ಪುತ್ತೂರು: ವಸತಿ ಸಮುಚ್ಚಯದ ಮಹಡಿಯಿಂದ ಬಿದ್ದು ಗಾಯಗೊಂಡಿದ್ದ ಬಾಲಕ ಮೃತ್ಯು

Update: 2022-08-06 05:21 GMT
ಸುಶಾನ್ ರೈ

ಪುತ್ತೂರು: ಬೊಳುವಾರಿನ ವಸತಿ ಸಮುಚ್ಚಯದ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದ ಪ್ರೌಢಶಾಲೆ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಕೆನರಾ ಬ್ಯಾಂಕ್‍ನ ನಿವೃತ್ತ ಮ್ಯಾನೇಜರ್, ಬೊಳುವಾರು ಶ್ರೀ ದುರ್ಗಾಪರಮೇಶ್ವರಿ ಉಳ್ಳಾಲ್ತಿ ಮಲರಾಯ ಕ್ಷೇತ್ರದ ವಿಶ್ವಸ್ಥ ಮಂಡಳಿಯ ಮನೋಹರ್ ರೈ ಎಂಬವರ ಪುತ್ರ, ಪುತ್ತೂರಿನ ಸುದಾನ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಸುಶಾನ್ ರೈ(15) ಮೃತ ಬಾಲಕ.

ಶುಕ್ರವಾರ ಸಂಜೆ ಶಾಲೆ ಬಿಟ್ಟ ಬಳಿಕ ಮನೆಗೆ ತೆರಳದೆ ಈತ ಮನೆಯ ದಾರಿಯಲ್ಲಿರುವ ವಸತಿ ಸಮುಚ್ಚಯಕ್ಕೆ ತೆರಳಿದ್ದು, ಸಮುಚ್ಚಯದ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದ.

ಘಟನೆ ನಡೆದ ತಕ್ಷಣ ಸ್ಥಳೀಯರು ಸೇರಿ ಗಾಯಾಳು ಬಾಲಕನನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆತಂದಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ರಾತ್ರಿ ವೇಳೆಗೆ ಆತ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News