Editor - ಡಾ. ಎಂ. ವೆಂಕಟಸ್ವಾಮಿ

contributor

Similar News